ಹೊನ್ನಾವರ:
ಸರ್ಕಾರದ ಕೆಲಸ ದೇವರ ಕೆಲಸ ಎಂಬ ರೀತಿಯಲ್ಲಿ ಸರ್ಕಾರಿ ಸೇವೆಯಲ್ಲಿ ತೊಡಗಿಕೊಂಡಾಗ ಸಮಾಜಕ್ಕೆ ಒಳಿತಾಗುತ್ತದೆ ಮನಸ್ಸಿಗೂ ಹಿತ ಎಂದು ಹಿರಿಯ ಸಿವಿಲ್ ಜಜ್ಜ ನ್ಯಾಯಾಧೀಶ ಯಶವಂತ ಕುಮಾರ ಅಭಿಪ್ರಾಯಪಟ್ಟರು.
ಅವರು ಹೊನ್ನಾವರ ಜೆ.ಎಮ್.ಎಫ್.ಸಿ. ನ್ಯಾಯಾಲಯದ ಸಿಬ್ಬಂದಿ ಕೆ.ವಿ. ನಾಯ್ಕ ನಿವೃತ್ತರಾದ ಪ್ರಯುಕ್ತ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ನ್ಯಾಯ ಅರಸಿ ಬರುವ ಕಕ್ಷಿದಾರ ತ್ವರಿತ ನ್ಯಾಯ ಪಡೆಯಲು ವಕೀಲರ ಪಾತ್ರದಷ್ಟೇ ನ್ಯಾಯಾಲಯದ ಸಿಬ್ಬಂದಿಗಳ ಪಾತ್ರವೂ ಮುಖ್ಯವಾದುದು ಎಂದ ಅವರು ನ್ಯಾಯಾಂಗ ಇಲಾಖೆಯಲ್ಲಿ ಉತ್ತಮ ಸೇವೆ ನೀಡಿ ನಿವೃತ್ತರಾದ ಕೆ.ವಿ. ನಾಯ್ಕ ಅವರ ನಿವೃತ್ತ ಬದುಕು ನೆಮ್ಮದಿಯಿಂದ ಇರಲಿ ಎಂದು ಹಾರೈಸಿದರು.
ನ್ಯಾಯಾಧೀಶೆ ಎಮ್.ಎಸ್. ಹರಿಣಿ ಮಾತನಾಡಿ ನಾವು ನಮ್ಮ ವೃತ್ತಿಗಳಲ್ಲಿ ನಮ್ಮ ನಮ್ಮ ಕರ್ತವ್ಯ ಅರಿತು ನಡೆದರೆ ಮಾತ್ರ ಉತ್ತಮ ಸೇವೆ ನೀಡಲು ಸಾಧ್ಯ. ದೀರ್ಘಕಾಲ ನ್ಯಾಯಾಲಯದಲ್ಲಿ ದುಡಿದು ನಿವೃತ್ತರಾಗುತ್ತಿರುವ ಕೆ.ವಿ. ನಾಯ್ಕ ಅವರಿಗೆ ಶುಭವಾಗಲಿ ಎಂದರು.
ಬೀಳ್ಕೊಡುಗೆ ಸ್ವೀಕರಿಸಿದ ನಿವೃತ್ತ ಸಿಬ್ಬಂದಿ ಕೆ.ವಿ. ನಾಯ್ಕ ಮಾತನಾಡಿದ ತಾನು ನ್ಯಾಯಾಂಗ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ ಮೂವತ್ತು ವರ್ಷ ಎಂಟು ತಿಂಗಳ ಸುದೀರ್ಘ ಅವಧಿಯ ಸೇವೆಯ ಮೆಲಕು ಹಾಕಿ ತನ್ನ ಸೇವೆಗೆ ಸಹಕರಿಸಿದ ಸಹ ಸಿಬ್ಬಂದಿಗಳ, ನ್ಯಾಯಾಂಗ ಇಲಾಖೆ ಅಧಿಕಾರಿಗಳ, ನ್ಯಾಯಾಧೀಶರ ಸಹಕಾರ ನೆನಪಿಸಿಕೊಂಡರು.
ಸಂಧ್ಯಾ ಮಡಿವಾಳ, ರವಿಕಲಾ ಸಂಗಡಿಗರು ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕೋರ್ಟನ ಸಿಬ್ಬಂದಿ ಮಹಾಲಕ್ಷ್ಮೀ ಹೆಗಡೆ ಪರಿಚಯಿಸಿದರು. ಶಿರಸ್ತೇದಾರ ಎಚ್.ಎಸ್. ಮಂಜುನಾಥ ಕಾರ್ಯಕ್ರಮ ನಿರ್ವಹಿಸಿದರು.
Leave a Comment