ಕಾರವಾರ: ಬೈತಖೋಲ್ ಅಂಚೆ ಕಚೇರಿಯಲ್ಲಿ ಲಕ್ಷಾಂತರ ರೂ ಅವ್ಯವಹಾರ ನಡೆಸಿ ತಲೆಮರೆಸಿಕೊಂಡಿರುವ ಲಕ್ಮಣ ನಾಯ್ಕನನ್ನು ಬಂಧಿಸಿ, ಜನರ ಹಣ ಹಿಂತಿರುಗಿಸುವಂತೆ ಆಗ್ರಹಿಸಿ ಸ್ಥಳೀಯರು ಸೋಮವಾರ ಅಂಚೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕಾಗಮಿಸಿದ ಹಿರಿಯ ಅಧಿಕಾರಿಗಳಿಗೆ ತಮ್ಮ ಹಣ ಮರಳಿಸುವವರೆಗೂ ಪ್ರತಿಭಟನೆ ಹಿಂಪಡೆಯುವದಿಲ್ಲ ಎಂದು ಪಟ್ಟು ಹಿಡಿದರು. ಬೈತಖೋಲ್ ಅಂಚೆ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಲಕ್ಷ್ಮಣ ನಾಯ್ಕ ಎಂಬಾತ ಕಳೆದ ನಾಲ್ಕು ತಿಂಗಳ ಹಿಂದೆ 85 ಲಕ್ಷಕ್ಕೂ ಅಧಿಕ ಹಣವನ್ನು ದೋಚಿ ಪರಾರಿಯಾದ ಘಟನೆ ಬೆಳಕಿಗೆ ಬಂದಿತ್ತು. 20 ವರ್ಷಗಳಿಂದ ಬೈತಖೋಲದಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದ ಲಕ್ಷ್ಮಣ ನಾಯ್ಕ, ಜನರು ನೀಡುವ ಹಣವನ್ನು ಅಂಚೆ ಇಲಾಖೆಯಲ್ಲಿ ಠೇವಣಿ ಇಡದೇ ಬಳಳಸಿಕೊಂಡಿರುವದು ಪತ್ತೆಯಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಅಂಚೆ ಇಲಾಖೆ ಆರೋಪಿಯ ವಿರುದ್ದ ದೂರು ದಾಖಲಿಸಿತ್ತು. ಜನರ ಒತ್ತಾಯದ ಮೇರೆಗೆ ಆತನನ್ನು ಪೊಲೀಸರು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಹೊರ ಬಂದ ಆರೋಪಿ ಸದ್ಯ ತಲೆ ಮರೆಸಿಕೊಂಡಿದ್ದು, ಹಣ ಕಳೆದುಕೊಂಡ ಜನ ಆತಂಕಕ್ಕಿಡಾಗಿದ್ದಾರೆ. ತಮ್ಮ ಹಣವನ್ನು ಮರಳಿಸುವಂತೆ ಅಂಚೆ ಇಲಾಖೆಯನ್ನು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆಸಿದ ಸ್ಥಳೀಯರಿಗೆ ಅಧಿಕಾರಿಗಳು ಹಣ ಮರಳಿಸುವ ಭರವಸೆ ನೀಡಿದ್ದರು. ಆದರೆ ಈವರೆಗೂ ಹಣ ಬಾರದ ಕಾರಣ ಜನ ಆಕ್ರೋಶ ವ್ಯಕ್ತಪಡಿಸಿದರು. ಅಂಚೆ ಇಲಾಖೆಗೆ ಪಾವತಿಸಿದ ಹಣಕ್ಕೆ ಜನರ ಬಳಿ ರಸಿದಿಯಿಲ್ಲದ ಕಾರಣ ಎಲ್ಲ ಹಣವನ್ನು ನೀಡಲು ಅಸಾದ್ಯ ಎಂದು ಅಂಚೆ ಅಧಿಕಾರಿಗಳು ವಿವರಿಸಿದರು. ಇದರಿಂದ ಜನ ಇನ್ನಷ್ಟು ಸಿಟ್ಟಿಗೆದ್ದು ಖುರ್ಚಿಗಳನ್ನು ನೆಲಕ್ಕಪ್ಪಳಿಸಿ ಆಕ್ರೋಶ ವ್ಯಕ್ತಪಡಿಸಿದರು.
Leave a Comment