ಹಳಿಯಾಳ: ಮಹದಾಯಿ ನದಿ ಜೋಡಣೆ, ಕಳಸಾ ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಉತ್ತರ ಕರ್ನಾಟಕದ ಜನತೆ ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದ್ದು ಕೂಡಲೇ ಪ್ರಧಾನ ಮಂತ್ರಿಯವರು ಮಧ್ಯಸ್ಥಿಕೆ ವಹಿಸಿ ಮಹದಾಯಿ ವಿವಾದ ಬಗೆಹರಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ(ಕನ್ನಡ ಪರ ಸಂಘಟನೆಗಳ ಒಕ್ಕೂಟ) ಹಳಿಯಾಳ ಘಟಕ ಆಗ್ರಹಿಸಿದೆ. ಕರವೇ ರಾಜ್ಯ ಸಂಘ ಹಾಗೂ ಇತರ ಕನ್ನಡ ಪರ ಸಂಘಟನೆಗಳು ಮಹದಾಯಿ ವಿವಾದ ಬಗೆಹರಿಸಿ ರೈತರಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಗುರುವಾರ ಕರೆ ನೀಡಿರುವ ಕರ್ನಾಟಕ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ ಕರವೇ ಹಳಿಯಾಳ ಘಟಕದವರು ಪಟ್ಟಣದಲ್ಲಿ ಬಂದ್ ಆಚರಿಸದೆ ಕೇವಲ ಪ್ರತಿಭಟನಾ ಮೇರವಣಿಗೆ ನಡೆಸಿದರು. ಸಂಘಟನೆ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ ನೇತೃತ್ವದಲ್ಲಿ ಕಾರ್ಯಕರ್ತರು ಪಟ್ಟಣದ ವನಶ್ರೀ ವೃತ್ತದಿಂದ ಪ್ರತಿಭಟನಾ ಮೇರವಣಿಗೆಯಲ್ಲಿ ಬಸ್ ನಿಲ್ದಾಣ ರಸ್ತೆ, ಮೇದಾರಗಲ್ಲಿ, ಅರ್ಬನ್ ವೃತ್ತ, ಮುಖ್ಯ ಬೀದಿ ಮೂಲಕ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಶಿವಾಜಿ ವೃತ್ತಕ್ಕೆ ಆಗಮಿಸಿ ಸಮಾರೋಪಗೊಂಡು ಕೆಲ ಕಾಲ ರಸ್ತೆ ತಡೆ ನಡೆಸಿ ಬಳಿಕ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕೆಲ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದು ಹೊರತು ಪಡಿಸಿದರೇ ಜನಜೀವನ ಸಹಜವಾಗಿತ್ತು ಆದರೇ ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗೆ ಇಳಿಯದ್ದರಿಂದ ಪ್ರಯಾಣಿಕರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಪ್ರತಿಭಟನೆಯಲ್ಲಿ ಆನಂದ ಮಠಪತಿ, ಚಂದ್ರಕಾಂತ ಗೊಂಧಳಿ, ಸಿಬಿ ಹಿರೆಮಠ, ಚಂದ್ರಕಾಂತ ಅರಿಶೀನಗೆರಿ, ಶ್ರೀಶೈಲ್, ಸುಧಾಕರ ಕುಂಬಾರ, ವಿನೋದ ದೊಡ್ಮಣಿ, ಮಂಜುನಾಥ, ಶಿವಾನಂದ ಶೆಟ್ಟಿ, ಆಶೋಕ ಪಾಟೀಲ್, ಪಡ್ನೀಸ್, ಪ್ರಭುಲಿಂಗ ದೇಸಾಯಿಸ್ವಾಮಿ, ಈರಣ್ಣಾ, ನಾರಾಯಣ ಇತರರು ಇದ್ದರು.
Leave a Comment