ದಾಂಡೇಲಿ:
ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪತ್ರಿಕೆಗಳ ಪಾತ್ರ ಅತ್ಯುನ್ನತವಾದುದು. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ತನ್ನದೆ ಆದ ಶಕ್ತಿ ತುಂಬಿದ ಪತ್ರಿಗಕೆಳು ನಮಗೆಲ್ಲರಿಗೂ ಜ್ಞಾನದಾಹವನ್ನು ನೀಗಿಸುವ ಪ್ರಬಲ ಮಾದ್ಯಮವಾಗಿದೆ. ಪ್ರಬುದ್ದ ರಾಜಕಾರಣಿಯಾದವ ಮಾದ್ಯಮಗಳ ಠೀಕೆ-ಟಿಪ್ಪಣಿಯನ್ನು, ವಿಡಂಬನೆಯನ್ನು ಸಕಾರಾತ್ಮವಾಗಿ ಸ್ವೀಕರಿಸಬೇಕು. ತಮಗೆ ಬೇಕಾದ ಹಾಗೆ ಪತ್ರಕರ್ತ ಬರೆಯಬೇಕೆಂಬ ನಿಲುವಿನಿಂದ ರಾಜಕಾರಣಿಗಳೂ ಸಹ ಹೊರಬರಬೇಕೆಂದು ಯಲ್ಲಾಪುರ ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ನುಡಿದರು.
ಅವರು ದಾಂಡೇಲಿ ಪ್ರೆಸ್ ಕ್ಲಬ್ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಗೌರವ ಸನ್ನಾನ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಪತ್ರಿಕಾ ದಿನಾಚರಣೆಯಂದು ಸಾಧಕರನ್ನು ಗುರುತಿಸಿ ಸನ್ಮಾನಿಸಿದ್ದನ್ನು ಶ್ಲಾಗಿಸಿ ಮಾತನಾಡಿದ ಅವರು ನಮ್ಮ ದೇಶದಲ್ಲಿ ಪತ್ರಿಕೆಗಳು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಬಹಳಷ್ಟು ಕೆಲಸ ಮಾಡಿವೆ. ಅಂದು ಕೈ ಬರಹದ ಪತ್ರಿಕೆಗಳನ್ನು ಮನೆ ಮನೆಗೆ ಹಂಚಿ ಜೈಲು ಸೇರಿದ ದೇಶಪ್ರೇಮಿಗಳಿದ್ದಾರೆ. ತುರ್ತು ಪರಿಸ್ಥಿತಿ ಸೇರಿದಂತೆ ಹಲವಾರು ಸಂದರ್ಭದಲ್ಲಿ ಪತ್ರಿಕೆ ಜಾಗೃತಿ ಮೂಡಿಸುವ ಕೆಲಸ ಮಾಡಿದೆ. ನಮ್ಮ ಜಿಲ್ಲೆಯ ತದಡಿ ಉಷ್ಣ ವಿದ್ಯುತ್ ಸ್ಥಾವರ, ಹಣಕೋಣ ಹೋರಾಟ ಸೇರಿದಂತೆ ಹಲವು ಹೋರಾಟಗಳ ಸಂದರ್ಭದಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸಿದ್ದರ ಫಲವಾಗಿಯೇ ಆ ಯೋಜನೆಗಳು ದೂರವಾಗುವಂತಾಗಿದೆ.
ದೇಶದ ಮಾದ್ಯಮ ತನ್ನದೇ ಆದ ಹೊಣೆಗಾರಿಕೆ ಮತ್ತು ಗಟ್ಟಿತನವನ್ನು ಕಾಪಾಡಿಕೊಂಡು ಬಂದಿದೆ. ಜೊತೆಗೆ ದೇಶದ ಹಲವಾರು ಕ್ರಾಂತಿಕಾರಿ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಈ ದೇಶದ ಎಲ್ಲ ತಲ್ಲಣ ಮತ್ತು ಪಲ್ಲಟಗಳು ಆಗಿರೋದೇ ಪತ್ರಿಕೆ ಮತ್ತು ದೃಷ್ಯ ಮಾದ್ಯಮಗಳ ಮೂಲಕ. ಇಂದು ನಮ್ಮ ದೇಶದ ನಾಲ್ಕನೆಯ ಅಂಗ ಎಂದು ಕರೆಯಲ್ಪಡುವ ಮಾದ್ಯಮ ರಂಗ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿಯಂತ್ರಿಸುವ ಜೊತೆಗೆ ರಕ್ಷಿಸುವ ಕೆಲಸ ಮಾಡುತ್ತಿದೆ. ದಾರಿ ತಪ್ಪುತ್ತಿರುವ ಆಳುವವರನ್ನು ಎಚ್ಚರಿಸುತ್ತಿದೆ. ಮಾದ್ಯಮ ಇರುವುದರಿಂದಲೇ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನೂ ಗಟ್ಟಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಪತ್ರಕರ್ತ ರವಿ ಬೆಳಗೆರೆಯನ್ನು ಬಂಧಿಸುವಂತೆ ಆದೇಶಿಸಿದ್ದ ಶಾಸನ ಸಭೆಯ ನಿರ್ಧಾರವನ್ನು ಖಂಡಿಸಿದರು.
ಮುಖ್ಯ ಅತೀಥಿಗಳಾಗಿದ್ದ ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕೆ ಮಾತನಾಡಿ ದಾಂಡೇಲಿ ಪ್ರೆಸ್ ಕ್ಲಬ್ ಹಾಗೂ ಇಲ್ಲಿಯ ಪತ್ರಕರ್ತರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು. ಮುಖ್ಯ ಅತಿಥಿ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಜಿ. ಗಿರಿರಾಜ ಮಾತನಾಡಿ ಪತ್ರಕರ್ತರು ಅಧ್ಯಯನ ಶೀಲರಾಗಿರಬೇಕು. ನಿತ್ಯದ ವಿದ್ಯಾಮಾನ ತಿಳಿದಿರಬೇಕು. ಜೊತೆಗೆ ಬಹುಮುಖಿ ವ್ಯಕ್ತಿತ್ವವನ್ನು, ಜನಪರ ಚಿಂತನೆಯನ್ನೂ ಹೊಂದಿರಬೇಕು ಎಂದರು.
ದಾಂಡೇಲಿ ಪ್ರೆಸ್ ಕ್ಲಬ್ನ ಅಧ್ಯಕ್ಷ ಗುರುಶಾಂತ ಜಡೆಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ತಮ್ಮ ಬಗ್ಗೆ ಒಳ್ಳೆಯದು ಬಂದಾಗ ಪತ್ರಕರ್ತರನ್ನು ಹೊಗಳುತ್ತಾರೆ. ಅದೇ ಸತ್ಯ ಬರೆದಾಗ ತಪ್ಪನ್ನು ತಿದ್ದಿಕೊಳ್ಳದೇ ಪತ್ರಕರ್ತರನ್ನು ಬಯ್ಯುತ್ತಾರೆ. ಲೋಕದ ಅಂಕುಡೊಂಕನ್ನು ತಿದ್ದುವುದು ಪತ್ರಕರ್ತನ ಕೆಲಸವಾಗಿದೆ ಎಂದರು. ನಗರಸಭಾ ಉಪಾಧ್ಯಕ್ಷ ಅಷ್ಪಾಕ ಶೇಖ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಟಿ.ಆರ್. ಚಂದ್ರಶೇಖರ, ಹಿರಿಯ ಪತ್ರಕರ್ತ ಕೃಷ್ಠಾ ಪಾಟೀಲ, ವಿಜಯ ಸಂದೇಶ ವಾರಪತ್ರಿಕೆಯ ಸಂಪಾದಕಿ ಸುಮಂಗಲಾ ಚಂದ್ರಕಾಂತ ಅಂಗಡಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಟಿ.ಆರ್. ಚಂದ್ರಶೇಖರವರು ಒಗ್ಗಟ್ಟ್ಟು ಇದ್ದಾಗ ಯಶಸ್ಸು ಸಿಗುತ್ತದೆ. ಪತ್ರಕರ್ತರು ಒಗ್ಗಟ್ಟಿನಿಂದ ಇದ್ದು ನಗರದ ಅಭಿವೃದ್ದಿಗೆ ಚಿಂತಿಸಬೇಕು ಎಂದರು. ಸುಮಂಗಲಾ ಅಂಗಡಿಯವರು ಮಾತನಾಡಿ ಮಾದ್ಯಮ ಕ್ಷೇತ್ರದಲ್ಲಿ ಕೆಲಸಮಾಡುವುದೇ ಹೆಮ್ಮೆ. ಪತ್ರಕರ್ತನಾದವ ಪರಿಶುದ್ದನಾಗಿರಬೇಕು. ಈ ಸನ್ಮಾನ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.
ಪ್ರೆಸ್ ಕ್ಲಬ್ ಕಾರ್ಯದರ್ಶಿ ಯು.ಎಸ್. ಪಾಟೀಲ್, ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರೆಸ್ ಕ್ಲಬ್ ಉಪಾಧ್ಯಕ್ಷ ಬಿ.ಎನ್. ವಾಸರೆ ಅತಿಥಿಗಳ ಹಾಗೂ ಸನ್ಮಾನಿತರ ಪರಿಚಯ ಮಾಡಿದರು. ಸಹ ಕಾರ್ಯದರ್ಶಿ ಸಂದೇಶ.ಎಸ್. ಜೈನ್ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ ದಯಾನಂದ ಪವಾರ್ ಸೇರಿದಂತೆ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿದಿಗಳು, ಗಣ್ಯರು ಭಾಗವಹಿಸಿದ್ದರು.
Leave a Comment