ಕಾರವಾರ:
ಕರಾವಳಿ ಭಾಗದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಸಿಹಿ ನೀರಿನ ಬಾವಿ ಸೇರಿದಂತೆ ಕೃಷಿ ಭೂಮಿಗಳಿಗೆ ಉಪ್ಪು ನೀರು ನುಗ್ಗುತ್ತಿದ್ದು, ಬರ ಪರಿಸ್ಥಿತಿ ನಡುವೆ ಇದು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ಒಂದು ಮಗ್ಗುಲಲ್ಲಿ ಉಪ್ಪು ನೀರಿನ ಬೃಹತ್ ಆಗರವನ್ನೆ ಹೊಂದಿರುವ ಕರಾವಳಿ ತಾಲೂಕುಗಳು ಇದೀಗ ಅದರಿಂದಲೇ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಸಮುದ್ರದಲ್ಲಿ ಉಬ್ಬರವಿಳತವಾದಾಗ ನದಿ ಮೂಲಕ ಹಿಮ್ಮುಕವಾಗಿ ಹರಿಯುವ ಉಪ್ಪು ನೀರು ಈ ಭಾಗದ ಸಮುದ್ರದಂಚಿನ ಬಾವಿ, ಕೆರೆ ಸೆರಿದಂತೆ ಇನ್ನಿತರ ಸಿಹಿ ನೀರಿನ ಮೂಲಗಳನ್ನು ಸೇರುತ್ತಿದೆ. ಕೃಷಿ ಭೂಮಿಗಳಿಗೆ ನುಗ್ಗುವ ಉಪ್ಪು ನೀರು ಬೆಳೆ ಹಾನಿಗೆ ಕಾರಣವಾಗುತ್ತಿದೆ. ಸಮಸ್ಯೆ ಕಳೆದ ಹಲವು ವರ್ಷಗಳಿಂದ ಇದೆಯಾದರು ಈವರೆಗೂ ಪರಿಹಾರ ಕಂಡಿಲ್ಲ. ಇದರಿಂದ ಜನರು ಪ್ರತಿ ಬಾರಿ ಸಮಸ್ಯೆಗಳ ನಡುವೆ ಬದುಕಬೇಕಾದ ಅನಿವಾರ್ಯತೆ ಎದುರಾಗಿದೆ.
ಕರಾವಳಿಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳ ಕೆಲವೆಡೆ ಕರಾವಳಿ ತೀರದಲ್ಲಿ ಬೇಸಿಗೆಯಲ್ಲಿ ಬಾವಿಗೆ ಉಪ್ಪು ನೀರು ನುಗ್ಗುತ್ತದೆ. ಇದರಿಂದ ಬಾವಿ ನೀರು ಬಳಸಲು ಸಾಧ್ಯವಾಗದೆ ಜನತೆ ನೀರಿಗಾಗಿ ಮೈಲುದ್ದ ಅಲೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಾರವಾರ ತಾಲೂಕಿನ ಘಾಡಸಾಯಿ, ಹಳಗಾ, ಕಿನ್ನರ, ಅಮದಳ್ಳಿಯ ಸಂಕ್ರಿವಾಡ, ಮುದಗಾ, ಚೆಂಡಿಯಾ, ಗೋಕರ್ಣ ಸಮೀಪದ ಕೆಲ ಗ್ರಾಮಗಳು, ಅಂಕೋಲಾ ತಾಲೂಕಿನ ಹಾರವಾಡ, ಅವರ್ಸಾ, ಹಟ್ಟಿಕೇರಿ, ಕುಮಟಾದ ಲುಕ್ಕೇರಿ, ಮಾಸೂರ, ದೇವರಬೋಳೆ, ಕಾಗಾಲ ಮತ್ತಿತರ ಗ್ರಾಮಗಳು, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಕೆಲ ಗ್ರಾಮಗಳಲ್ಲಿ ಉಪ್ಪು ನೀರಿನ ಸಮಸ್ಯೆಯಿಂದ ಜನತೆ ತೀವ್ರ ತೊಂದರೆಗೆ ಒಳಗಾಗಿದ್ದಾರೆ.
ಕರಾವಳಿಯ ವಿವಿಧ ಭಾಗಗಳಲ್ಲಿ ಸಮುದ್ರದಿಂದ ಬರುವ ಉಪ್ಪು ನೀರನ್ನು ತಡೆಯಲು ಬಾಂದಾರ ನಿರ್ಮಾಣ ಮಾಡಲಾಗಿದೆ. ಆದರೆ ಕೆಲವೆಡೆ ಅವು ನಿರ್ವಹಣೆಯಿಲ್ಲದೆ ಹಾಳಾಗಿದ್ದು, ಇನ್ನು ಕೆಲವು ಭಾಗಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಬಾಂದಾರದ ಮೂಲಕವೇ ಉಪ್ಪು ನೀರು ನುಗ್ಗುತ್ತಿದೆ. ಅಲ್ಲದೆ ಇದು ಸಮುದ್ರದಿಂದ ಬಾಂದಾರ್ ಮೂಲಕ ಹಿನ್ನಿರಿನಲ್ಲಿ ಹರಿದು ಬಾವಿ ಸೇರುತ್ತಿದೆ. ಇದು ಸಿಹಿ ನೀರಿನ ಸ್ವಾದವನ್ನು ಹಾಳಾಗಲು ಕಾರಣವಾಗುತ್ತಿದೆ. ಜಿಲ್ಲೆಯ ಕರಾವಳಿ ಭಾಗದಲ್ಲಿ ಉಪ್ಪು ನೀರಿನ ಸಮಸ್ಯೆ ಕಳೆದ ಹಲವು ವರ್ಷಗಳಿಂದ ಇದೆ. ಇದರಿಂದ ಈ ಭಾಗದಲ್ಲಿ ಬೆಳೆ ಬೆಳೆಯಲಾಗುತ್ತಿದ್ದ ಸುಮಾರು 1,600 ಎಕರೆಯಷ್ಟು ಪ್ರದೇಶ ಉಪ್ಪು ನೀರಿನಿಂದ ಪ್ರಯೋಜನಕ್ಕೆ ಬರದಂತಾಗಿದೆ. ಹವಾಮಾನ ವೈಪರೀತ್ಯ, ಮಾಲಿನ್ಯ, ಮಾನವ ಹಸ್ತಕ್ಷೇಪದ ಕಾರತಣದಿಂದಾಗಿ ಈ ರಿತಿ ಸಮಸ್ಯೆ ತಲೆದೂರಲು ಕಾರಣವಾಗಿದೆ.
ಕರಾವಳಿ ಭಾಗದಲ್ಲಿ ಉಪ್ಪು ನೀರಿನ ಸಮಸ್ಯೆಯಿಂದ ಕಡಿಮೆಯಾಗುತ್ತಿರುವ ಕೃಷಿ ಉತ್ಪಾದನೆಯ ಇಳಿಮುಖವನ್ನು ತಡೆಗಟ್ಟಲು ಕೃಷಿ ಇಲಾಖೆ ಯೋಜನೆಯೊಂದನ್ನು ರೂಪಿಸಿದೆ. ತಜ್ಞರಿಂದ ಸಮೀಕ್ಷೆ ನಡೆಸಿ ಉಪ್ಪು ನೀರಿನಿಂದಾಗುವ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ಹಾಗೂ ಪ್ರಯೋಗಗಳ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ಮೂರು ವರ್ಷದ ಯೋಜನೆ ಇದಾಗಿದ್ದು, 2016-17ರ ಬಜೆಟ್-ನಲ್ಲಿ ಇದಕ್ಕಾಗಿ 1 ಕೋಟಿ ರೂ. ಬಿಡುಗಡೆಯಾಗಿದೆ. ಕಾರವಾರದ ಘಾಡಸಾಯಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಳೆದ ಕೆಲ ವರ್ಷಗಳಿಂದ ತೀವ್ರವಾಗಿದೆ. ಅಲ್ಲದೆ ಈ ಭಾರಿ ಮಳೆ ಕೂಡ ಕಡಿಮೆ ಪ್ರಮಾಣದಲ್ಲಿ ಆಗಿದ್ದು, ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಿದೆ. ಜೊತೆಗೆ ಇದ್ದ ನೀರಿಗೂ ಉಪ್ಪು ನೀರು ಮಿಶ್ರಿತವಾಗಿ ತೊಂದರೆಯಾಗಿದ್ದು, ಜಿಲ್ಲಾಡಳಿತ ಕೂಡಲೇ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸಆರ್ವಜನಿಕರು ಆಗ್ರಹಿಸುತ್ತಿದ್ದಾರೆ.
Leave a Comment