ಹಳಿಯಾಳ:- ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಿ ಕಾಯಕದಲ್ಲಿ ತೊಡಗಿದರೇ ಯಶಸ್ಸನ್ನು ಗಳಿಸಬಹುದು ಹಾಗೂ ಯುವಕರು ಮಹಾನಗರಗಳತ್ತ ಮುಖ ಮಾಡದೆ ತಮ್ಮ ಪ್ರದೇಶದಲ್ಲಿಯೇ ಸ್ವಪ್ರತಿಭೆಯ ಮೂಲಕ ಗುರುತಿಸಿಕೊಂಡು ನೆಲೆ ನಿಲ್ಲುವ ಕೆಲಸ ಮಾಡಬೇಕೆಂದು ಬೆಳಗಾವಿಯ ಎನರ್ಜಿ ಮೈಕ್ರೊವೇಸಿಸ್ಟ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಕಾಶ ಮುಗಳಿ ಕರೆ ನೀಡಿದರು. ಹಳಿಯಾಳದ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ಗ್ರಾಮೀಣ ತಾಂತ್ರಿಕ ಮಹಾವಿದ್ಯಾಲಯ ಆಶ್ರಯದಲ್ಲಿ 3 ದಿನಗಳ ರಾಜ್ಯಮಟ್ಟದ ತಾಂತ್ರಿಕ, ಸಾಂಸ್ಕøತಿಕ ಉತ್ಸವ ಆವಿಷ್ಕಾರ-18 ಯಶಸ್ವಿಯಾಗಿ ಸಂಪನ್ನಗೊಂಡ ಸಮಾರಂಭದಲ್ಲಿ ಅವರು ಮಾತನಾಡಿದರು. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|| ವಿ.ವಿ.ಕಟ್ಟಿ, ಪ್ರೊ ಪೂರ್ಣಿಮಾ ರಾಯ್ಕರ್ ಆವಿಷ್ಕಾರ 18 ರ ಪಕ್ಷಿನೋಟವನ್ನು ನೀಡಿದರು. ಈ ತಾಂತ್ರಿಕ ಉತ್ಸವದಲ್ಲಿ ರಸಪ್ರಶ್ನೆ, ತಾಂತ್ರಿಕ ಪ್ರಬಂಧ ಮಂಡನೆ, ಚರ್ಚಾಸ್ಪರ್ಧೆ, ಸೇತುವೆ ಮಾದರಿ ನಿಮಾಣ, ರೋಬೋಟ್ ರೇಸ್, ಕಿರು ಚಿತ್ರ ನಿರ್ಮಾಣ ಮುಂತಾದ 22ಕ್ಕೂ ಅಧಿಕ ಸ್ಪರ್ಧೆಗಳಲ್ಲಿ ರಾಜ್ಯದ ವಿವಿಧ ತಾಂತ್ರಿಕ ಮಹಾವಿದ್ಯಾಲಯಗಳ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧಾ ವಿಜೇತರಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಪ್ರೊ ಕೆ.ಎಸ್. ಪೂಜಾರ್, ಪ್ರೊ ಪ್ರಸನ್ನ ಕುಲಕರ್ಣಿ, ಪ್ರೊ ರವೀಂದ್ರ ಮೂಡಿತ್ತಾಯ, ಪ್ರೊ ದಾಮೋದರ ಹೊತ್ಕರ್ ಇದ್ದರು. ವಿದ್ಯಾರ್ಥಿಗಳಾದ ಮೇಘಾ ಮತ್ತು ಅಲ್ವಿನಾ ನಿರೂಪಿಸಿದರು.
Leave a Comment