ದಾಂಡೇಲಿ:
ಹಳಿಯಾಳ-ಜೊಯಿಡಾ ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಅಭ್ಯರ್ಥಿ ಬಗ್ಗೆ ಯಾವುದೆ ಗೊಂದಲವಿಲ್ಲ. ಪಕ್ಷದ ವರಿಷ್ಟರು ಯಾರನ್ನು ಅಭ್ಯರ್ಥಿಯನ್ನಾಗಿಸಿದರೂ ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಲು ಟೊಂಕಕಟ್ಟಿದ್ದೇವೆ. ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡ ಜಿ.ಆರ್.ಪಾಟೀಲರು ಕ್ಷೇತ್ರದಲ್ಲಿ ಸಂಚರಿಸಿ ತಾನೇ ಅಭ್ಯರ್ಥಿ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಈ ಬಗ್ಗೆ ಯಾವುದೆ ಗೊಂದಲಬೇಡ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜು ಧೂಳಿಯವರು ಹಳಿಯಾಳ-ದಾಂಡೇಲಿ-ಜೋಯಿಡಾ ಬಾ.ಜ.ಪ ಘಟಕಗಳು ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ ಹೇಳಿಕೆಗೆ ತಿರುಗೇಟು ನೀಡಿದರು.
ಅವರು ಗುರುವಾರ ನಗರದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಹಿಂದುತ್ವದ ಆಧಾರದ ಮೇಲೆ ಪಕ್ಷವನ್ನು ಕಟ್ಟುತ್ತಿದ್ದು, ಕಮಲದ ಚಿಹ್ನೆಯಡಿ ಯಾರು ಸ್ಪರ್ಧಿಸಿದರೂ ಕಾಯ ವಾಚಾ ಮನಸ ಶ್ರಮಿಸುತ್ತೇವೆ. ನಮ್ಮಲ್ಲಿ ನಾನು, ಸುನೀಲ ಹೆಗಡೆ, ಜಿ.ಆರ್.ಪಾಟೀಲ, ರೋಶನ್ ನೇತ್ರಾವಳಿ, ಎಸ್.ಕೆ.ಗೌಡ ಸೇರಿ ಬಹಳಷ್ಟು ಆಕಾಂಕ್ಷಿಗಳಿರುವುದು ನಿಜ. ಆದರೆ ನಮ್ಮನ್ನು ನಾವು ಅಭ್ಯರ್ಥಿ ಯೆಂದು ಹೇಳಿಕೊಳ್ಳಲು ಆಗುವುದಿಲ್ಲ. ಒಂದು ಸಿದ್ದಾಂತದಡಿ ನಿಂತಿರುವ ಬಿಜೆಪಿ ಪಕ್ಷ ಎಲ್ಲವನ್ನು ಅಳೆದು ತೂಗಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ. ಪಕ್ಷದ ವರಿಷ್ಟರು ಈವರೇಗೆ ಈ ಕ್ಷೇತ್ರದ ಜೊತೆಗೆ ಯಾವುದೇ ವಿಧಾನ ಸಭಾ ಕ್ಷೇತ್ರಕ್ಕೂ ಅಭ್ಯರ್ಥಿಯನ್ನು ಆಯ್ಕೆ ಮಾಡಿಲ್ಲ. ಜಿ.ಆರ್.ಪಾಟೀಲ ಅವರು ಪಕ್ಷದ ಸಿದ್ದಾಂತವನ್ನು ಮೆಚ್ಚಿ ಪಕ್ಷ ಸೇರಿದ್ದಾರೆ. ಪಕ್ಷದ ಕಾರ್ಯಕರ್ತನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಇದಕ್ಕೆ ಬೇರೆ ರೀತಿಯ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದು ರಾಜು ಧೂಳಿ ಹೇಳಿದರು.
ಬಿಜೆಪಿ ಸೇರಿದ ನಿವೃತ್ತ ಎಸ್.ಪಿ ಜಿ.ಆರ್.ಪಾಟೀಲ ಅವರು ಮಾತನಾಡಿ ಪ್ರಧಾನಿ ನರೇಂದ್ರ ಮೋಧಿಯವರ ಕಾರ್ಯವೈಖರಿಯಿಂದ ಮತ್ತು ಪಕ್ಷದ ಸಿದ್ದಾಂತದಿಂದ ಆಕರ್ಷಿತನಾಗಿ ಬಿಜೆಪಿ ಸೇರಿದ್ದೇನೆ. ಯಾವುದೆ ಸ್ವಾರ್ಥದಿಂದ ಪಕ್ಷ ಸೇರಿಲ್ಲ. ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಪಕ್ಷದ ವರಿಷ್ಟರ ಆದೇಶದಂತೆ ಪಕ್ಷ ಸಂಘಟನೆಯಲ್ಲಿ ನಿರತನಾಗಿದ್ದೇನೆ. ನಾನು ಟಿಕೇಟ್ ಅಕಾಂಕ್ಷಿ ಹೌದು. ಆದರೆ ಪಕ್ಷ ಯಾವ ಅಭ್ಯರ್ಥಿಗೆ ಟಿಕೇಟ್ ನೀಡಿದರೂ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕ ಪ್ರಯತ್ನಿಸುತ್ತೇನೆ ಎಂದ ಅವರು ನಾನು ಪಕ್ಷ ಸೇರ್ಪಡೆಯಾದ ನಂತರದಲ್ಲಿ ಕ್ಷೇತ್ರದ ಬಹುತೇಕ ಪಕ್ಷದ ಮುಖಂಡರನ್ನು ಸಂಪರ್ಕಿಸಿ ಮಾತನಾಡಿದ್ದೇನೆ. ಪಕ್ಷ ಸಂಘಟನೆಯ ಬಗ್ಗೆ ಮನವರಿಕೆ ಮಾಡಿದ್ದೇನೆ. ಆದರೆ ಎಲ್ಲಿಯೂ ನಾನೆ ಅಭ್ಯರ್ಥಿ ಎಂದು ಹೇಳಿಕೊಂಡಿಲ್ಲ ಎಂದು ಜಿ.ಆರ್.ಪಾಟೀಲ ಅವರು ಹೇಳಿದರು.
ಪಕ್ಷದ ಜಿಲ್ಲಾ ಕಾರ್ಮಿಕ ಪ್ರಕೋಷ್ಟ ಸಂಚಾಲಕ ರೋಶನ್ ನೇತ್ರಾವಳಿ ಮಾತನಾಡಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ಎಸ್.ಯೂಡಿಯರಪ್ಪನವರು ಇನ್ನೂ ಈ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಎನ್ನುವುದನ್ನು ಹೇಳಿಲ್ಲ. ನಾವು ಪಕ್ಷದ ಸಿದ್ದಾಂತದಡಿ ಬೆಳೆದುಬಂದವರು. ನಮಗೆ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಇಲ್ಲಿ ಪಕ್ಷವನ್ನು ಯಾರ ಕೈಗೊಂಬೆ ಮಾಡಲು ಬಿಡುವುದಿಲ್ಲ. ಪಕ್ಷದ ಅಭ್ಯರ್ಥಿ ಬಗ್ಗೆ ದಾಂಡೇಲಿ, ಜೊಯಿಡಾ ಮತ್ತು ಹಳಿಯಾಳ ಘಟಕದ ಅಧ್ಯಕ್ಷರುಗಳೆ ಗೊಂದಲ ಮೂಡಿಸುತ್ತಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಟರ ಗಮನಕ್ಕೆ ತರಲಾಗುವುದು. ಇವರುಗಳ ಹೇಳಿಕೆ ಹಾಸ್ಯಾಸ್ಪದವಾಗಿದ್ದು, ಇವರುಗಳನ್ನು ಮಂಪರು ಪರಕ್ಷೆಗೆ ಒಳಪಡಿಸುವುದು ಒಳಿತೆಂದು ಗುಡುಗಿದರು. ನಾನು ಸಹ ಅಕಾಂಕ್ಷಿ ಎಂದ ನೇತ್ರಾವಳಿಯವರು ಪಕ್ಷದಲ್ಲಿ ಬಹಳಷ್ಟು ಆಕಾಂಕ್ಷಿಗಳಿರುವುದು ಸಹಜ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸಲು ಪಕ್ಷದ ಅಧ್ಯಕ್ಷರುಗಳು ಮುಂದಾಗಬೇಕೆಂದು ಕರೆ ನೀಡಿದರು.
ಪಕ್ಷದ ಮುಖಂಡ ಎಸ್.ಕೆ.ಗೌಡ ಅವರು ಪಕ್ಷ ಸೂಚಿಸುವ ಅಭ್ಯರ್ಥಿಯ ಗೆಲುವಿಗೆ ನಾವು ಪ್ರಾಮಾಣಿಕ ಪ್ರಯತ್ನಿಸುತ್ತೇವೆ. ಹಳಿಯಾಳ ಮತ್ತು ದಾಂಡೇಲಿಯ ಪಕ್ಷದ ಅಧ್ಯಕ್ಷರುಗಳ ತಪ್ಪು ತಿಳುವಳಿಕೆಯಿಂದ ಈ ರೀತಿಯ ಹೇಳಿಕೆಗಳು ಬಂದಿದೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ವೀರುಪಾಕ್ಷ ಬಂಗಾರೆ, ಪ್ರಶಾಂತ ಬಸೂರ್ತೆಕರ, ವಿಷ್ಣು ವಾಜವೆ, ದಶರಥ ಬಂಡಿವಡ್ಡರ, ಅಬ್ದುಲ್ ವಹಾಬ ಬನ್ಸಾರಿ, ಕಿರಣ ರಜಾಪೂತ, ಬಾಲಕೃಷ್ಣ ಢಾಪಿ, ನಾಗರಾಜ ಗೌಡ, ಕೃಷ್ಣ ಕೊರ್ವೆಕರ, ರವಿ ಸುಡಕರ, ದೇವಕ್ಕ, ಗಣೇಶ ಶೇಠ್, ಭೀಮಶಿ ಬಾದೋಳಿ, ರಾಧಾ ಇಂಗೋಳೆ, ಕಿಶನ್ ಇಂಗೊಳೆ ಮೊದಲಾದವರು ಉಪಸ್ಥಿತರಿದ್ದರು.
Leave a Comment