ಹಳಿಯಾಳ : ಜಗತ್ತನ್ನು ಮೊಬೈಲ್ ಆಳುತ್ತಿದೆ ಆದ್ದರಿಂದ ನಾವು ಮೊಬೈಲ್ ನಿಯಂತ್ರಣದಲ್ಲಿದ್ದೇವೆ. ಮೊಬೈಲ್ ಇಂದಿನ ಯುವ ಜನಾಂಗವನ್ನು ಹಾಳು ಮಾಡುವತ್ತ ಸಾಗಿದೆ. ಅದನ್ನು ಆದಷ್ಟು ಕಡಿಮೇ ಪ್ರಮಾಣದಲ್ಲಿ ಬಳಸಿ, ಪಾಲಕರು ತಮ್ಮ ಮಕ್ಕಳಿಗೆ ಅನವಶ್ಯಕವಾಗಿ ಮೊಬೈಲ್ ಬಳಸುವುದರ ಬಗ್ಗೆ ಎಚ್ಚರಿಕೆ ನೀಡುವುದರ ಮೂಲಕ ಕುಟುಂಬಗಳಲ್ಲಿ ಒಂದೇ ಮೊಬೈಲ್ ಇರುವಂತೆ ನೋಡಿಕೊಳ್ಳಿ ಎಂದು ಉಪ್ಪಿನಬೇಟಗೇರಿ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಕರೆ ನೀಡಿದರು. ಲಿಂಗಾಯತ ಮತ್ತು ವೀರಶೈವ ಹಾಗೂ ಸರ್ವಧರ್ಮಗಳ ಸಹಯೋಗದೊಂದಿಗೆ ಪಟ್ಟಣದ ಶ್ರೀ ಗ್ರಾಮದೇವಿ ಮೈದಾನದಲ್ಲಿ ಕಳೆದ 13 ದಿನಗಳಿಂದ ದಿನನಿತ್ಯ ಬಸವ ಪುರಾಣ ನಡೆಸುತ್ತಿರುವ ಸ್ವಾಮಿಜೀಯವರು ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿನಲ್ಲಿ ತಾಯಿಗೆ ಸಮಾನವಾದ ಶ್ರೇಷ್ಠವಾದ ಇನ್ನೊಂದು ವಸ್ತು ಅದುವೇ ಗುರುವಾಗಿದ್ದು ಗುರುವಿನ ಮಾರ್ಗದರ್ಶನದಲ್ಲಿ ಸಂಸ್ಕಾರಯುತವಾದ ಜೀವನ ನಡೆಸಲು ಸಾಧ್ಯವಾಗುತ್ತದೆ. ಅಲ್ಲದೇ ಗುರುವಿನ ಗುಲಾಮನಾಗುವ ತನಕ ಜೀವನದಲ್ಲಿ ಮುಕ್ತಿ ಸಿಗಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯ ಪಟ್ಟರು. ಮುಂದೆ ಗುರಿ ಇರಬೇಕು. ಗುರಿಗೆ ತಕ್ಕಂತೆ ಹಿಂದೆ ಆದರ್ಶವಾದ ಗುರುವಿದ್ದರೇ ಮಾತ್ರ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದರು. ಬಸವ ಪುರಾಣವು ಎಲ್ಲ ಸಮಾಜ ಮತ್ತು ಎಲ್ಲಾ ದೇಶಗಳಿಗೆ ಇಂದಿಗೂ ಆದರ್ಶವಾಗಿದೆ. ಬಸವ ತತ್ವಗಳು ಎಲ್ಲರಿಗೂ ಸಹಬಾಳ್ವೆ ಮತ್ತು ಮಾನವೀಯ ಗುಣಗಳ ಪಾಠ ಮಾಡುತ್ತದೆ. ಅವಿರಳಜ್ಞಾನಿ ಬಸವ ನುಡಿದ ಎಲ್ಲಾ ಮಾತುಗಳು ಇಂದಿಗೂ ವಚನಗಳಾಗಿ ಮುಂದುವರೆದಿವೆ. ಅವುಗಳನ್ನು ಇಂದಿನ ಜನಸಂದಣಿ ಮತ್ತು ಬಿಡುವಿಲ್ಲದ ಜೀವನಕ್ಕೆ ಅವಶ್ಯಕತೆಯಾಗಿದ್ದು ಮುಂದಿನ ದಿನಗಳಲ್ಲಿ ಜೀವನವನ್ನು ಆದರ್ಶವನ್ನಾಗಿ ಮಾಡಲು ಬಸವ ತತ್ವಗಳು ಬೇಕಾಗಿವೆ. ಅಂದಿನ ಕಾಲದಲ್ಲಿ ಬಸವ ಅನ್ನ ದಾಸೋಹ, ಅತಿಥಿ ಗೌರವ, ದಾನ ಧರ್ಮ ಮತ್ತು ಅಹಂಕಾರವನ್ನು ತೊರೆಯುವ ಬಗೆಗಗಳನ್ನು ಸಮಾಜಕ್ಕೆ ತೋರಿಸಿದ ಪರಿಣಾಮ ಇಂದಿಗೂ ಇವುಗಳು ಎಲ್ಲರಿಗೆ ಬೇಕಾಗಿವೆ, ಉತ್ತಮ ಬದುಕು ಮತ್ತು ಸಮಾಜಕ್ಕೆ ಸಂಸ್ಕಾರವು ಅವಶ್ಯವಾಗಿದ್ದು ಅದನ್ನು ಇಂದಿನ ಪಾಲಕರು ತಮ್ಮ ಮಕ್ಕಳಿಗೆ ನೀಡಬೇಕೆಂದರು. ಎಲ್ಲರೂ ಪ್ರೀತಿ, ಸಹಬಾಳ್ವೆಯಿಂದ ಜೀವನ ಸಾಗಿಸಬೇಕು, ಕುಟುಂಬಗಳು ಆದರ್ಶ ಜೀವನ ನಡೆಸಿದರೇ ಮಾತ್ರ ಮಾದರಿ ಸಮಾಜ ನಿರ್ಮಾಣ ಕಾರ್ಯವು ಸುಲಭವಾಗುತ್ತದೆ. ಸಮಾಜವು ಆಧುನಿಕತೆ ಬೆಳೆದಂತೆಲ್ಲಾ ವಿಶಾಲವಾಗುವ ಬದಲು ಅದು ಸಂಕುಚಿತವಾಗುತ್ತಿದೆ. ಮೊದಲಿನಂತೆ ದೊಡ್ಡ ಕುಟುಂಬಗಳು ಇಂದು ಕಾಣಲು ದುಸ್ತರವಾಗಿವೆ ಎಂದು ನೊಂದು ನುಡಿದರು. ಈ ಸಂದರ್ಭದಲ್ಲಿ ಬಸವಕಲ್ಯಾಣದ ಜಯಶಾಂತಸ್ವಾಮಿ, ಅಮಿನಗಡದ ಸ್ವಾಮಿಜೀ ಇದ್ದರು. ಕಳೆದ 13 ದಿನಗಳಿಂದ ನಡೆಯುತ್ತಿರುವ ಬಸವ ಪುರಾಣಕ್ಕೆ ಪ್ರತಿ ದಿನ ಸುಮಾರು 4 ರಿಂದ 5 ಸಾವಿರ ಜನರು ಆಗಮಿಸುತ್ತಿದ್ದು ಪ್ರತಿದಿನ ಸಾಯಂಕಾಲ 6 ರಿಂದ 8 ಗಂಟೆಯವರೆಗೆ ಗ್ರಾಮದೇವಿ ಮೈದಾನವು ಕಿಕ್ಕಿರಿದು ತುಂಬುತ್ತಿದ್ದು ಪ್ರವಚನದ ನಂತರ ಎಲ್ಲರಿಗೂ ಸಹ ಪ್ರಸಾದ ವ್ಯವಸ್ಥೆಯನ್ನು ಮಾಡುತ್ತಿರುವುದು ವಿಶೇಷವಾಗಿದೆ.
Leave a Comment