ಕಾರವಾರ: ಕೋಡಿಭಾಗದಲ್ಲಿ ಶನಿವಾರ ಸಂಜೆ ಗಣೇಶ ವಿಸರ್ಜನೆ ವೇಳೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮದ್ಯೆ ತೀವೃ ವಾಗ್ವಾದ ನಡೆಯಿತು.
ಇಲ್ಲಿನ ಕಾಳಿನದಿ ತೀರದಲ್ಲಿ ಪಾರಂಪರಾಗತವಾಗಿ ಗಣೇಶ ವಿಸರ್ಜನೆ ಮಾಡಲಾಗುತ್ತಿದ್ದು, ಈ ಬಾರಿಯೂ ಅಲ್ಲಿಯೇ ವಿಸರ್ಜನೆಗೆ ಅವಕಾಶ ಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದರು. ಆದರೆ, ಕೋಡಿಭಾಗದಲ್ಲಿ ನೂತನವಾಗಿ ಕಾಳಿ ರಿವರ್ ಗಾರ್ಡನ್ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಅಲ್ಲಿ ಗಣಪತಿ ಮೂರ್ತಿ ವಿಸರ್ಜನೆಗೆ ಅವಕಾಶ ನೀಡಲಾಗುವದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಇದೇ ವಿಷಯವಾಗಿ ಗಂಟೆಗಳ ಕಾಲ ವಾಗ್ವಾದ ನಡೆದಿದ್ದು, ಕೆಲ ಜನಪ್ರತಿನಿಧಿಗಳ ಮದ್ಯಸ್ಥಿಕೆಯಲ್ಲಿ ರಾಜಿ ಸಂದಾನ ಪ್ರಯತ್ನ ನಡೆಯಿತು. ಗಣಪತಿ ವಿಸರ್ಜನೆಗಾಗಿ ಕಾಳಿನದಿ ತಟದ ಸಮೀಪ ಟ್ಯಾಂಕ್ ನಿರ್ಮಿಸಲಾಗಿದ್ದು, ಸಾರ್ವಜನಿಕರು ಅಲ್ಲಿ ಮೂರ್ತಿ ವಿಸರ್ಜಿಸಬೇಕು ಎಂದು ಅಧಿಕಾರಿಗಳು ಕೇಳಿಕೊಂಡರು. ಆದರೆ, ಇದಕ್ಕೆ ಒಪ್ಪದ ಸ್ಥಳೀಯರು ಪಾರಂಪರಿಕವಾಗಿ ಗಣೇಶ ಮೂರ್ತಿ ವಿಸರ್ಜನೆ ನಡೆಯುವ ಸ್ಥಳದಲ್ಲಿಯೇ ಅವಕಾಶ ಕೊಡಬೇಕು ಎಂದು ಪಟ್ಟು ಹಿಡಿದರು.
ಕೊನೆಗೆ ಕೆಲ ಶರತ್ತುಗಳ ಅನ್ವಯ ಮೊದಲಿನಿಂದಲೂ ಗಣಪತಿ ವಿಸರ್ಜಿಸುತ್ತಿದ್ದ ಸ್ಥಳದಲ್ಲಿಯೇ ಈ ಬಾರಿ ಗಣಪತಿ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಯಿತು. ಏಕಕಾಲಕ್ಕೆ ತಲಾ 10 ಗಣಪತಿ ವಿಸರ್ಜನೆಗೆ ಮಾತ್ರ ಅವಕಾಶ ನೀಡಿದ ಅಧಿಕಾರಿಗಳು, ಒಂದು ವಿಗ್ರಹದೊಂದಿಗೆ ನಾಲ್ಕು ಮಂದಿಗೆ ಮಾತ್ರ ಒಳ ಪ್ರವೇಶ ಎಂಬ ನಿಯಮ ರೂಪಿಸಿದರು. ಪಟಾಕಿ ಹೊಡೆಯಲು ಅವಕಾಶವಿಲ್ಲ. ಗಲಾಟೆ ನಡೆದಲ್ಲಿ ಶಾಸಕ ಹಾಗೂ ಸ್ಥಳೀಯ ನಾಲ್ಕು ಮಂದಿ ಸದಸ್ಯರ ವಿರುದ್ದ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು. ಉಪ ವಿಭಾಗಾಧಿಕಾರಿ ಶಿವಾನಂದ ಕರಾಳೆ, ತಹಶೀಲ್ದಾರ್ ಜಿ.ಎನ್ ನಾಯ್ಕ, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಗೋಪಾಲ ಬ್ಯಾರೇಟ್ ಇತರರಿದ್ದರು.
Leave a Comment