
ಹೊನ್ನಾವರ ಘನತ್ಯಾಜ್ಯ ಘಟಕದಲ್ಲಿ ಕುಮಟಾ ಪುರಸಭೆಯ ತಾತ್ಕಾಲಿಕವಾಗಿ ಕಸ ವಿಲೇವಾರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದು, ಮಂಗಳವಾರ ಕುಮಟಾ ಪುರಸಭೆಯ ಕಸವಿಲೇವಾರಿ ವಾಹನ ತಡೆದು ಹೊನ್ನಾವರ ಪ.ಪಂ ಸದಸ್ಯರು ಹಾಗೂ ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟಿಸಿದ್ದರು. ಸ್ಥಳಕ್ಕೆ ಶಾಸಕಿ ಶಾರದಾ ಶೆಟ್ಟಿ ಭೇಟಿ ನೀಡಿ ಕುಮಟಾ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಹೊನ್ನಾವರದಲ್ಲಿ ಮಾಡಲು ತಮ್ಮ ವಿರೋಧವಿದೆ. ಜಿಲ್ಲಾಧಿಕಾರಿಗಳು ಹೊನ್ನಾವರ ಪ.ಪಂ ಸದಸ್ಯರ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಮನವರಿಕೆ ಮಾಡಿ ನಂತರ ಆದೇಶ ನೀಡಬೇಕಾಗಿತ್ತು ಎಂದು ತಿಳಿಸಿದರು. ಸಾರ್ವಜನಿಕರ ಪ್ರತಿಭಟನೆಯಿಂದ ಕಸದ ವಾಹನಗಳನ್ನು ಕುಮಟಾಕ್ಕೆ ವಾಪಾಸ ಕಳುಹಿಸಲಾಗಿತ್ತು.
ಬುಧವಾರ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಅಧ್ಯಕ್ಷತೆಯಲ್ಲಿ ಹೊನ್ನಾವರ ಪ.ಪಂ ಸಭಾಭವನದಲ್ಲಿ ಕುಮಟಾ ಪುರಸಭೆಯ ಅಧ್ಯಕ್ಷ, ಸದಸ್ಯರು ಮತ್ತು ಸ್ಥಳೀಯ ಅಧಿಕಾರಿಗಳು ಹಾಗೂ ಹೊನ್ನಾವರ ಪ.ಪಂ ಅಧ್ಯಕ್ಷ ಸದಸ್ಯರು ಹಾಗೂ ತಾಲೂಕಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಯಿತು.
ಜಿಲ್ಲಾಧಿಕಾರಿ ಮಾತನಾಡಿ ಕುಮಟಾದ ದೀವಗಿಯಲ್ಲಿ ಘನತ್ಯಾಜ್ಯ ಘಟಕ ಸ್ಥಾಪಿಸಲು ನಿರ್ಣಯಿಸಲಾಗಿತ್ತು. ಸಾರ್ವಜನಿಕರು ಹೈಕೋರ್ಟ್ ತಡೆಯಾಜ್ಞೆ ತಂದಿದ್ದರು. ಈ ಪ್ರಕರಣ ಹಸಿರು ನ್ಯಾಯಪೀಠದಲ್ಲಿ ಇತ್ತು. ಸುಪ್ರೀಂಕೋರ್ಟ್ ಆದೇಶದನ್ವಯ ಕುಮಟಾದಲ್ಲಿ ಸೂಕ್ತ ಸ್ಥಳವಿಲ್ಲದ್ದರಿಂದ ತಾತ್ಕಾಲಿಕವಾಗಿ ಹೊನ್ನಾವರ ಘಟಕದಲ್ಲಿ ಕುಮಟಾದ ಘನತ್ಯಾಜ್ಯವನ್ನು ಹಾಕಲು ಆದೇಶಿಸಲಾಗಿತ್ತು. ಈ ಬಗ್ಗೆ ಹೊನ್ನಾವರ ವಲಯ ಅರಣ್ಯಾಧಿಕಾರಿ ವಸಂತ ರೆಡ್ಡಿ ಹಾಗೂ ನಗರ ಅಭಿವೃದ್ಧಿ ಕೋಶದ ಅಭಿಯಂತರ್ ಆರ್.ಪ.ನಾಯ್ಕ ವಿವರ ನೀಡುತ್ತಾರೆ ಎಂದು ತಿಳಿಸಿದರು.
ಅರಣ್ಯಾಧಿಕಾರಿ ವಸಂತ ರೆಡ್ಡಿ ಮಾತನಾಡಿ ಕಳೆದ ಫೆ.8 ರಂದು ಹಸಿರು ನ್ಯಾಯ ಪೀಠ ತೀರ್ಪು ನೀಡಿತ್ತು. ಕುಮಟಾದ ಘನತ್ಯಾಜ್ಯ ವಿಲೇ ವಾರಿಮಾಡುವ ಸ್ಥಳ ಗುಡ್ಡದ ಎತ್ತರ ಪ್ರದೇಶದ ಅರಣ್ಯ ಭೂಮಿಯಲ್ಲಿದ್ದು, ಅಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡಬಾರದು ಎಂದು ತೀರ್ಪಿನಲ್ಲಿ ತಿಳಿಸಿದೆ. ಅದೇ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡಿದರೆ ನ್ಯಾಯಾಲಯ ನಿಂದನೆ ಆರೋಪದಡಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ನ್ಯಾಯಾಲ ಸೂಚಿಸಿದೆ. ಕುಮಟಾದಲ್ಲಿ ಸ್ಥಳದ ಅಭಾವವಿರುವುದರಿಂದ ಹೊನ್ನಾವರಕ್ಕೆ ತಾತ್ಕಾಲಿಕವಾಗಿ ಕುಮಟಾ ಕಸ ವಿಲೇವಾರಿಗೆ ಆದೇಶಿಸಲಾಗಿದೆ ಎಂದರು.
ನಗರ ಅಭಿವೃದ್ಧಿ ಕೋಶದ ಅಭಿಯಂತರ್ ಆರ್.ಪ.ನಾಯ್ಕ ಮಾತನಾಡಿ ಜಿಲ್ಲೆಯಲ್ಲಿ ಕಸವಿಲೇವಾರಿಗೆ ಕುಮಟಾ ಮತ್ತು ದಾಂಡೇಲಿಯಲ್ಲಿ ಸ್ಥಳದ ಸಮಸ್ಯೆ ಉಂಟಾಗಿದ್ದು, ದಾಂಡೇಲಿಯ ಸಮಸ್ಯೆ ಬಗೆಹರಿಸಲಾಗಿದೆ. ಆದರೆ ಕುಮಟಾದ ದೀವಗಿಯಲ್ಲಿ 10 ಎಕರೆ ಪ್ರದೇಶ ಘನತ್ಯಾಜ್ಯ ಘಟಕ ನಿರ್ಮಿಸಲು ಕಂಪೌಂಡ್ ಮಾಡಲು ಸಿದ್ಧವಾದಾಗ ಪರಿಸರ ಮಾಲಿನ್ಯವಾಗುತ್ತದೆ ಎಂದು ಸಾರ್ವಜನಿಕರು ಹೈಕೋರ್ಟ್ ಪ್ರಕರಣ ದಾಖಲಿದ್ದರು. ಆದರೂ ಕುಮಟಾದಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದ್ದು ಗ್ರಾಮಸ್ಥರು ಪರಿಸರಮಾಲಿನ್ಯ ಉಂಟಾಗಿದ್ದು ಕೋರ್ಟ್ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಸೂಚಿಸಿ ತಿಳಿಸಿದ್ದರಿಂದ ತಾತ್ಕಾಲಿಕವಾಗಿ ಹೊನ್ನಾವರ ಘಟಕಕ್ಕೆ ಕಸ ವಿಲೇವಾರಿಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಹೊನ್ನಾವರ ಘಟಕದಲ್ಲಿ ಮುಂದಿನ 60 ವರ್ಷಗಳ ಕಾಲ ಕಸ ವಿಲೇವಾರಿ ಮಾಡಲು ಸ್ಥಳಾವಕಾಶವಿದೆ ಎಂದು ಸಮೀಕ್ಷೆ ಮಾಡಲಾಗಿದೆ. ಈ ಘಟಕದಲ್ಲಿ ಕಸ ವಿಲೇವಾರಿ ಮಾಡುವುದರಿಂದ ಯಾವುದೇ ದುರ್ವಾಸನೆ ಬರದಂತೆ ಕ್ರಮ ಕೈಗೊಳ್ಳಲಾಗುವುದು. ಅದರ ನಿರ್ವಹಣೆಯನ್ನು ಕುಮಟಾ ಪುರಸಭೆ ನೋಡಿಕೊಳ್ಳುತ್ತದೆ. ಇದು ಶಾಶ್ವತ ವಿಲೇವಾರಿ ಅಲ್ಲ. 2 ತಿಂಗಳುಗಳ ಕಾಲ ಅವಕಾಶ ನೀಡಿ. ದೊಡ್ಡ ಮನಸ್ಸಿನಿಂದ ವಿಚಾರ ಮಾಡಿ ಸಹಕರಿಸಬೇಕು ಎಂದು ಕೋರಿದರು.
ನೀಲಕಂಠ ನಾಯ್ಕ ಮಾತನಾಡಿ ಹಿಂದೆ ಕರ್ಕಿ ಪಂ ಮತ್ತು ಸಾರ್ವಜನಿಕರ ಮನವೊಲಿಸಿ ಘನತ್ಯಾಜ್ಯ ಘಟಕ ಕಷ್ಟಪಟ್ಟು ನಿರ್ಮಿಸಿದ್ದೆವು. ಕುಮಟಾದಲ್ಲಿ ಅನೇಕ ಕಡೆ ಅರಣ್ಯ ಭೂಮಿ ಇದೆ. ಅಲ್ಲಿ ಎಲ್ಲಾದರೂ ಕುಮಟಾ ಘನತ್ಯಾಜ್ಯ ನಿರ್ಮಿಸಿ ನೀವು ಅಲ್ಲಿಯ ಸ್ಥಳ ಪರಿಶೀಲನೆಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.
ಜಿಲ್ಲಾಧಿಕಾರಿ ಮಾತನಾಡಿ ಬೇರೆ ಜಿಲ್ಲೆಯಲ್ಲಿ ಘನತ್ಯಾಜ್ಯ ವಿಲೇವಾರಿಯಂತೆ ಮಾಡಲು ಚಿಂತನೆ ಮಾಡಿದ್ದೇವೆ. ಕುಮಟಾದಲ್ಲಿ ಬೇರೆ ಜಾಗವನ್ನು ಹುಡುಕುತ್ತಿದ್ದೇವೆ. ಅಞಲ್ಲಿಯವರೆಗೆ ತಾತ್ಕಾಲಿಕವಾಗಿ ಕುಮಟಾ ಕಸ ಹೊನ್ನಾವರದಲ್ಲಿ ವಿಲೆ ಮಾಡಲು ಸಹಕರಿಸಬೇಕು. 60-65 ವರ್ಷ ಕಸ ವಿಲೇವಾರಿ ಮಾಡಿದರೆ ತೊಂದರೆ ಇಲ್ಲ. ಜಾಲಿ ಪುರಸಭೆಯ ಘತ್ಯಾಜ್ಯವನ್ನು ಭಟ್ಕಳಕ್ಕೆ ವಿಲೆ ಮಾಡಲಾಗುತ್ತಿದೆ. ಯಾವುದೇ ಸಮಸ್ಯೆ ಬಾರದಂತೆ ಸೂಕ್ತ ಅಭಿಯಂತರನ್ನು ನಿಯಮಿಸಲಾಗಿದೆ. ಕುಮಟಾ ಪುರಸಭೆಯಲ್ಲಿ 46 ಲಕ್ಷ ರೂ. ಅನುದಾನ ಕಸವಿಲೇವಾರಿಗಾಗಿ ಇದೆ. ಇದನ್ನು ಬಳಸಿಕೊಳ್ಳಿ ಇದರಿಂದ ನಿಮ್ಮ ಪ.ಪಂ ಬಂದ ಅನುದಾನ ಬೇರೆ ಕಾಮಗಾರಿಗೆ ಬಳಸಿಕೊಳ್ಳಲು ಸಹಕಾರಿಯಾಗುತ್ತದೆ. ಜಿಲ್ಲಾಡಳಿತಕ್ಕೆ ಜನಸಾಮಾನ್ಯರ ಬಗ್ಗೆ ಕಾಳಜಿ, ಕಳಕಳಿ ಇದೆ. ಜನಪ್ರತಿನಿಧಿಗಳಿಗೆ ಹಾಗೂ ಜನರಿಗೆ ವಿಷಯದ ಗಂಭೀರತೆ ತಿಳಿಸಲು ಪ್ರಯತ್ನಿಸಿದ್ದೇವೆ. ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕು. ಮನಸ್ಸು, ವಿಚಾರ ಸೀಮಿತಗೊಳಿಸಿಕೊಳ್ಳಬೇಡಿ. ಕುಮಟಾ ಮತ್ತು ಹೊನ್ನಾವರ ಸಹೋದರತ್ವದಲ್ಲಿ ಸಹಬಾಳ್ವೆಯಿಂದ ಬಾಳಿ ಎಂದು ವಿನಂತಿಸಿ ಸಭೆ ಕೊನೆಗೊಳಿಸದರು.
ಸಭೆಯ ನಂತರ ಕನ್ನಡಾಭಿಮಾನಿ ಸಂಘದ ಪ್ರಮುಖರಿಂದ ಜಿಲ್ಲಾಧಿಕಾರಿಗಳಿಗೆ ಹೊನ್ನಾವರದಲ್ಲಿ ಕಸ ವಿಲೇವಾರಿಗೆ ಅವಕಾಶ ನೀಡಬಾರದು ಎಂದು ಮನವಿ ನೀಡಿದರು.
-gaju
Leave a Comment