ದೇಶದ್ಯಾಂತ ಹೆಸರುವಾಸಿಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಹಣಕೋಣದಲ್ಲಿರುವ ಸಾತೇರಿ ದೇವಿಯೂ ವರ್ಷಕ್ಕೆ ಒಮ್ಮೆ ಮಾತ್ರ ಬಾಗಿಲು ತೆರೆದು ಏಳು ದಿನಗಳ ಕಾಲ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುತ್ತಾಳೆ.
ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿರುವ ದೇವಿಯೂ ಅನಾಧಿ ಕಾಲದಿಂದಲೂ ದೇವಿ ತನ್ನ ಭಕ್ತರನ್ನು ಕಾಪಾಡುತ್ತ ಬಂದಿದ್ದಾಳೆ. ಅಪಾರ ಶಕ್ತಿಯನ್ನು ಹೊಂದಿರುವ ತಾಯಿಯೂ ಚಮಾತ್ಕಾರ ಎಂಬಂತೆ ತಾನಾಗಿಯೇ ಗರ್ಭಗುಡಿಯ ಬಾಗಿಲು ತೆರೆಯುತ್ತಾಳೆಂಬ ನಂಬಿಕೆ ಇಲ್ಲಿದೆ. ಈ ದೇವಿಯ ಶಕ್ತಿ ಹಾಗೂ ಮಹಿಮೆ ಹಲವು ಬಗೆಯ ವೈಶಿಷ್ಠ್ಯದಿಂದ ಕೂಡಿದೆ. ಐತಿಹಾಸಿಕ ಹಿನ್ನಲೆಯುಳ್ಳ ದೇವಿಯ ಜಾತ್ರಾ ಆಚರಣೆ ಹಾಗೂ ಸಂಪ್ರದಾಯಗಳು ವಿಬಿನ್ನವಾಗಿದೆ. ಬಾಗಿಲು ತೆರೆದ ನಂತರ ಏಳು ದಿನಗಳ ಕಾಲ ಕಾರವಾರದಲ್ಲಿ ಹಬ್ಬದ ವಾತಾವರಣವಿರುತ್ತದೆ. ದೇಶದ ನಾನಾ ಭಾಗದಿಂದ ಭಕ್ತರು ಆಗಮಿಸಿ ದೇವಿಯ ಹರಕೆ ತೀರಿಸುತ್ತಾರೆ. ಗೋವಾ, ಮಹಾರಾಷ್ಟ್ರ ಸೇರಿದಂತೆ ದೇಶದ ನಾನಾ ಭಾಗಗಳಿಂದ ಆಗಮಿಸುವ ಭಕ್ತರಿಂದ ಹಣಕೋಣದಲ್ಲಿ ಜಾತ್ರಾ ಸಂಭ್ರಮ ಕಾಣಿಸುತ್ತದೆ. ಸಾತೇರಿ ದೇವಿಯ ಗುಡಿಯ ಸುತ್ತ ಏಳೆಂಟು ದೇವಾಲಯಗಳಿವೆ. ಗ್ರಾಮ ಪುರುಷ, ರಾಮನಾಥ, ಚಣಕಾದೇವಿ, ಮಾಳಾಸಾ ನಾರಾಯಣಿ, ಕಾಳಮೋರ ಚರಣಭಕ್ತ, ಕಠೀಂದ್ರ, ಜೈಲ್ ಪುರುಷ ಮೊದಲಾದ ಗುಡಿಗಳಲ್ಲಿಯೂ ವಿಶೇಷ ಪೂಜೆ ಸಲ್ಲಿಕೆಯಾಗುತ್ತದೆ. ಪರಿವಾರ ದೇವತೆಗಳ ಪೂಜೆಯೂ ಸಂಪ್ರದಾಯಿಕವಾಗಿ ನಡೆಯುತ್ತದೆ.
ವರ್ಷದಲ್ಲಿ ಏಳುದಿನಗಳ ಕಾಲ ಭಕ್ತರಿಗೆ ದರ್ಶನ ನೀಡುವ ಸಾತೇರಿ ದೇವಿಯ ಹಿನ್ನಲೆ ಪೌರಾಣಿಕವಾಗಿದೆ. ಸಾತೇರಿ ದೇವಿ ಹಾಗೂ ಚರಣಕಾ ದೇವಿ ಸಹೋದರಿಯರಾಗಿದ್ದು, ಪ್ರತ್ಯೇಕ ಕಡೆಗಳಲ್ಲಿ ನೆಲೆಸಿ ಜೀವ ಸಂಕುಲದ ರಕ್ಷಣೆಯಲ್ಲಿ ತೊಡಗಿದ್ದರು. ಹಣಕೋಣದಲ್ಲಿ ನೆಲೆಸಿರುವ ಸಾತೇರಿ ದೇವಿಯೂ ಸುತ್ತಲಿನ ಭಕ್ತರ ಇಷ್ಟಾರ್ಥಗಳನ್ನು ನೆರವೆರಿಸಿ, ಕಷ್ಟಗಳನ್ನು ದೂರ ಮಾಡುತ್ತ ಬಂದವಳು. ಬಡ ಜನರ ಮದುವೆ ಅಥವಾ ಇನ್ನಿತರ ಮಂಗಳ ಕಾರ್ಯಗಳಿಗೆ ಅಗತ್ಯವಿರುವ ಒಡವೆಗಳನ್ನು ದೇವಿ ಪೂರೈಸುತ್ತಿದ್ದಳು. ಸಮಾರಂಭಗಳಿಗೆ ತೆರಳುವವರು ಕೂಡ ಚಿನ್ನಾಭರಣದ ಅವಷ್ಯಕತೆಯ ಕುರಿತು ಬೇಡಿಕೊಂಡರೆ ಅದನ್ನು ದೇವಿ ನೀಡುತ್ತಿದ್ದು, ಸಕಾಲದಲ್ಲಿ ಅದನ್ನು ಮರಳಿಸುವ ಸಂಪ್ರದಾಯ ಬೆಳೆದಿತ್ತು. ಹೀಗಿರುವಾಗ ಒಮ್ಮೆ ದೇವಿ ಸ್ನಾನ ಮುಗಿಸಿ ಕೂದಲು ಬಾಚಿಕೊಳ್ಳುತ್ತಿರುವಾಗ ದುಷ್ಟನೊಬ್ಬ ದೇವಿಯ ಮೇಲೆ ವಕ್ರದೃಷ್ಟಿ ಬೀರಿ ಮುನ್ನುಗ್ಗಿದಾಗ ಆತನಿಂದ ರಕ್ಷಣೆ ಪಡೆಯಲು ದೇವಿ ಬಾವಿಗೆ ಹಾರಿದಳು. ಬಾವಿಗೆ ಹಾರಿದ ದೇವಿ ಅಲ್ಲಿಯೇ ಅದೃಶ್ಯಲಾದಳು. ಇದಾದ ಕೆಲ ದಿನಗಳ ನಂತರ ಊರಿನ ಹಿರಿಯರೊಬ್ಬರ ಕನಸಿನಲ್ಲಿ ಕಾಣಿಸಿಕೊಂಡ ಸಾತೇರಿ ದೇವಿ ನಡೆದ ಘಟನೆಯನ್ನು ವಿವರಿಸಿದಳು. ತಾನು ನೆಲೆಸಿದ ಸ್ಥಳದಲ್ಲಿ ಗುಡಿಯನ್ನು ನಿರ್ಮಿಸುವಂತೆ ಆದೇಶಿಸಿದಳು.
ದೇವಿ ನೆಲೆಸಿದ್ದ ಜಾಗದಲ್ಲಿದ್ದ ಬಾವಿಯನ್ನು ಪರಿಶೀಲಿಸಿದಾಗ ದೇವಿಯ ಪಾದುಕೆ ಹಾಗೂ ಹಣಿಗೆ ಕಂಡವು. ತಕ್ಷಣ ಗುಡಿ ನಿರ್ಮಿಸಿದ ಗ್ರಾಮಸ್ಥರು ದೇವಿಯ ಆರಾಧನೆ ಆರಂಭಿಸಿದರು. ಆಗ ವರ್ಷಕ್ಕೆ ಒಮ್ಮೆ ಮಾತ್ರ ಗರ್ಭಗುಡಿಯ ಬಾಗಿಲು ತೆರೆದು ಭಕ್ತರಿಗೆ ದರ್ಶನ ನೀಡುವದಾಗಿ ದೇವಿ ಹಿರಿಯರಿಗೆ ತಿಳಿಸಿದ್ದು, ನಂದನನಾಮ ಸಂವತ್ಸರ ಬಾದ್ರಪದ ಮಾಸ ಶುಕ್ಲಪಕ್ಷದಂದು ಸಾತೇರಿ ದೇವಿ ದರ್ಶನ ನೀಡುತ್ತಾಳೆ. ಇಲ್ಲಿನ ಒಂದೊಂದು ಸಮುದಾಯದವರಿಗೆ ಒಂದೊಂದು ರೀತಿಯ ಜವಾಬ್ದಾರಿಗಳನ್ನು ನೀಡಲಾಗಿದೆ. ಎಲ್ಲ ಸಮುದಾಯದವರೂ ತಮ್ಮ ಜವಾಬ್ದಾರಿಗಳನ್ನು ಸೂಕ್ತವಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ದೇವಿಯ ಭಕ್ತರ ಸಂಖ್ಯೆ ವೃದ್ದಿಸುತ್ತಲೇ ಇದೆ. ತಮ್ಮ ಬೇಡಿಕೆ ಈಡೇರಿದ ನಂತರ ಹರಿಕೆ ತೀರಿಸಲು ದೂರದ ಊರಿನಿಂದ ಭಕ್ತರು ಬರುತ್ತಾರೆ. ಅಗಷ್ಟ್ 29ರ ಮದ್ಯರಾತ್ರಿ 12ಘಂಟೆಗೆ ದೇಯೂ ಗರ್ಭಗುಡಿಯ ಬಾಗಿಲು ತೆರೆಯಲಿದ್ದು, ದೇವಿಯ ಸೇವೆಗಾಗಿ ಹಣಕೋಣ ಗ್ರಾಮ ಸಿದ್ದಗೊಂಡಿದೆ.
Leave a Comment