ಕಾರವಾರ: ತ್ಯಾಗ-ಬಲಿದಾನಗಳ ಸಂಕೇತವಾದ ಪವಿತ್ರ ಬಕ್ರೀದ್ (ಈದ್-ಉಲ್-ಅಝ್-ಹ) ಹಬ್ಬವನ್ನು ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಶನಿವಾರ ಆಚರಿಸಲಾಯಿತು.
ಜಿಲ್ಲೆಯ ಭಟ್ಕಳದಲ್ಲಿ ಶುಕ್ರವಾರ ಬಕ್ರೀದ್ ಆಚರಿಸಿದ್ದು, ಇತರ ಭಾಗಗಳಲ್ಲಿ ಶನಿವಾರ ಆಚರಿಸಲಾಯಿತು. ತ್ಯಾಗ ಹಾಗೂ ಬಲಿದಾನಕ್ಕೆ ಹೆಸರಾದ ಬಕ್ರೀದ್ ಹಬ್ಬ ನಿಮಿತ್ತ ಮುಸಲ್ಮಾನರು ಬೆಳಿಗ್ಗೆ ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಯಮ ಮಾಡಿಕೊಂಡರು.
ಕಾರವಾರ ತಾಲ್ಲೂಕಿನ ಕಾಜುಬಾಗದ ಗಫೂರಿ ಮಸೀದಿ, ಜಾಮೀಯಾ ಮಸೀದಿ, ಕೋಡಿಬಾಗದ ಫಿರ್ಖಾನ್ ಮಸೀದಿಗಳಲ್ಲೂ ವಿಶೇಷ ಪ್ರಾರ್ಥನೆಗಳು ನಡೆದವು. ಸದಾಶಿವಗಡದ ಈದ್ಗಾ ಮೈದಾನದಲ್ಲಿ ಮುಸಲ್ಮಾನರು ನೂರಾರು ಸಂಖ್ಯೆಯಲ್ಲಿ ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪವಿತ್ರ ಖುರಾನಿನಲ್ಲಿ ತಿಳಿಸಿದಂತೆ ಮೂರುವರೆ ದಿನಗಳ ಕಾಲ ಈ ಹಬ್ಬವನ್ನ ಪ್ರೀತಿ ಹಾಗೂ ಶಾಂತಿಯಿಂದ ಆಚರಣೆ ಮಾಡಲಾಯಿತು. ಹಬ್ಬದ ಅಂಗವಾಗಿ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ಸಂಬಂಧಿಕರು, ನೆರೆಹೊರೆಯವರೊಂದಿಗೆ ಪಾಲ್ಗೊಂಡು ಭೋಜನ ಸವಿದರು. ಬಕ್ರೀದ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ ಬಂದೊಬಸ್ತ್ ಕಲ್ಪಿಸಲಾಗಿತ್ತು.
Leave a Comment