ಹೊನ್ನಾವರ: ಜಿಲ್ಲೆಯ ಸಾಂಸ್ಕøತಿಕ ಶ್ರೀಮಂತಿಕೆಯನ್ನು ಬಿಂಬಿಸುವ ಕರಾವಳಿ ಉತ್ಸವವು ಪ್ರತಿಭೆಯನ್ನು ಪ್ರೋತ್ಸಾಹಿಸುವ ವೇದಿಕೆಯಾಗಿದೆ ಎಂದು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷೆ, ಶಾಸಕಿ ಶಾರದಾ ಮೋಹನ ಶೆಟ್ಟಿ ಹೇಳಿದರು. ಪಟ್ಟಣದ ಪ್ರಭಾತನಗರದ ಸೇಂಟ್ ಅಂತೋನಿ ಪ್ರೌಢಶಾಲೆಯ ಮೈದಾನದಲ್ಲಿ ಭಟ್ಕಳ-ಹೊನ್ನಾವರ ಉಪವಿಭಾಗ, ಜಿಲ್ಲಾಡಳಿತದ ಆಶ್ರಯದಲ್ಲಿ ನಡೆದ ಕರಾವಳಿ ಉತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಕರಾವಳಿ ಪ್ರದೇಶವು ಕೃಷಿಯಲ್ಲಿ ಎಷ್ಟು ಪ್ರಧಾನವಾಗಿದೆಯೋ ಸಾಂಸ್ಕøತಿಕ ರಂಗದಲ್ಲಿಯೂ ಅಷ್ಟೇ ಮಹತ್ವವನ್ನು ಪಡೆದುಕೊಂಡಿದೆ. ಜಿಲ್ಲೆಯು ಶೈಕ್ಷಣಿಕವಾಗಿ, ಸಾಂಸ್ಕøತಿಕವಾಗಿ ಶ್ರೀಮಂತವಾಗಿದ್ದು ಸರ್ಕಾರದ ಯೋಜನೆಯಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತಿದೆ. ಹೊನ್ನಾವರ ತಾಲೂಕಿನ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬೆಳಗಿದ ಪ್ರತಿಭೆಗಳಿವೆ. ಅವರನ್ನು ಗುರುತಿಸಿ ಸನ್ಮಾನಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಮಂಕಾಳ ವೈದ್ಯ ಮಾತನಾಡಿ ರಾಜಕಾರಣಿಗಳ ಆಸಕ್ತಿಯ ಕೊರತೆಯಿಂದ ಜಿಲ್ಲೆಯಲ್ಲಿ ನಡೆಯಬೇಕಿದ್ದ ಉತ್ಸವಗಳು ನಡೆಯದೇ ಇತ್ತು. ಸಚಿವ ಆರ್.ವಿ.ದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಪ್ರತೀ ತಾಲೂಕಿನಲ್ಲಿಯೂ ಉತ್ಸವಗಳು ನಡೆಯಲಾರಂಭಿಸಿದವು. ಕಳೆದ 2 ವರ್ಷಗಳಿಂದ ಕರಾವಳಿ ಉತ್ಸವಕ್ಕೆ ಮತ್ತೆ ಹೊಸ ಕಳೆ ಬಂದಿದೆ. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಈ ವೇದಿಕೆಯಿಂದ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಧ್ಯವಾಗುತ್ತಿದೆ ಎಂದರು. ಜಿ.ಪಂ. ಅಧ್ಯಕ್ಷೆ ಜಯಶ್ರೀ ಮೊಗೇರ ಮಾತನಾಡಿ ತಾಲೂಕಿನಲ್ಲಿ ಉತ್ಸವವು ಹಬ್ಬದ ವಾತಾವರಣ ಮೂಡಿಸಿದ್ದು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ ಅವರಿಗೆ ಪ್ರೇರಣೆ ನೀಡಿದೆ ಎಂದರು. ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದ ಹೊನ್ನಾವರದ ಪ್ರಮಥಾ ಗಜಾನನ ಭಟ್ಟ, 2017ನೇ ಸಾಲಿನ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಹೊನ್ನಾವರ ತಾಲೂಕಿನ ಖರ್ವಾದ ಮಹೇಂದ್ರ ಗೌಡ ಹಾಗೂ ಸುಚಿತ್ರಾ ಈರಪ್ಪ ನಾಯ್ಕ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್. ಚಂದ್ರಶೇಖರ್ ನಾಯಕ, ತಹಸೀಲ್ದಾರ ವಿ.ಆರ್.ಗೌಡ, ತಾ.ಪಂ ಅಧ್ಯಕ್ಷ ಉಲ್ಲಾಸ ನಾಯ್ಕ, ಪ.ಪಂ.ಅಧ್ಯಕ್ಷೆ ಶರಾವತಿ ಮೇಸ್ತ ಉಪಸ್ಥಿತರಿದ್ದರು. ಉಪವಿಭಾಗಾಧಿಕಾರಿ ಎಂ.ಎನ್.ಮಂಜುನಾಥ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ವಂದಿಸಿದರು. ನಂತರ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆದವು. ಸ್ಪರ್ಧೆಗಳು: ವಿದ್ಯಾರ್ಥಿಗಳಿಗಾಗಿ ಮಕ್ಕಳ ಸ್ವರಚಿತ ಕವನಗಳ ಕವಿಗೋಷ್ಠಿ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಕೇಶ ವಿನ್ಯಾಸ ಸ್ಪರ್ಧೆ, ಅಡುಗೆ ಸ್ಪರ್ಧೆ, ವಸ್ತ್ರ ಉಡುಗೆ ಸ್ಪರ್ಧೆ, ಮೆಹಂದಿ ಸ್ಪರ್ಧೆ, ಪುರುಷರಿಗಾಗಿ ಕಬಡ್ಡಿ, ಹಗ್ಗ ಜಗ್ಗಾಟ ಹಾಗೂ ಶ್ವಾನ ಪ್ರದರ್ಶನ ನಡೆಯಿತು. ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.
Leave a Comment