ಗೋಕರ್ಣ : ಬೀಡಾಡಿ ನಾಯಿಗಳ ಸಂಖ್ಯೆ ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಓಂ ಬೀಚ್ ಹೊಟೆಲ್ ಮಾಲೀಕರ ಯೂನಿಯನ್ ಮತ್ತು ಜರ್ಮನಿಯ ಸ್ವಯಂ ಸೇವಕಿ ಡೆನಿಶ ದಾಸ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯತ ಗೋಕರ್ಣದ ಸಹಕಾರದೊಂದಿಗೆ ಬೆಂಗಳೂರಿನ ಸರ್ವೋದಯ ಸೇವಾಸಂಸ್ಥೆಯ ನುರಿತ ತಜ್ಞ ವೈದ್ಯರಿಂದ ಗೋಕರ್ಣದಲ್ಲಿ ಮಾ. 6 ರಿಂದ ಒಂದು ವಾರಗಳ ಕಾಲ ಉಚಿತ ಬೆಕ್ಕು ಮತ್ತು ಬೀಡಾಡಿ ನಾಯಿಗಳ ಸಂತಾನಹರಣ ಶಿಬಿರ ಆರಂಭಗೊಳ್ಳಲಿದ್ದು, ಮಂಗಳವಾರ ಶಿಬಿರದ ಪೂರ್ವಭಾವಿಯಾಗಿ ಓಂ ಬೀಚ್ ಸ್ವಸ್ವರ ರೆಸಾರ್ಟ ಆವಾರದಲ್ಲಿ ಸಭೆ ನಡೆಸಲಾಯಿತು.
7 ದಿನಗಳ ಕಾಲ ನಡೆಯಲಿರುವ ಈ ಶಿಬಿರದಲ್ಲಿ 250 ಬೆಕ್ಕು ಹಾಗೂ ಬೀಡಾಡಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನೆರವೇರಿಸಲಿದ್ದು ಓಂ ಬೀಚ್ ಹೋಟೆಲ್ ಮಾಲೀಕರ ಸಂಘ ಮತ್ತು ಸ್ವಯಂ ಸೇವಕಿ ಜರ್ಮನಿಯ ಡೆನಿಶ ದಾಸ ಇದರ ಸಂಪೂರ್ಣ ವೆಚ್ಚ ಭರಿಸಲಿದ್ದಾರೆ.
ಖಾಸಗಿ ನಾಯಿ ಹಾಗೂ ಬೆಕ್ಕುಗಳ ಸಂತಾನಹರಣ ಚಿಕಿತ್ಸೆ ಮಾಡಲಿಚ್ಚಿಸುವವರು ಮುಂಗಡವಾಗಿ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ. ಈ ಬಗ್ಗೆ ವಿಷೇಶ ಮಾಹಿತಿಗಾಗಿ ಸುಬೋದ ಶೆಟ್ಟಿ (9972381649) ಅವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ಇಲ್ಲಿನ ಸ್ವಸ್ವರ ರೆಸಾರ್ಟ ಆವಾರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸರ್ವೋದಯ ಸೇವಾ ಸಂಸ್ಥೆಯ ಮುಖ್ಯಸ್ಥರಾದ ವಿನಯ ಮೋರೆ, ಜರ್ಮನಿಯ ಸ್ವಯಂ ಸೇವಕಿ ಡೆನಿಶ ದಾಸ, ಸಾಮಾಜಿಕ ಕಾರ್ಯಕರ್ತರಾದ ಲೀಸಾ ಪೂಜಾರಿ, ಸ್ವಸ್ವರ ರೆಸಾರ್ಟನ ಸಾರ್ವಜನಿಕ ಸಂಪರ್ಕಾಧಿಕಾರಿ ಸುಭೋದ ಶೆಟ್ಟಿ, ಸ್ವಸ್ವರ ರೆಸಾರ್ಟನ ಜನರಲ್ ಮ್ಯಾನೇಜರ್ ಮಿನಿ ಚಂದನ್, ಓಂ ಬೀಚ್ ಹೊಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸುಕ್ರು ಗಣೇಶ ಗೌಡ, ಉಪಾಧ್ಯಕ್ಷ ಸುಕ್ರು ಗೌಡ, ಕಾರ್ಯದರ್ಶಿ ಗೋವಿಂದ ಗೌಡ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
-pushpahas bastikar
Leave a Comment