ಕಾರವಾರ: ಆಳ ಸಮುದ್ರ ಮೀನುಗಾರಿಕೆಗೆ ಬುಲ್ಟ್ರಾಲ್ ಬೋಟ್ಗಳನ್ನು ಬಳಸಿರುವ ಕಾರಣವೊಡ್ಡಿ ಕೋಸ್ಟ್ ಗಾರ್ಡ್ನವರು ಮೀನುಗಾರರ ಬೋಟ್ಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮೀನುಗಾರರು ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಎಂ. ಎಲ್. ದೊಡ್ಮನಿಯವರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಸಮುದ್ರದಲ್ಲಿ 25ಕಿ.ಮೀ. ಹೊರಗೆ ಬುಲ್ಟ್ರಾಲ್ ಮೀನುಗಾರಿಕೆ ನಡೆಸಲು ಅವಕಾಶ ವಿದ್ದರೂ ಕೂಡ ಕೋಸ್ಟ್ ಗಾರ್ಡ್ನವರು ತಮ್ಮ ಬೋಟುಗಳನ್ನು ವಶ ಪಡಿಸಿಕೊಂಡು ದಡಕ್ಕೆ ತರುತ್ತಿದ್ದಾರೆ. ಇದೇ ರೀತಿ ಬೋಟ್ನಲ್ಲಿ ಅಗತ್ಯ ದಾಖಲೆ ಪತ್ರಗಳು ಇಲ್ಲ ಎನ್ನುವ ನೆಪದಲ್ಲಿಯೂ ಕೂಡ ಇಲ್ಲಿಯ 3 ಬೋಟುಗಳನ್ನು ದಡಕ್ಕೆ ತಂದಿದ್ದಾರೆ. ಇದರಿಂದಾಗಿ ತುಂಬಾ ನಷ್ಟವಾಗಿದೆ ಎಂದು ಆರೋಪಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ದೊಡ್ಮನಿಯವರು ಬುಲ್ಟ್ರಾಲ್ ಮೀನುಗಾರಿಕೆಗೆ ಸಂಪೂರ್ಣ ನಿಷೇಧವಿದ್ದು ಸಮುದ್ರದಲ್ಲಿ ಎಲ್ಲಿಯೂ ಕೂಡ ಇದನ್ನು ನಡೆಸುವಂತಿಲ್ಲ. ಕೋಸ್ಟ್ಗಾರ್ಡ್ ನವರು ಬುಲ್ಟ್ರಾಲ್ ಮೀನುಗಾರಿಕೆ ನಡೆಸಿರುವುದು ಕಂಡು ಬಂದರೆ ಅವರು ಆ ಬೋಟುಗಳನ್ನು ವಶಕ್ಕೆ ಪಡೆದು ಮೀನುಗಾರಿಕಾ ಇಲಾಖೆಗೆ ಒಪ್ಪಿಸುತ್ತಾರೆ. ಬಳಿಕ ಆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.
ಆದರೆ ಈ ಉತ್ತರಕ್ಕೆ ಸಮಾಧಾನಗೊಳ್ಳದ ಮೀನುಗಾರರು ಕೇವಲ ನಮ್ಮ ಜಿಲ್ಲೆಯ ಮೀನುಗಾರಿಕಾ ಬೋಟುಗಳಿಗೆ ಮಾತ್ರ ಈ ನಿಷೇಧ ಏಕೆ? ಹೊರ ರಾಜ್ಯಗಳ ಹಾಗೂ ಹೊರ ಜಿಲ್ಲೆಗಳ ಬೋಟುಗಳು ಇದೇ ಸಮುದ್ರದಲ್ಲಿ ಬುಲ್ಟ್ರಾಲ್ ಮೀನುಗಾರಿಕೆ ನಡೆಸುತ್ತವೆ. ಅವುಗಳನ್ನು ಕೋಸ್ಟ್ ಗಾರ್ಡ್ನವರು ಏಕೆ ವಶಕ್ಕೆ ಪಡೆಯುವುದಿಲ್ಲ ಎಂದು ಪ್ರಶ್ನಿಸಿದರು. ಮೀನುಗಾರಿಕೆಗೆ ನಿಯಮಕ್ಕೆ ಬೇರೆ ಜಿಲ್ಲೆ ಅಥವಾ ಬೇರೆ ರಾಜ್ಯ ಎಂಬುದಿಲ್ಲ. ಕಾನೂನು ಎಲ್ಲರಿಗೂ ಅನ್ವಯಿಸುತ್ತದೆ. ಈಗಾಗಲೇ ಹಿಡಿದಿರುವ ಬೋಟುಗಳಲ್ಲಿ 2 ಉಡುಪಿ ಜಿಲ್ಲೆಯವು ಆಗಿವೆ. ಅವುಗಳಿಗೂ ಸೂಕ್ತ ಕ್ರಮಗಳನ್ನು ಜರುಗಿಸಲಾಗಿದೆ ಎಂದರು.
ಕೊನೆಗೆ ಬುಲ್ಟ್ರಾಲ್ ಮೀನುಗಾರಿಕೆ ನಡೆಸಿರುವುದು ಕಂಡು ಬಂದರೆ ಕೋಸ್ಟ್ಗಾರ್ಡ್ ನವರು ತಮ್ಮ ಬೋಟುಗಳನ್ನು ವಶಕ್ಕೆ ತೆಗೆದು ಕೊಳ್ಳದೆ ಬೋಟಿನಲ್ಲಿದ್ದ ಅಗತ್ಯ ದಾಖಲೆ ಪತ್ರಗಳನ್ನು ತೆಗೆದುಕೊಂಡು ಮೀನುಗಾರಿಕಾ ಇಲಾಖೆಗೆ ಒಪ್ಪಿಸಲಿ. ಇದರಿಂದಾಗಿ ತಾವು ಅಷ್ಟು ದೂರ ಮೀನುಗಾರಿಕೆಗೆ ತೆರಳಿ ಬರಿಗೈಯಲ್ಲಿ ವಾಪಸ್ಸಾಗಿ ನಷ್ಟ ಅನುಭವಿಸುವುದು ತಪ್ಪುತ್ತದೆ. ಬಳಿಕ ತಾವು ಇಲಾಖೆಗೆ ತೆರಳಿ ಸಂಬಂಧ ಪಟ್ಟ ದಂಡವನ್ನು ತೆತ್ತು ದಾಖಲೆಗಳನ್ನು ಪಡೆದು ಕೊಳ್ಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ದೊಡ್ಮನಿ ತಿಳಿಸಿದರು.
ಈ ಸಂದರ್ಭದಲ್ಲಿ ಮೀನುಗಾರ ಮುಖಂಡ ಗಣಪತಿ ಮಾಂಗ್ರೆ, ರಾಜು ತಾಂಡೇಲ, ಮೋಹನ ಮುಂತಾದವರು ಇದ್ದರು.
Leave a Comment