ಹಳಿಯಾಳ:- ರಾಜ್ಯದ ಕಾಂಗ್ರೆಸ್ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಮೇಲೆ ನಾವು ಮತಯಾಚನೆ ಮಾಡುತ್ತಿದ್ದೆವೆ ಹೊರತು ಮತದಾರರನ್ನು ಭಾವನಾತ್ಮಕ ವಿಷಯಗಳಲ್ಲಿ ಪ್ರಚೋದಿಸಿ ಮತ ಕೇಳುತ್ತಿಲ್ಲ ತಾವು ಯಾವತ್ತೂ ಯಾರ ವಿರುದ್ಧ ಟೀಕೆ ಟಿಪ್ಪಣೆ ಮಾಡುವುದರಲ್ಲಿ ಕಾಲಹರಣ ಮಾಡದೆ ಅಭಿವೃದ್ದಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ನಿರತರಾಗಿರುತ್ತೇವೆ ಎಂದು ಸಚಿವ ಹಾಗೂ ಕಾಂಗ್ರೇಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಅರ್ಬನ್ ಬ್ಯಾಂಕ್ ವೃತ್ತದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದೇಶಪಾಂಡೆ ಕಳೆದ 40 ವರ್ಷಗಳಿಂದ ರಾಜಕೀಯದಲ್ಲಿರುವ ತಾವು ಯಾವುದೇ ಕಳಂಕ, ಭ್ರಷ್ಟಾಚಾರವಿಲ್ಲದೇ ಪ್ರಾಮಾಣಿಕ ಜನಪರ ಕಾರ್ಯ ಮಾಡುತ್ತಿದ್ದು ತಾವು ಪ್ರತಿನಿಧಿಸುವ ಹಳಿಯಾಳ ಕ್ಷೇತ್ರವನ್ನು ದೇಶದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುವ ಇಚ್ಚಾಶಕ್ತಿ, ಗುರಿ ಇದ್ದು ಅದಕ್ಕೆ ಮತ್ತೊಮ್ಮೆ ಕ್ಷೇತ್ರದ ಜನತೆ ಸಹಕಾರ ಆಶೀರ್ವಾದ ನೀಡಬೇಕೆಂದು ಮನವಿ ಮಾಡಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರದ ಹಿಂದೆಂದೂ ಆಗದಷ್ಟು ಅಭಿವೃದ್ದಿ ಕಾರ್ಯಗಳನ್ನು ರಾಜ್ಯದಲ್ಲಿ ಮಾಡಿದ್ದು ಹಳಿಯಾಳ ಕ್ಷೇತ್ರಕ್ಕೆ ಸಾವಿರ ಕೋಟಿಗೂ ಅಧಿಕ ಅನುದಾನ ಹೊಳೆ ಹರಿದು ಬಂದಿದೆ ಎಂದರು. ಅಭಿವೃದ್ಧಿ ಆಧಾರದ ಮೇಲೆ ಮತ ಕೆಳದ ಬಿಜೆಪಿ ಪಕ್ಷದವರು ಮತದಾರರ ಭಾವನೆಗಳನ್ನು ಕೆರಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕೇಂದ್ರ ಸರ್ಕಾರದ ಜನವಿರೋಧಿ ಆಡಳಿತದಿಂದಾಗಿ ಜೀವನಾವಶ್ಯಕ ವಸ್ತುಗಳ ಬೆಲೆಯೆರಿಕೆಯಾಗಿ ಜನ ಪರದಾಡುತ್ತಿದ್ದರು ಪ್ರಧಾನಿಗಳ ಗಮನಕ್ಕೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಕಾಮಗಾರಿ ಆರಂಭಗೊಂಡಿರುವ ಕಾಳಿನದಿ ಏತನೀರಾವರಿ ಯೋಜನೆ ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ. ಅಲ್ಲದೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದಾಗಿ ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದರು. ಶಿವಾಜಿ ಮಹಾರಾಜರ ಆರಾಧ್ಯದೇವಿ ತುಳಜಾಭವಾನಿಯು ತಮ್ಮ ಮನೆ ದೇವತೆಯಾಗಿದ್ದು, ಹೀಗಾಗಿ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಅಪಾರ ಗೌರವವಿದೆ ಎಂದ ದೇಶಪಾಂಡೆ ಬಿಜೆಪಿ ಅಭ್ಯರ್ಥಿ ಸುನೀಲ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿ ದೇಶಪಾಂಡೆ ಸುಳ್ಳು ಹೇಳುವುದರಲ್ಲಿ ನಿಸ್ಸಿಮನಾಗಿದ್ದು ಅದಕ್ಕಾಗಿ ಹೆಗಡೆಗೆ ನೋಬೆಲ್ ಪ್ರಶಸ್ತಿ ನೀಡಬೇಕು ಎಂದು ಲೇವಡಿ ಮಾಡಿದರು. ಕಾಳಿನದಿ ಯೋಜನೆ ಜಾರಿಗೊಳಿಸಿದರೇ ಆನೆ ಅಂಬಾರಿ ಮೆರವಣಿಗೆ ಮಾಡುವುದಾಗಿ ಹೇಳಿ ಈಗ ಮೌನವಾಗಿರುವುದನ್ನು ನೋಡಿದರೇ ಆನೆ ಹುಡಕಲು ಕಾಡು ಅಲೆಯುತ್ತಿದ್ದಾರೆ ಇರಬಹುದು ಎಂದು ವ್ಯಂಗ್ಯವಾಡಿದರು.
Leave a Comment