ಮುಂಡಗೋಡ:
ಕಾಡಿಗೆ ಬಿಟ್ಟು ಬಂದರೂ ಮತ್ತೆ ಮತ್ತೆ ಜನವಸತಿ ಪ್ರದೇಶಕ್ಕೇ ಬರುತ್ತಿದ್ದ ಜಿಂಕೆ ಮರಿಯೊಂದನ್ನು ಬುಧವಾರ ದಾವಣಗೆರೆ ಬಳಿಯ ಆನಗೋಡ ಪ್ರಾಣಿ ಸಂಗ್ರಹಾಲಯಕ್ಕೆ ಬಿಡಲಾಗಿದೆ.
ಹದಿನೈದು ದಿನಗಳ ಹಿಂದೆ ತಾಲ್ಲೂಕಿನ ವಡಗಟ್ಟಾ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಈ ಜಿಂಕೆ ಮರಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಅದನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೆಲದಿನಗಳವರೆಗೆ ಆರೈಕೆ ಮಾಡಿ, ಚೇತರಿಸಿಕೊಂಡ ನಂತರ ಕಾಡಿಗೆ ಬಿಟ್ಟಿದ್ದರು. ಆದರೆ, ಆನಂತರವೂ ಅದು ಪದೇ ಪದೇ ಜನವಸತಿ ಪ್ರದೇಶದಲ್ಲಿ ಸಂಚರಿಸುವುದು ಕಂಡುಬಂದಿದೆ. ನಾಯಿ ದಾಳಿಗೆ ಇಲ್ಲವೇ ಬೇಟೆಗಾರರಿಗೆ ಬಲಿಯಾಗುವ ಅಪಾಯ ಇರುವುದರಿಂದ ಅದನ್ನು ಪ್ರಾಣಿಸಂಗ್ರಹಾಲಯಕ್ಕೆ ಬಿಡಲಾಯಿತು ಎಂದು ಇಂದೂರ ಉಪವಲಯ ಅರಣ್ಯಾಧಿಕಾರಿ ಬಸವರಾಜ ಪೂಜಾರ್ ತಿಳಿಸಿದರು.
‘ಆನಗೋಡ ಪ್ರಾಣಿ ಸಂಗ್ರಹಾಲಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜಿಂಕೆ, ಕೃಷ್ಣಮೃಗ, ಕಡವೆಗಳು ಇರುವುದರಿಂದ ಅವುಗಳ ಗುಂಪಿನಲ್ಲಿ ಈ ಮರಿಯನ್ನು ಬಿಡಲಾಗಿದೆ. ಮರಿ ಆರೋಗ್ಯದಿಂದ ಓಡಾಡುತ್ತಿದೆ’ ಎಂದು ಅವರು ಹೇಳಿದರು.

Leave a Comment