ಹೊನ್ನಾವರ:
ತಾಲೂಕಿನ ಕೆಳಗಿನೂರು ಗ್ರಾ.ಪಂ ವ್ಯಾಪ್ತಿಯ ಅಭಿತೋಟದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಅಂಗನವಾಡಿ ಕಟ್ಟಡ ಕುಸಿದು ಬಿದ್ದಿದ್ದು ಸರ್ಕಾರಿ ರಜೆಯಿದ್ದ ಕಾರಣ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಅಭಿತೋಟದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಅಂಗನವಾಡಿಯು ಕುಸಿದು ಬಿದ್ದಿದ್ದು ಗಣೇಶ ಚತುರ್ಥಿ ನಿಮಿತ್ತ ಮಕ್ಕಳಿಗೆ ಮೂರು ದಿನಗಳ ಕಾಲ ರಜಾ ಇದ್ದ. ಈ ಅಂಗನವಾಡಿ ಕೇಂದ್ರದಲ್ಲಿ ಐವರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಅದೃಷ್ಟವಶಾತ್ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋಮವಾರ ಬೆಳಿಗ್ಗೆ ಕೆಲ ಪಾಲಕರು ತಮ್ಮ ಮಕ್ಕಳ ಜೊತೆ ಅಂಗನವಾಡಿಗೆ ಧಾವಿಸುತ್ತಿದ್ದಂತೆ ಪಾಲಕರಲ್ಲಿ ತೀವ್ರ ಆಘಾತವುಂಟಾಗಿದ್ದು, ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಟ್ಟಡದ ಮೂರು ಕೋಣೆಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಒಂದು ಕೊಠಡಿ ಸಂಪೂರ್ಣ ನೆಲಸಮಗೊಂಡಿದೆ. ಹೆಂಚು, ಕಟ್ಟಿಗೆ ಸಾಮಾನುಗಳು ಹಾನಿಯಾಗಿವೆ.
ಜನಪ್ರತಿನಿಧಿಗಳ ನಿರ್ಲಕ್ಷ: ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನೆಯಡಿ 1992 ರಲ್ಲಿ ಈ ಕಟ್ಟಡ ನಿರ್ಮಾಣಗೊಂಡಿತ್ತು. ಹಲವಾರು ವರ್ಷಗಳ ಹಿಂದೆ ಮಣ್ಣಿನಿಂದ ನಿರ್ಮಿಸಿದ ಈ ಕಟ್ಟಡ ಕಳೆದ 5 ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿತ್ತು. ಈ ಬಗ್ಗೆ ಶಿಶು ಅಭಿವೃದ್ಧಿ ಇಲಾಖೆ, ಅಂಗನವಾಡಿ ಶಿಕ್ಷಕರು ಸೇರಿ ಪ್ರತಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಅಂಗನವಾಡಿ ಕಟ್ಟಡದ ಅವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸುತ್ತಲೇ ಬಂದಿದ್ದು, ಸಾಕಷ್ಟು ಬಾರಿ ಮನವಿ ನೀಡಲಾಗಿದೆ. ಕಟ್ಟಡದ ಗೋಡೆಗಳು ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿರುವುದಾಗಿಯೂ ತಿಳಿಸಲಾಗಿತ್ತು. ಆದರೆ ಈವರೆಗೂ ಗ್ರಾ.ಪಂ. ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಕಟ್ಟಡದ ಕುರಿತಾಗಿ ಲಕ್ಷ್ಯ ವಹಿಸಿಲ್ಲ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಅಂಗನವಾಡಿಯ ಸುತ್ತ ಗಿಡ-ಗಂಟಿಗಳು, ಕೊಳಚೆ ವಸ್ತುಗಳು ಬೇಕಾಬಿಟ್ಟಿಯಾಗಿ ಮಲೀನವಾಗಿ ಬಿದ್ದಿದೆ. ಪಕ್ಕದಲ್ಲಿಯೇ ಕೆಳಗಿನೂರು ಗ್ರಾಮ ಪಂಚಾಯಿತಿಯಿದ್ದರೂ ಈ ಬಗ್ಗೆ ಗಮನ ಹರಿಸಿಲ್ಲ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಬೇಕು ಎನ್ನುವುದಕ್ಕೆ, ಸರ್ಕಾರ ತಮ್ಮ ಮಕ್ಕಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಿದೆ ಎಂಬುದು ಈ ಸರ್ಕಾರಿ ಶಾಲೆಯಲ್ಲಿರುವ ಅವ್ಯವಸ್ಥೆಯನ್ನು ನೋಡಿದರೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ ಅರ್ಥವಾಗುತ್ತದೆ. ಅಂಗನವಾಡಿ ಪಕ್ಕದಲ್ಲಿ ಹಳ್ಳ ಹರಿದಿದೆ. ಮಳೆಗಾಲದಲ್ಲಿ ನೀರಿನ ರಭಸಕ್ಕೆ ಮಕ್ಕಳಿಗೆ ಅನಾಹುತ ಸಂಭವಿಸುವಂತಿದೆ. ಜವಾಬ್ದಾರಿ ವಹಿಸಬೇಕಾದವರು ಸರ್ಕಾರ ಕೊಡುವ ಸೌಲಭ್ಯವನ್ನು ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಸುಬ್ರಹ್ಮಣ್ಯ ಹೆಗಡೆ, ಶಂಕರ ಗೌಡ, ಸುಶಿಲಾ ಆಚಾರಿ, ನೇತ್ರಾವತಿ ಗೌಡ, ಪಾರ್ವತಿ ಗೌಡ, ದೇವಕಿ ಗೌಡ, ಶಿವಯ್ಯ ಗೌಡ, ವಿಜಯ ಶೇಟ್ ಇತರರು ಆಗ್ರಹಿಸಿದ್ದಾರೆ.
ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸಾಕಷ್ಟು ಬಾರಿ ಅರ್ಜಿ ಕಳುಹಿಸಲಾಗಿದೆ. ಕಟ್ಟಡಕ್ಕೆ ಜಾಗದ ಕೊರತೆ ಇದೆ. ಬಾಡಿಗೆ ಆಧಾರಿತ ಕಟ್ಟಡವೂ ಸಿಗುತ್ತಿಲ್ಲ. ಎರಡು ದಿನದೊಳಗಾಗಿ ಕೆಳಗಿನೂರು ಗ್ರಾ.ಪಂ ಕಟ್ಟಡದಲ್ಲಿ ಮಕ್ಕಳಿಗೆ ಪಾಠ ಮಾಡುವ ವ್ಯವಸ್ಥೆ ಕಲ್ಪಿಸಲಾಗಿಗುವುದು ಎಂದು ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಜ್ಯೋತಿ ಪಟಗಾರ ತಿಳಿಸಿದ್ದಾರೆ.
Leave a Comment