ಹೊನ್ನಾವರ :
ಹೊನ್ನಾವರತಾಲೂಕಿನ ಕೆಳಗಿನೂರಿನಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣ ನಡೆಸುತ್ತಿರುವ ಐ ಆರ್ ಬಿ ಕಂಪನಿ ಭೂ ಸ್ವಾಧೀನತೆಗೆ ಒಳಪಡದ ತನ್ನ ಮಾಲ್ಕಿ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಧ್ವಂಸಗೊಳಿಸಿದ್ದು 5 ಲಕ್ಷ ರೂ. ಗಳಷ್ಟು ನಷ್ಟ ಉಂಟಾಗಿದೆ. ಜಿಲ್ಲಾಧಿಕಾರಿಯವರು ಮಧ್ಯಪ್ರವೇಶಿಸಿ ನ್ಯಾಯ ಕೊಡಿಸಬೇಕು ಎಂದು ಸ್ಥಳೀಯ ನಿವಾಸಿ ಶ್ರೀಧರ ನಾರಾಯಣ ಹೆಗಡೆ ಆಗ್ರಹಿಸಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಕಂಪನಿಯವರು ಗುತ್ತಿಗೆದಾರರ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಾರೆ. ಗುತ್ತಿಗೆದಾರರು ಕಂಪನಿ ಕಡೆಗೆ ಬೊಟ್ಟು ಮಾಡುತ್ತಾರೆ. ಒಟ್ಟಾರೆ ಇಬ್ಬರೂ ನುಣುಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.ಕೆಳಗಿನೂರು ಗ್ರಾಮದ ಸರ್ವೇ ನಂಬರ್ 398ರ ತನ್ನ ಕ್ಷೇತ್ರ ರಾಷ್ಟ್ರೀಯ ಹೆದ್ದಾರಿಯಿಂದ ದೂರವಿದ್ದು ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಎಕ್ವಾಯರ್ ಆಗಿಲ್ಲ. ತಾನು ವೃತ್ತಿಯ ನಿಮಿತ್ತ ಊರಿನಲ್ಲಿಲ್ಲದ ಸಮಯದಲ್ಲಿ ಐಆರ್ ಬಿ ಕಂಪನಿಯ ಗುತ್ತಿಗೆದಾರರು ತನ್ನ ಕ್ಷೇತ್ರದಲ್ಲಿ 6 ಅಡಿ ಎತ್ತರವಿರುವ ಪಾಗಾರವನ್ನು ಕೆಡವಿದ್ದಾರೆ. ಸ್ಥಳದಲ್ಲಿದ್ದ ಫಲಕೊಡುತ್ತಿರುವ 30 ಗೇರು ಮರಗಳನ್ನು ನಾಶ ಮಾಡಿದ್ದಾರೆ. ಅತ್ಯಮೂಲ್ಯವಾದ ಆಯುರ್ವೇದಿಕ ಗಿಡಮೂಲಿಕೆ, ವನಸ್ಪತಿಗಳನ್ನು ನಾಶ ಮಾಡಿದ್ದಾರೆ. ಸ್ಥಳಕ್ಕೆ ಹೋಗುವ ರಸ್ತೆಯನ್ನು ನಿರ್ನಾಮ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪಾಗಾರ ಕಿತ್ತಿರುವುದರಿಂದ ದನಕರುಗಳು, ಪುಂಡಪೋಕರಿಗಳು ಒಳಬಂದು ಉಳಿದ ಗಿಡಮರಗಳನ್ನು ಹಾಳು ಮಾಡುತ್ತಾರೆ. ಕೆಡವಿದ ಪಾಗಾರವನ್ನು ಸ್ವಂತ ಖರ್ಚಿನಿಂದ ಪ ುನಃ ತಾನು ಜೋಡಿಸಿಕೊಂಡಿದ್ದು ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.ಗುತ್ತಿಗೆದಾರರಿಗೆ ನೋಟೀಸ್: ಈ ಕುರಿತು ಗುತ್ತಿಗೆದಾರರಿಗೆ ಲಾಯರ್ ನೋಟಿಸ್ ನೀಡಿದ್ದು ಇನ್ನೂ ಉತ್ತರಿಸಿಲ್ಲ. ಉಪವಿಭಾಗಾಧಿಕಾರಿಯವರು ಪರಿಹಾರ ನೀಡುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರೂ ಪರಿಹಾರ ನೀಡದೇ ಧಿಮಾಕಿನ ಉತ್ತರ ನೀಡುತ್ತಾರೆ ಎಂದು ಆರೋಪಿಸಿದ್ದಾರೆ.
Leave a Comment