ಕುಮಟಾ:
ಇಂದು ಕುಮಟಾದ ಹೋಟೆಲ್ ವೈಭವ ಪ್ಯಾಲೇಸ್ ನಲ್ಲಿ ಉತ್ಸವದ ಕುರಿತು ಮಾಧ್ಯಮಗೋಷ್ಟಿ ನಡೆಯಿತು. ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಸುಬ್ರಾಯ ಜಿ. ನಾಯ್ಕ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಹೇವಿಲಂಬಿ ಸಂವತ್ಸರ ಚೈತ್ರ ಶುಕ್ಲ ಪ್ರತಿಪದೆ ಮಂಗಳವಾರ ನಡೆಯಲಿರುವ ಯುಗಾದಿ ಉತ್ಸವದ ಮಹತ್ವ ತಿಳಿಸಿದರು.
ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ್ನು ಉಳಿಸೋಣ, ಬೆಳೆಸೋಣ, ಯುವಕಜನತೆಯನ್ನು ಉತ್ತಮ ಸಂಸ್ಕಾರದೆಡೆಗೆ ಕರೆಯೋಣ. ಹೊಸವರ್ಷವೆಂದರೆ ಡಿಸೆಂಬರ್ 31 ರಾತ್ರಿ, ಜನವರಿ 1 ರ ದಿನ ಸ್ವೆಚ್ಛೆಯಾಗಿ ಸಂಸ್ಕಾರವನ್ನು ಬಿಟ್ಟು ಕುಣಿಯುವುದಲ್ಲ, ಯುಗಾದಿಯ ದಿನದ ಹೊಸವರ್ಷದಲ್ಲಿ ನಾವೆಲ್ಲರೂ ಸಂಘಟಿತರಾಗಿ ದೇವತಾ ಪೂಜೆ, ಸತ್ಸಂಕಲ್ಪ, ಗೃಹಾಲಂಕಾರ, ಬೇವು ಬೆಲ್ಲ ಸ್ವೀಕಾರದೊಂದಿಗೆ ಆಚರಿಸುವ ನಮ್ಮ ಹೊಸ ವರ್ಷವೇ ಯುಗಾದಿ ಎಂದರು.
ನಂತರ ಮಾತನಾಡಿದ ಸಮಿತಿಯ ಸಂಚಾಲಕರಾದ ಶ್ರೀ ಮುರಳೀಧರ ಪ್ರಭು ಕುಮಟಾದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಸಾರ್ವಜನಿಕವಾಗಿ ಯುಗಾದಿ ಉತ್ಸವ ಸಮಿತಿಯವರು ಎಲ್ಲರ ಸಹಕಾರದಿಂದ ಯುಗಾದಿ ಉತ್ಸವವನ್ನು ಆಚರಿಸುತ್ತಾ ಬಂದಿದ್ದೇವೆ. ಈ ವರ್ಷವೂ ದಿನಾಂಕ: 28-03-2017ರ ಮಂಗಳವಾರ ಕುಮಟಾದ ಮಣಕಿ ಮೈದಾನದಲ್ಲಿ ವಿಜ್ರಂಭಣೆಯ ಯುಗಾದಿ ಉತ್ಸವವನ್ನು ಆಚರಿಸುತ್ತಿದ್ದೇವೆ ಎಂದರು. ಜೊತೆಗೆ ದಿನಾಂಕ: 27-03-2017ರಂದು ಅಪರಾಹ್ನ 4.00 ಗಂಟೆಗೆ ಕುಮಟಾದ ಮಹಾಸತಿ ದೇವಸ್ಥಾನದಿಂದ ಕುಮಟಾ ಪಟ್ಟಣದ ಸುತ್ತಲೂ ಯುಗಾದಿ ಉತ್ಸವದ ವ್ಯಾಪಕ ಪ್ರಚಾರಕ್ಕಾಗಿ ಬೈಕ್ ರ್ಯಾಲಿ ಆಯೋಜಿಸಲಾಗಿರುವ ಮಾಹಿತಿ ನೀಡಿದರು.
ನಂತರ ಶ್ರೀ ಜಿ.ಎಸ್.ಹೆಗಡೆ ಮಾತನಾಡಿ ದಿನಾಂಕ: 28-03-2017ರಂದು ಅಪರಾಹ್ನ 3.30ಕ್ಕೆ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನ ದೇವರಹಕ್ಕಲ ಇಲ್ಲಿಂದ ವೈಭವದ ಶೋಭಾಯಾತ್ರೆಯು ಶ್ರೀದೇವಿಯ ಪೂಜೆಯೊಂದಿಗೆ ಪ್ರಾರಂಭವಾಗಿ ವಿವಿಧ ಸಮಾಜದ ಟೆಬ್ಲೋಗಳು, ಹುಲಿವೇಷ, ಚಂಡೆ, ಡೋಲು, ಸುಗ್ಗಿಕುಣಿತ, ಭಾರತಮಾತೆ, ಕೀಲು ಕುದುರೆ, ವಿವಿಧ ಗೊಂಬೆಗಳು, ಬೇಡರ ವೇಷ, ಭಜನಾ ತಂಡ, ಚಕ್ಕಡಿಗಾಡಿ ಮುಂತಾದವುಗಳೊಂದಿಗೆ ಶೋಭಾಯಾತ್ರೆಯು ಪ್ರಾರಂಭವಾಗಿ, ದೇವರಹಕ್ಕಲ, ಸುಭಾಸರಸ್ತೆ, ರಥಬೀದಿರಸ್ತೆ, ಕುಂಭೇಶ್ವರ ರಸ್ತೆ, ನೆಲ್ಲಿಕೇರಿ ಬಸ್ ನಿಲ್ದಾಣ, ವೈಭವ ಹೊಟೆಲ್ ರಸ್ತೆಯ ಮೂಲಕ ಸಾಗಿ ಮಣಕಿ ಮೈದಾನ ತಲುಪಲಿದೆ. ಈ ಶೋಭಾಯಾತ್ರೆಗೆ ಅತಿ ಹೆಚ್ಚಿನ ಜನರು ಬರಬೇಕೆಂದು ಕೇಳಿಕೊಂಡರು.
*ಶ್ರೀ ಶ್ರೀಮದ್ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು*, ದೈವಜ್ಞ ಪೀಠ, ಕರ್ಕಿರವರ ದಿವ್ಯ ಸಾನ್ನಿಧ್ಯದಲ್ಲಿ ಶೋಭಾಯಾತ್ರೆ ಸಭಾ ಕಾರ್ಯಕ್ರಮ, ಭಕ್ತ ಜನರಿಗೆ ಶ್ರಿ ಗುರುಗಳೀಂದ ಆಶೀರ್ವಚನ ದೊರೆಯಲಿದೆ.
ಸಂಜೆ 6.30ಕ್ಕೆ ವೈಭವಾಲಂಕೃತ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ಪ್ರಾರಂಭವಾಗಿ ವೇದಘೋಷ, ಪಂಚಾಂಗ ಶ್ರವಣ, ಬೇವು ಬೆಲ್ಲ ವಿತರಣೆ, ಮಾತಪಿತ ಪೂಜನೆ, ಸಾಧಕರಿಗೆ ಸನ್ಮಾನ, *“ಯುವಕರಿಗಾಗಿ ಯುಗಾದಿ”* ಹೊಸ ವರ್ಷದ ದಿಕ್ಸೂಚಿ ಭಾಷಣಕಾರರಾಗಿ *ಶ್ರೀ ಚಕ್ರವರ್ತಿ ಸೂಲಿಬೆಲೆ* ಮಾರ್ಗದರ್ಶಕರು ಯುವ ಬ್ರಿಗೇಡ್ ಮಾತನಾಡಲಿದ್ದಾರೆ. ನಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಹಾಗೂ ಪ್ರಖ್ಯಾತ ನೃತ್ಯತಂಡಗಳ ದೇಶಭಕ್ತಿಗೀತೆಗಳ ನೃತ್ಯ ಸ್ಪರ್ಧೆ ನಡೆಯಲಿದೆ.
ನಂತರ ನಾಗರಾಜ ನಾಯಕ ತೊರ್ಕೆ ಮಾತನಾಡಿ ಹಿಂದೂಗಳಿಗೆ ಯುಗಾದಿ ಹೊಸವರ್ಷ. ಅಂದು ನಾವೆಲ್ಲರೂ ಬೇವು ಬೆಲ್ಲ ತಿಂದು ಸಿಹಿಯನ್ನು ನಮ್ಮದಾಗಿಸಿಕೊಳ್ಳೋಣ. ಕಹಿಯನ್ನು ಮರೆಯೋಣ ಎಂದರು.
ಈ ಬಾರಿಯ ಯುಗಾದಿ ಸ್ವಾಭಿಮಾನದ ಯುಗಾದಿಯಾಗಲಿ, ಸಂಭ್ರಮದಿಂದ, ಸ್ವಾಭಿಮಾನದಿಂದ ಯುಗಾದಿ ಉತ್ಸವ ಆಚರಿಸೋಣ ಎಂದು ಸೂರಜ ನಾಯ್ಕ ಸೋನಿ ಹೇಳಿದರು.
ಈ ಎಲ್ಲ ಕಾರ್ಯಕ್ರಮಗಳನ್ನು ಯುಗಾದಿ ಉತ್ಸವ ಸಮಿತಿಯವರು ಕುಮಟಾ ತಾಲೂಕಿನ ಎಲ್ಲಾ ಸಂಘಟನೆಗಳ ನೆರವಿನೊಂದಿಗೆ ಸಂಘಟಿಸಿದ್ದು ಯುವ ಬ್ರಿಗೇಡ್ ತಂಡದವರ ವಿಶೇಷ ಸಹಕಾರ, ಎಲ್ಲಾ ಸಮಾಜದ ಜನರ ಸ್ಪಂದನ ಯುಗಾದಿ ಉತ್ಸವಕ್ಕೆ ಹೊಸ ಮೆರಗನ್ನು ನೀಡಿದೆ. ಬನ್ನಿ ಎಲ್ಲರೂ ಒಂದಾಗಿ ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸೋಣ ಎಂದು ಕರೆ ನೀಡಿದರು.
ಮಾಧ್ಯಮಗೋಷ್ಟಿಯಲ್ಲಿ ಯುಗಾದಿ ಉತ್ಸವ ಸಮಿತಿಯ ಹನುಮಂತ ಶಾನಭಾಗ, ಗೋಪಾಲಕೃಷ್ಣ ನಾಯ್ಕ, ಆನಂದ ನಾಯ್ಕ, ರಾಜು ಎಸ್. ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.
-Ganapati Hegde
Leave a Comment