ಕಾರವಾರ:
ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಸಿಜೆಎಂ ನ್ಯಾಯಾಲಯ ಮೂರುವರೆ ವರ್ಷ ಕಾರಾಗೃಹ ವಾಸ ಮತ್ತು 13000 ರೂ.ದಂಡ ವಿಧಿಸಿ ತೀರ್ಪು ನೀಡಿದೆ.
ಚೆಂಡಿಯಾ ನಿವಾಸಿಯಾದ ಆರೋಪಿ ನರೇಶ ಗೌಡ ಎಂಬಾತ ತನ್ನ ಚಿಕನ್ ಸೆಂಟರ್ ಎದುರು 2015 ರ ಫೆ. 2 ರಂದು ಸಾಯಂಕಾಲ 7.45 ರ ಸುಮಾರಿಗೆ ಬಂದ ಶೊನೂನ್ ಡಿಸೋಜಾ ಎಂಬಾತನನ್ನು ಕ್ಷುಲ್ಲಕ ಕಾರಣಕ್ಕಾಗಿ ಅವಾಚ್ಯ ಶಬ್ಧಗಳಿಂದ ಬೈದಿದ್ದರು. ಚಾಕುವಿನಿಂದ ತಿವಿದು ಗಂಭೀರವಾಗಿ ಗಾಯಗೊಳಿಸಿ ಜೀವ ಬೆದರಿಕೆ ಹಾಕಿದ್ದರ ಕುರಿತು ಪೊಲೀಸ್ ದೂರು ಸಲ್ಲಿಸಲಾಗಿತ್ತು. ಪ್ರಕರಣವನ್ನು ಅಂದಿನ ಪಿಎಸ್ಐ ಗೋವಿಂದ್ರಾಜ ದಾಸರಿ ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಧೀಶ ಶಿವಕುಮಾರ್ ಬಿ. ಅವರು ವಾದ ಪ್ರತಿವಾದ ಆಲಿಸಿ ಆರೋಪಿಗೆ ಒಟ್ಟಾರೆ 3 ವರ್ಷ 6 ತಿಂಗಳ ಕಾರಾಗೃಹ ವಾಸ ಮತ್ತು 13000 ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸಿಜೆಎಂ ನ್ಯಾಯಾಲಯದ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಮಹಾದೇವ ಗಡದ್ ಅವರು ವಾದ ಮಂಡಿಸಿದ್ದರು. ದಂಡದ ಮೊತ್ತದಲ್ಲಿ 10000 ರೂ. ಗಾಯಾಳು ಶೊನೊನ್ ಡಿಸೋಜಾಗೆ ಪಾವತಿಸಲು ನ್ಯಾಯಾಧೀಶರು ಆದೇಶ ನೀಡಿದ್ದಾರೆ.
Leave a Comment