
ಪುರಸಭೆ ಕುಮಟಾ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯವನ್ನು ಹೊನ್ನಾವರ ಪ.ಪಂ ವ್ಯಾಪ್ತಿಯ ಘನತ್ಯಾಜ್ಯ ಘಟಕದಲ್ಲಿ ತಾತ್ಪೂರ್ತಿಕವಾಗಿ ವಿಲೇವಾರಿ ಮಾಡುವ ಕುರಿತು ಜಿಲ್ಲಾಧಿಕಾರಿಗಳ ಸೂಚನೆಯ ಕುರಿತು ಪಟ್ಟಣ ಪಂಚಾಯಿತಿಯ ವಿಶೇಷ ಸಾಮಾನ್ಯ ಸಭೆ ಪ.ಪಂ ಸಭಾಭವನದಲ್ಲಿ ಪ.ಪಂ ಅಧ್ಯಕ್ಷೆ ಜೈನಾಬಿ ಸಾಬ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.
ಸಭೆ ಆರಂಭವಾಗುತ್ತಿದ್ದಂತೆ ಪ.ಪಂ ನಲ್ಲಿ ಠರಾವಿನ ಮೂಲ ಪ್ರತಿಯ ಫೈಲ್ ಸಭೆಗೆ ತರದೇ ಆರಂಭಿಸಿದ್ದು ಪ.ಪಂ ಸದಸ್ಯ ನೀಲಕಂಠ ನಾಯ್ಕ ಮಾತನಾಡಿ ಠರಾವಿನ ಮೂಲ ಪ್ರತಿಯಿಲ್ಲದೇ ಸಭೆ ಕರೆದಿದ್ದೀರಿ. ಇದಕ್ಕೆ ಸಭೆಯೆನ್ನುತ್ತಾರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕಾಲ ಪೈಲ್ ಹುಡುಕಲು ಸಮಯ ವ್ಯಯ ಮಾಡಲಾಯಿತು. ನಂತರ ಆರಂಭವಾದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಹೊನ್ನಾವರ ಪ.ಪಂ ಸದಸ್ಯರು ಠರಾಯಿಸಿ ಕಳುಹಿಸಿದ ಠರಾವಿಗೆ ಜಿಲ್ಲಾಧಿಕಾರಿಗಳು ಆಮಾನತು ಕ್ರಮ ಕೈಗೊಳ್ಳಲು ಸೂಚಿಸಿದ್ದನ್ನು ವಿರೋಧಿಸಲಾಯಿತು. ಪ.ಪಂ ಗೌರವಾನ್ವಿತ ಸದಸ್ಯರ ತೀರ್ಮಾನಕ್ಕೆ ಅಗೌರವ ಸೂಚಿಸಿದಂತಾಗಿದೆ. ಅವರು ತಮ್ಮ ಅಧಿಕಾರವನ್ನು ಉಪಯೋಗಿಸಿ ಹೊನ್ನಾವರ ಘನ ತ್ಯಾಜ್ಯ ಘಟಕದಲ್ಲಿ ತಾತ್ಕಾಲಿಕವಾಗಿ ಹಾಕಲು ಸೂಚಿಸಿದ್ದು ನಮ್ಮ ವಿರೋಧವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕುಮಟಾ ಪುರಸಭೆಯ ಅಧ್ಯಕ್ಷರು ಹಾಗೂ ಹೊನ್ನಾವರ ಪ.ಪಂ ಅಧ್ಯಕ್ಷರು ಮತ್ತು ಸದಸ್ಯರ ಸಮ್ಮುಖದಲ್ಲಿ ಸಭೆ ನಡೆಸಲಾಗಿತ್ತು. ನಂತರ ಸೂಚನಾ ಪತ್ರದಲ್ಲಿ ಕುಮಟಾ ಪುರಸಭೆ ದೀವಗಿಯ 108/1 ಅ ಸರ್ವೇ ನಂ 5 ಎಕರೆ ಪ್ರದೇಶದಲ್ಲಿ ಘನತ್ಯಾಜ್ಯ ನಿರ್ಮಿಸಲಾಗಿತ್ತು. ಆದರೆ ಗ್ರಾಮಸ್ತರು ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದು ಹಸಿರು ಪೀಠ ಚನೈದಲ್ಲಿ ಪ್ರಕರಣ ನಡೆಯುತ್ತಿದೆ. ಕುಮಟಾ ಭಾಗದ ಘನತ್ಯಾಜ್ಯ ವಸ್ತುವನ್ನು ವಿಲೇವಾರಿ ಮಾಡಲಾಗದೇ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಸಮಸ್ಯೆ ಉಂಟಾಗಿರುವುದರಿಂದ ಹೊನ್ನಾವರ ಘಟಕದಲ್ಲಿ ತಾತ್ಕಾಲಿಕವಾಗಿ ವಿಲೇವಾರಿ ಮಾಡಲು ಸೂಚಿಸಿದರು. ಹೊನ್ನಾವರ ಪ.ಪಂ ಸದಸ್ಯರು ಇದಕ್ಕೆ ವಿರೋಧಿಸಿ ಠರಾವು ಪ್ರತಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿತ್ತು. ಅದನ್ನು ಅಮಾನತುಗೊಳಿಸುವುದು ನಮಗೆಲ್ಲಾ ತಿರಸ್ಕರಿಸಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊನ್ನಾವರ ಪ.ಪಂ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಹೊನ್ನಾವರ ಘಟಕಕ್ಕೆ ಕುಮಟಾ ತ್ಯಾಜ್ಯವನ್ನು ಸಮ್ಮತಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಾಧಿಕಾರಿ ಅರುಣ ನಾಯ್ಕ ಮಾತನಾಡಿ ಜಿಲ್ಲಾಧಿಕಾರಿಗಳು ಫೆ.9 ರಂದು ಪ.ಪಂ ಸದಸ್ಯರು ಸಭೆ ನಡೆಸಿ ಕುಮಟಾ ಘನತ್ಯಾಜ್ಯವನ್ನು ಹಾಕಲು ವಿರೋಧಿಸಿದ್ದಾರೆ ಎಂದು ತಿಳಿಸಿದ್ದೇನೆಯೇ ಹೊರತು ಸಹಮತ ವ್ಯಕ್ತಪಡಿಸಿಲ್ಲ ಎಂದರು. ಕುಮಟಾ ದೀವಗಿಯ ಗ್ರಾಮಸ್ತರಿಗೆ ಮನವೊಲಿಸಿ ನ್ಯಾಯಾಲಯದ ಪ್ರಕರಣವನ್ನು ಹಿಂಪಡೆಯಬೇಕಾಗಿತ್ತು. ಆದರೆ ತಮ್ಮ ಅಧಿಕಾರ ಬಳಸಿ ಹೊನ್ನಾವರ ಘಟಕದಲ್ಲಿ ಕುಮಟಾ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಸಮಂಜಸವಲ್ಲ ಎಂದು ಸದಸ್ಯರುಗಳಾದ ನೀಲಕಂಠ ನಾಯ್ಕ, ರವಿ ನಾಯ್ಕ, ನಾಗೇಶ ಮೇಸ್ತ ತೀವ್ರ ವಿರೋಧ ವ್ಯಕ್ತಪಡಿಸಿದರು. ಪ.ಪಂ ಕಾನೂನು ಸಲಹೆಗಾರರಿಗೆ ಜಿಲ್ಲಾಧಿಕಾರಿಗಳ ಪತ್ರ ತೋರಿಸಿ ಸಲಹೆ ಕೇಳಬೇಕಾಗಿತ್ತು. ಅದನ್ನು ಯಾಕೆ ಮಾಡಲಿಲ್ಲ ಎಂದು ನೀಲಕಂಠ ನಾಯ್ಕ ಪ್ರಶ್ನಿಸಿದರು. ಕಾನೂನು ಸಲಹೆಗಾರರಿಗೆ ಸಂಪರ್ಕಿಸಿದರೂ ಅವರು ಸ್ಪಂದಿಸಿಲ್ಲ ಎಂದು ಪ.ಪಂ ಅಧ್ಯಕ್ಷೆ ಜೈನಾಬಿ ಸಾಬ್ ತಿಳಿಸಿದರು.
ಹೊನ್ನಾವರ ಘನತ್ಯಾಜ್ಯ ಘಟಕದಲ್ಲಿ ಕುಮಟಾದ ತ್ಯಾಜ್ಯವನ್ನು ತಾತ್ಕಾಲಿಕವಗಿ ವಿಲೇವಾರಿ ಮಾಡಲು ಆದೇಶಿಸಿದ ಜಿಲ್ಲಾಧಿಕಾರಿಗಳು ಆದೇಶವನ್ನು 15 ದಿನದೊಳಗೆ ಹಿಂಪಡೆಯಬೇಕು. ಇಲ್ಲವಾದಲ್ಲಿ ಸಾರ್ವಜನಿಕರ ಜೊತೆಗೂಡಿ ಉಗ್ರ ಹೋರಾಟ ಮಾಡಲಾಗಹುವುದು. ಪ.ಪಂ ವತಿಯಿಂದ ನ್ಯಾಯಾಲಯದ ಮೊರೆಹೋಗಿ ಜಿಲ್ಲಾಧಿಕಾರಿಗಳ ಆದೇಶಕ್ಕೆ ತಡೆಯಾಜ್ಞೆ ತರಲು ಹೋರಾಟ ರೂಪಿಸಲಗುವುದು ಎಂದು ಎಲ್ಲಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಪ.ಪಂ ಸದಸ್ಯ ರವಿ ನಾಯ್ಕ ಮಾತನಾಡಿ ಜಿಲ್ಲಾಧಿಕಾರಿಗಳ ಆದೇಶದ ಹಿಂದೆ ಅಧಿಕಾರಿಗಳ, ರಾಜಕಾರಣಿಗಳ ಕುಮ್ಮಕ್ಕು ಇದೆ. ಹೊನ್ನಾವರ ಘನತ್ಯಾಜ್ಯ ಘಟಕ ವೈಜ್ಞಾನಿಕವಾಗಿ ರೂಪುಗೊಳ್ಳಲಿ ಎಂದರು.
ಪ.ಪಂ ಉಪಾಧ್ಯಕೆ ಶರಾವತಿ ಮೇಸ್ತ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ ಮೇಸ್ತ, ಸದಸ್ಯರಾದ ಎಸ್.ಎಂ.ನಾಯ್ಕ, ತಾರಾ ಕುಮಾರಸ್ವಾಮಿ, ಸಿ.ಜಿ.ನಾಯ್ಕ, ಜಯಶ್ರೀ ನಾಯ್ಕ, ಅಶೋಕ ನಾಯ್ಕ, ಮಂಜುನಾಥ ಖಾರ್ವಿ, ತುಳಸಿದಾಸ ಪುಲ್ಕರ್, ದಾಮೋದರ ಮೇಸ್ತ, ಬಾಳಾ ಬಾಳೇರಿ, ಇರ್ಫಾನ್ ಶೇಖ್, ಜೋಸ್ಪಿನ್ ಡಯಾಸ ಸಭೆಯಲ್ಲಿ ಪಾಲ್ಗೊಂಡಿದ್ದರು.
-gaju
Leave a Comment