ಕಾರವಾರ:
ವಾಣಿಜ್ಯ ಬಂದರಿಗೆ ಆಗಮಿಸುವ ಹಡಗುಗಳಿಗೆ ಅನುಕೂಲವಾಗುವಂತೆ ಅರಬ್ಬಿ ಸಮುದ್ರದಂಚಿನಡಿ ತುಂಬಿರುವ ಹೂಳು ತೆಗೆಯಲು ಬಂದರು ಇಲಾಖೆ ಸಿದ್ದವಾಗಿದೆ. ಈಗಾಗಲೇ ಹೂಳು ತೆಗೆಯುವ ಸಂಬಂಧ ಸರ್ವೆಕಾರ್ಯ ಶುರುವಾಗಿದ್ದು, ಸಿಂಗಾಪುರದಿಂದ ಬಂದ ಹಡಗು ಸರ್ವೆ ನಡೆಸಿ ಕಾಮಗಾರಿ ಆರಂಭಿಸುವದು ಮಾತ್ರ ಬಾಕಿಯಿದೆ.
ಬೈತಖೋಲ್ ವಾಣಿಜ್ಯ ಬಂದರಿನಲ್ಲಿ ಹೂಳಿನ ಸಮಸ್ಯೆ ಶುರುವಾಗಿದ್ದರಿಂದ ಹಡಗುಗಳ ಆಗಮನಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಹೂಳು ಎತ್ತುವ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ವಾಣಿಜ್ಯ ಬಂದರಿನಿಂದ ನೇರವಾಗಿ ದೇವಗಡ್ ದ್ವೀಪದವರೆಗೆ ಹಡುಗಗಳ ಆಗಮನಕ್ಕೆ ಚಾನೆಲ್ ನಿರ್ಮಿಸಲಾಗಿದ್ದು, ಈ ಚಾನೆಲ್ ಮಾರ್ಗದಲ್ಲಿಯೇ ಅತ್ಯಧಕ ಹೂಳು ತುಂಬಿದೆ. ಹೀಗಾಗಿ ಹಡಗುಗಳು ಬಂದರಿನ ಒಳ ಪ್ರವೇಶಕ್ಕೆ ತೊಂದರೆ ಅನುಭವಿಸುತ್ತಿವೆ. ಆಗಮಿಸಿದ ಹಡಗುಗಳ ಹೊರ ಪ್ರವೇಶಕ್ಕೂ ಹೂಳಿನ ಸಮಸ್ಯೆ ತೊಂದರೆ ನೀಡಿದೆ. ಹೂಳಿನ ಸಮಸ್ಯೆಯಿಂದ ಬಂದರಿನ ಆದಾಯವೂ ಕುಂಟಿತಗೊಂಡಿದ್ದು, ಇದರಿಂದ ಅಧಿಕಾರಿಗಳು ಹೂಳು ತೆಗೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಹೂಳು ತೆಗೆಯಲಾಗುತ್ತದೆ. ಅದರಂತೆ ಏಪ್ರಿಲ್-ಮೇ ವೇಳೆ ಹೂಳು ತೆಗೆಯಬೇಕಿತ್ತು. ಆದರೆ ಮಳೆ ಆರಂಭಗೊಂಡಿದ್ದರಿಂದ ಕೆಲಸವನ್ನು ಮುಂದುಡಲಾಯಿತು.
ಬೈತಖೋಲ್ ವಾಣಿಜ್ಯ ಬಂದರಿನಿಂದ ಸಾಗಿದ ಚಾನೆಲ್ ಬ್ರೇಕ್ವಾಟರ್ ಸಮೀಪ ತಿರುವು ಪಡೆದುಕೊಂಡಿದೆ. ಅಲ್ಲಿಂದ ಲೇಡೀಸ್ ಬೀಚ್ ಎದುರಿನಿಂದ ನೇರವಾಗಿ ದೇವಗಡ್ ದ್ವೀಪದ ಬಲಬದಿಯಿಂದ ಸಾಗಿ ಆಳ ಸಮುದ್ರಕ್ಕೆ ಸಂಪರ್ಕ ಸಾಸುತ್ತದೆ. ಈ ಚಾನೆಲ್ ಅಲಿಗದ್ದಾ ಬೀಚ್ ಸಮೀಪದಿಂದ ಬ್ರೇಕ್ ವಾಟರ್ ತನಕ ಅಂದಾಜು 600 ರಿಂದ 700 ಮೀಟರ್ ಅಗಲವಾಗಿದ್ದು, ದಕ್ಷಿಣದಿಂದ ಪಶ್ಚಿಮಕ್ಕೆ 7-8 ಕಿ.ಮೀ.ಉದ್ದ ಹೊಂದಿದೆ. ಇದರ ಆಳ 10 ಮೀಟರ್ ಇದೆ. ಮಳೆ, ಗಾಳಿ,ಸಮುದ್ರ ಭೋರ್ಗರೆತದಂತಹ ಸಂದರ್ಭದಲ್ಲಿ ನದಿ ಮೂಲಕ ಸಮುದ್ರ ಸೇರಿದ ಮಣ್ಣು, ಕಸ ಕಡ್ಡಿಗಳೆಲ್ಲವೂ ನೀರಿನ ಸೆಳೆತಕ್ಕೆ ಹರಿದು ಬಂದು ಇದರ ವ್ಯಾಪ್ತಿಯೊಳಗೆ ಸೇರುತ್ತದೆ. ಈ ರೀತಿ ಸೇರಿದ ಮಾಲಿನ್ಯಗಳು ಕೊಳೆತು ಹೂಳು ಉತ್ಪತ್ತಿಯಾಗುತ್ತದೆ. ಇದರಿಂದ ಚಾನೆಲ್ನ ಆಳ ಕಡಿಮೆಯಾಗುತ್ತದೆ. ಆಳ ಕಡಿಮೆಯಾಗುವುದರಿಂದ ದೊಡ್ಡ ಗಾತ್ರದ ಹಡಗುಗಳು ಒಳಗೆ ಪ್ರವೇಶಿಸಲು ತೊಡಕಾಗುತ್ತದೆ. ಹೀಗಾಗಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆಯಾದರೂ ಹೂಳು ತೆಗೆಯಬೇಕಾಗುತ್ತದೆ.
******************
ಹೂಳು ತೆಗೆಯುವ ಉದ್ದೇಶದಿಂದ ಸದ್ಯ ಸರ್ವೇ ಕಾರ್ಯ ಜಾರಿಯಲ್ಲಿದೆ. ಸರ್ವೇ ಕಾರ್ಯ ಮುಗಿದ ತಕ್ಷಣ ನವೆಂಬರ್ ತಿಂಗಳಲ್ಲಿ ಎರಡು ಡ್ರೆಜ್ಜರ್ ಹಡಗುಗಳು ಹೂಳು ತೆಗೆಯುವ ಕಾರ್ಯಾರಂಭ ಮಾಡಲಿವೆ. ಎರಡು ತಿಂಗಳಲ್ಲಿ ಹೂಳು ತೆಗೆಯುವ ಕೆಲಸ ಮುಗಿಯಲಿದೆ.
– ನಾರಾಯಣಪ್ಪ. ಅಸಿಸ್ಟೆಂಟ್ ಎಕ್ಷಿಕ್ಯೂಟಿವ್ ಎಂಜಿನೀಯರ್, ಬಂದರು ಇಲಾಖೆ,ಕಾರವಾರ.
Leave a Comment