ಹಳಿಯಾಳ:
ಸಿದ್ದಾರೂಢ ಪರಂಪರೆಯ ಮಠವಾಗಿರುವ ಹಳಿಯಾಳ ತಾಲೂಕಿನ ಕೆ.ಕೆ. ಹಳ್ಳಿಯ ಶ್ರೀಗುರು ನಿತ್ಯಾನಂದ ಆಶ್ರಮದ 33ನೇ ಪುಣ್ಯಾರಾಧನೆ, 38ನೇ ವೇದಾಂತ ಮಹಾಸಭಾ ಕಾರ್ಯಕ್ರಮ ಹಾಗೂ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಭಕ್ತಿ ಘೋಷಗಳ ಮಧ್ಯೆ ಶ್ರದ್ದಾಭಕ್ತಿಯಿಂದ ಜರುಗಿತು. ರಥೋತ್ಸವ ಅಂಗವಾಗಿ ಆಶ್ರಮದ ಗುರುಗಳಾಗಿರುವ ಸುಬ್ರಹ್ಮಣ್ಯ ಸ್ವಾಮೀಜಿ ಅವರನ್ನು ರಥದಲ್ಲಿ ಕುಳ್ಳಿರಿಸಿ ಸಾವಿರಾರು ಭಕ್ತರು ರಥವನ್ನು ಎಳೆದರು. ಸ್ವಾಮೀಜಿಯವರನ್ನು ರಥದಲ್ಲಿ ಕುಳ್ಳಿರಿಸಿ ರಥೋತ್ಸವ ನಡೆಸುವುದು ಇಲ್ಲಿಯ ವಿಶೇಷತೆಯಾಗಿದೆ. “ಶಿವಾಯ ನಮಃ” ಘೋಷಣೆಗಳೊಂದಿಗೆ ರಥವನ್ನು ಎಳೆಯುವುದು ಸಂಪ್ರದಾಯವಾಗಿದೆ. ಹಳೆ ಹುಬ್ಬಳ್ಳಿಯ ನಾಸಿಕ ಶರಣಪ್ಪ ಸ್ವಾಮಿ ಮಠದ ಶ್ರೀ ವಾಸುದೇವಾನಂದ ಮಹಾಸ್ವಾಮಿ, ಅರಿಕೇರಿ ಕೌದೇಶ್ವರ ಮಠದ ಶ್ರೀಮಾದವನಂದ ಸ್ವಾಮೀಜಿ, ತಾವರಗೇರಿಯ ಸಿದ್ದಾರೂಢಮಠದ ಶ್ರೀ ನಿರ್ಗುಣಾನಂದ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದರೇ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಹೋತ್ಸವದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ವಿ.ಆರ್.ಡಿಎಮ್ ಟ್ರಸ್ಟ್ ಧರ್ಮದರ್ಶಿ ಪ್ರಶಾಂತ ದೇಶಪಾಂಡೆ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ ಇತರ ಪ್ರಮುಖರು ಇದ್ದರು. ಪ್ರತಿವರ್ಷದಂತೆ ಶಿವರಾತ್ರಿಯ ನಂತರ ಈ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಸದ್ಗುರು ನಿತ್ಯಾನಂದ ಮಹಾಸ್ವಾಮಿಜಿಯವರ ಪುಣ್ಯಾರಾಧನೆ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಕೆ.ಕೆ.ಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.
Leave a Comment