. ಹೊನ್ನಾವರ,ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ ಉತ್ತರ ಕನ್ನಡ , ಗ್ರಾಮ ಪಂಚಾಯತ ನಗರಬಸ್ತಿಕೇರಿ ಹಾಗೂ ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆ (ರಿ.) ಅಮೃತಧಾರಾ ಗೋಶಾಲೆ, ಶ್ರೀಕ್ಷೇತ್ರ ಬಂಗಾರಮಕ್ಕಿ, ಗೇರುಸೊಪ್ಪಾ ಇವರ ಸಂಯುಕ್ತ ಆಶ್ರಯದಲ್ಲಿ ಮಿಶ್ರ ತಳಿ ಆಕಳು ಮತ್ತು ಕರುಗಳ ಪ್ರದರ್ಶನ ಕಾರ್ಯಕ್ರಮವು ಶ್ರೀಕ್ಷೇತ್ರ ಬಂಗಾರಮಕ್ಕಿ ಗೇರುಸೊಪ್ಪಾದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬಂಗಾರಮಕ್ಕಿ ಕ್ಷೇತ್ರದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರು ಉದ್ಘಾಟನೆಯನ್ನು ಮಾಡಿದರು. ಶ್ರೀ ಡಾ|| ನಾರಾಯಣ ಹೆಗಡೆಯವರು ಪ್ರಾಸಾವಿಕ ನುಡಿಗಳನ್ನಾಡುತ್ತಾ ಗೋವುಗಳ ಸಾಕಣಿಕೆಯ ಬಗ್ಗೆ ಜನರಿಗೆ ಹೆಚ್ಚು ಹೆಚ್ಚು ಅರಿವಾಗಬೇಕು, ಹೆಚ್ಚು ಹೆಚ್ಚು ಜನರು ಈ ಉದ್ಯೋಗದಲ್ಲಿ ಪಾಲ್ಗೊಳ್ಳಬೇಕು, ಅದಕ್ಕಾಗಿ ತಮ್ಮ ಇಲಾಖೆಯ ವತಿಯಿಂದ ಉತ್ತೇಜನ ಕೊಡವ ಕಾರ್ಯಕ್ರಮ ಇದಾಗಿದೆ ಎಂದರು. ಡಾ|| ಸುಪ್ರಿಯಾರವರು ಗೋವುಗಳಿಗೆ ನೀಡುವ ಕೆಲವು ಔಷಧಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಂತಹ ಅನ್ನಪೂರ್ಣ ಶಾಸ್ತ್ರಿಯವರು ಮಾತನಾಡಿ ಇಂತಹ ಕಾರ್ಯಕ್ರಮಗಳು ನಮ್ಮ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದಾದರೆ ಅದು ಬಹಳ ಸಂತಸದ ವಿಷಯ ಎಂದರು. ಪರಮಪೂಜ್ಯ ಶ್ರೀ ಮಾರುತೀ ಗುರೂಜಿಯವರು ಮಾತನಾಡಿ ಗೋವು ಕೇವಲ ಆದಾಯದ ಮೂಲ ಮಾತ್ರವಲ್ಲ, ಆರೋಗ್ಯದ ಮೂಲವೂ ಆಗಿದೆ. ಗೋವು ಸ್ರವಿಸುವ ಗೋಮೂತ್ರ ಹಾಗೂ ಗೋಮಲ ಇವೆರಡೂ ಸಹ ಉತ್ಕøಷ್ಟವಾಗಿರುವ ಕೃಷಿಗೆ ಪೂರಕವಾಗಿದೆ. ಸಾವಯವ ಗೊಬ್ಬರವನ್ನು ಬಳಸದೆ ರಾಸಾಯನಿಕ ಗೊಬ್ಬರವನ್ನು ಬಳಸುವ ಇಂದಿನ ದಿನಗಳಲ್ಲಿ ಖಾಯಿಲೆಗಳ ಸಂಖ್ಯೆ ಅಧಿಕವಾಗುತ್ತಿದೆ. ಮನೆಯ ಎದುರಿನಲ್ಲಿ ಸಗಣಿ ಮತ್ತು ಗೋಮೂತ್ರವನ್ನು ಹಾಕಿ ಸಾರಿಸಿ ರಂಗೋಲಿ ಇಡುವ ಪದ್ಧತಿಯಿಂದ ಬ್ಯಾಕ್ಟೀರಿಯಾಗಳ ನಾಶ ಆಗುತ್ತದೆ ಎನ್ನುವುದು ವೈಜ್ಞಾನಿಕವಾಗಿ ದೃಢೀಕರಿಸಲ್ಪಟ್ಟಿದೆ, ಇದರಿಂದ ಹಿಂದಿನ ಜನರು ಆರೋಗ್ಯವಂತರಾಗಿರುತ್ತಿದ್ದರು, ಆದರೆ ಇಂದಿನ ದಿನಗಳಲ್ಲಿ ಇಂತಹ ಪದ್ಧತಿಗಳು ಕಡಿಮೆಯಾದ್ದರಿಂದ ಖಾಯಿಲೆಗಳ ಸಂಖ್ಯೆಯು ಅಧಿಕವಾಗಿದೆ. ಆದ್ದರಿಂದ ಗೋವುಗಳನ್ನ ಸಾಕುವುದು ಧ್ಯೇಯವಾಗಬೇಕು ನಮ್ಮ ಧರ್ಮವೂ ಆಗಬೇಕು ಎಂದರು ಹಾಗೂ ಗೋ ರಕ್ಷಕರ ಹೆಸರಿನಲ್ಲಿ ಭಕ್ಷಕರಿಂದ ತಮಗೆ ಇತ್ತಿಚಿಗೆ ಆದಂತಹ ತೊಂದರೆಯ ಅನುಭವವನ್ನು ಕೂಡಾ ಹಂಚಿಕೊಂಡರು. ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ಗೌರವ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಯ್ಕೆಗೊಂಡ ಗೋವುಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಅನ್ನಪೂರ್ಣ ಎಸ್. ಶಾಸ್ತ್ರಿ, ಅಧ್ಯಕ್ಷರು ಗ್ರಾಮಪಂಚಾಯತ ನಗರಬಸ್ತಿಕೇರಿ, ರಾಘವೇಂದ್ರ ನಾಯ್ಕ, ಸದಸ್ಯರು ಗ್ರಾಮ ಪಂಚಾಯತ ನಗರಬಸ್ತಿಕೇರಿ, ಡಾ|| ಶಶಿಭೂಷಣ, ಪಶುವೈದ್ಯಾಧಿಕಾರಿಗಳು ಕುಮಟಾ, ಡಾ|| ಸುಪ್ರಿಯಾ, ಪಶುಚಿಕಿತ್ಸಾಲಯ ಅರೇಅಂಗಡಿ, ಡಾ|| ನಾರಾಯಣ ಹೆಗಡೆ, ಸಹಾಯಕ ನಿರ್ದೇಶಕರು, ಪಶುವೈದ್ಯಾಲಯ ಹೊನ್ನಾವರ, ಗೋವಿಂದ ನಾಯ್ಕ, ಸದಸ್ಯರು ಗ್ರಾಮ ಪಂಚಾಯತಿ ನಗರಬಸ್ತಿಕೇರಿ ಹಾಗೂ ಎಸ್.ಎಲ್. ಭಟ್ ಸರಳಗಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Leave a Comment