ಕಾರವಾರ:
ಶಿರವಾಡದ ತ್ಯಾಜ್ಯ ವಿಲೇವಾರಿ ಘಟಕಕ್ಕಾಗಿ ಮೀಸಲಿಟ್ಟ ಮಣ್ಣನ್ನು ನಗರದಲ್ಲಿ ನಿರ್ಮಿಸಲಾಗುತ್ತಿರುವ ರಾಕ್ಗಾರ್ಡನ್ಗೆ ಸಾಗಿಸುವದು ವಿರೋಧಕ್ಕೆ ಕಾರಣವಾಗಿದೆ.
ಶಿರವಾಡದ ತ್ಯಾಜ್ಯ ವಿಲೇವಾರಿ ಘಟಕದ ಬಳಿ ಅರಣ್ಯ ಪ್ರದೇಶದ ಸ್ವಲ್ಪ ಭಾಗವನ್ನು ತ್ಯಾಜ್ಯಗಳನ್ನು ಸಂಗ್ರಹಿಸಿದ ಮೇಲೆ ಅದರ ಮೇಲೆ ಮುಚ್ಚಲು ಬೇಕಾಗುವ ಮಣ್ಣಿನ ಸಲುವಾಗಿ ಕಾಯ್ದಿರಿಸಲಾಗಿದೆ. ಆದರೆ ಕೆಲವು ದಿನಗಳಿಂದ ನಗರದ ರಾಕ್ ಗಾರ್ಡನ್ ನಿರ್ಮಾಣದ ಗುತ್ತಿಗೆದಾರರು ಇಲ್ಲಿನ ಮಣ್ಣನ್ನು ಟಿಪ್ಪರಗಳಲ್ಲಿ ಪ್ರತಿ ದಿನ ಹಲವಾರು ಲೋಡ್ಗಳನ್ನು ಸಾಗಿಸುತ್ತಿದ್ದು ವಿಷಯ ತಿಳಿದ ಗ್ರಾಮಸ್ಥರು ಹಾಗೂ ಶಿರವಾಡ ಗ್ರಾಪಂ ಸದಸ್ಯರು ವಿರೋಧ ವ್ಯಕ್ತ ಪಡಿಸಿದರು. ಕಾಮಗಾರಿಯನ್ನು ನಿಲ್ಲಿಸುವಂತೆ ಸೂಚಿಸಿ ಮಣ್ಣನ್ನು ಬೇರೆಡೆ ಸಾಗಿಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ನಗರಸಭೆ ಕಾರ್ಯನಿವಾಹಕ ಅಭಿಯಂತರ ಮೋಹನರಾಜ್ ಜಿಲ್ಲಾಡಳಿತದ ಸೂಚನೆಯ ಮೇರೆಗೆ ಅಭಿವೃದ್ಧಿ ಕಾರ್ಯಕ್ಕಾಗಿ ಮಣ್ನನ್ನು ಸಾಗಿಸಲಾಗುತ್ತಿದೆ ಎಂದರು. ಇದರಿಂದ ಕುಪಿತಗೊಂಡ ಸ್ಥಳೀಯರು ಅಭಿವೃದ್ಧಿಯ ಹೆಸರಿನಲ್ಲಿ ಇಲ್ಲಿ ಅವಶ್ಯವಾದ ಮಣ್ಣನ್ನು ಅಲ್ಲಿ ಹೇಗೆ ಸಾಗಿಸುತ್ತೀರಿ ಎಂದು ಪ್ರಶ್ನಿಸಿದರು. ಯಾವುದೇ ಕಾರಣಕ್ಕೂ ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಆಗ ಮೋಹನ್ರಾಜ್ ನೀವು ಹೀಗೆ ಅಡ್ಡಿ ಪಡಿಸಿದರೆ ಪೊಲೀಸ್ ರಕ್ಷಣೆಯೊಂದಿಗೆ ತಾವು ಕೆಲಸವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಹಾಗಾದರೆ ಪೊಲೀಸರನ್ನು ಕರೆಸಿ ನಿಮ್ಮ ಕಾರ್ಯವನ್ನು ನೀವು ಮಾಡಿ ಎಂದು ಸ್ಥಳೀಯರು ಹೇಳಿದರು. ಬಳಿಕ ಮೋಹನರಾಜ್ ಪೊಲೀಸರಿಗೆ ಫೋನಾಯಿಸಿ ವಿಷಯ ತಿಳಿಸಿದಾಗ ಸ್ಥಳಕ್ಕಾಗಮಿಸಿದ ಸಿಪಿಐ ಶಿವಕುಮಾರ ಹಾಗೂ ಪಿಎಸ್ಐ ಪಾವಸ್ಕರ ತಾವು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಾಕಾರರನ್ನು ಎಚ್ಚರಿಸಿದರು.
ಇದಕ್ಕೆ ವಿರೋಧ ವ್ಯಕ್ತ ಪಡಿಸಿದ ತಾಪಂ ಸದಸ್ಯ ಮಾರುತಿ ನಾಯ್ಕ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಇಲ್ಲಿನ ಮಣ್ಣು ಅವಶ್ಯವಾಗಿದೆ. ಇಲ್ಲಿನ ಮಣ್ನನ್ನು ನಿಮಗೆ ನೀಡಿದರೆ ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದರು. ಪೊಲೀಸ್ ಬಲ ಬಳಸಿ ತಮ್ಮ ಮೇಲೆ ದಬ್ಬಾಳಿಕೆ ನಡೆಸಿದರೆ ಪಂಚಾಯತಿಯ ಸ್ವಾತಂತ್ರ್ಯವನ್ನೇ ಕಸಿದುಕೊಂಡಂತಾಗುತ್ತದೆ ಎಂದು ಗ್ರಾಪಂ ಸದಸ್ಯ ರಾಜೇಶ ನಾಯ್ಕ ಹೇಳಿದರು. ಇಲ್ಲಿ ಸಂಗ್ರಹಿಸಲಾಗುವ ಕಸಗಳನ್ನು ಮುಚ್ಚಲು ಮಣ್ಣು ಅವಶ್ಯವಾಗಿದ್ದು ಅದನ್ನು ನೀಡಲು ಅವಕಾಶ ನೀಡಲಾಗುವುದಿಲ್ಲ ಎಂದು ಗ್ರಾಪಂ ಅಧ್ಯಕ್ಷೆ ಗಂಗಾ ನಾಯ್ಕ ಹಾಗೂ ಉಪಾಧ್ಯಕ್ಷ ಜಗದೀಶ ಬಾಂದೇಕರ ಹೇಳಿದರು. ಮಣ್ಣನ್ನು ಯಾವುದೇ ಕಾರಣಕ್ಕೂ ತೆಗೆದು ಕೊಂಡು ಹೋಗಲು ಬಿಡಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಸದಸ್ಯರಾದ ಕಿಶೋರ ಶೇಜವಾಡಕರ, ನಂದನ ಮಾಂಜ್ರೇಕರ ಸಮೀರ ಶೇಜವಾಡಕರ ಸೇರಿದಂತೆ ಇತರರು ಅಲ್ಲಿಯೇ ದರಣಿ ನಡೆಸಿದರು.
ಬಳಿಕ ಕಂದಾಯ ಇಲಾಖೆ ಅಧಿಕಾರಿ ಅಧಿಕಾರಿಗಳು ಪೊಲೀಸರು ಜನರ ಮನವೊಲಿಸಲು ಪ್ರಯತ್ನಿಸಿದರಾದರೂ ಫಲ ನೀಡಲಿಲ್ಲ. ಹೀಗಾಗಿ ಲೋಡ್ ಆಗಿರುವ 3 ಟಿಪ್ಪರ್ಗಳನ್ನು ಮಾತ್ರ ಸಾಗಿಸಲು ಅವಕಾಶ ನೀಡಿದರು. ಇನ್ನು ಮುಂದೆ ಪುನಃ ಇಲ್ಲಿ ಮಣ್ಣು ತೆಗೆಯಲು ಬಂದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳಿಯರು ಎಚ್ಚರಿಸಿದರು. ಅರಣ್ಯ ವ್ಯಾಪ್ತಿಯ ಮಣ್ಣನ್ನು ತೆಗೆದುಕೊಂಡು ಹೋಗುತ್ತಿದ್ದರೂ ಕೂಡ ಸ್ಥಳದಲ್ಲಿದ್ದ ಅರಣ್ಯಾಧಿಕಾರಿಗಳು ಪಂಚನಾಮೆ ಮಾಡದೆ ಹಾಗೆ ಹೊರಟು ಹೋಗಿರುವುದು ಸ್ಥಳೀಯರಲ್ಲಿ ಆಕ್ರೋಶವನ್ನು ಉಂಟು ಮಾಡಿತು. ಕಂದಾಯ ಅಧಿಕಾರಿಗಳನ್ನು ಸೀಜ್ ಮಾಡುವಂತೆ ಕೇಳಿಕೊಂಡರೆ ಅವರೂ ಕೂಡ ಮೇಲಾಧಿಕಾರಿಗಳ ಒತ್ತಾಯಕ್ಕೆ ಮಣಿದು ಯವುದೇ ಕ್ರಮ ಕೈಗೊಳ್ಳದೆ ವಾಪಸ್ಸಾಗಿದ್ದು ಕೂಡ ಜನರ ಆಕ್ಷೇಪಕ್ಕೆ ಗುರಿಯಾಯಿತು.
Leave a Comment