ಹಳಿಯಾಳ :- ದೇಶದ ರಕ್ಷಣೆ, ಅಭಿವೃದ್ಧಿ, ಪ್ರಗತಿಗಾಗಿ ಹೋರಾಡುತ್ತಿರುವ ಸೈನಿಕರು, ಅರಣ್ಯ ಸಿಬ್ಬಂದಿಗಳು, ಆರಕ್ಷಕ ಸಿಬ್ಬಂದಿಗಳು ದೇಶವನ್ನು ಮತ್ತು ದೇಶದ ಸಂಪತ್ತನ್ನು ಕಾಪಾಡಲು ಬಾಹ್ಯವಾಗಿ ಮತ್ತು ಆಂತರಿಕವಾಗಿ ಶ್ರಮಿಸುತ್ತಿದ್ದು ಅದರಂತೆಯೇ ಸಂವಿಧಾನದ ಕರ್ತವ್ಯಗಳನ್ನು ಪಾಲಿಸಬೇಕಾಗಿರುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯವಾಗಿದೆ ಎಂದು ಹಳಿಯಾಳ ಕಿರಿಯ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಸನದಿ ಅಭಿಪ್ರಾಯಪಟ್ಟರು.
ಪಟ್ಟಣದ ಅರಣ್ಯ ಇಲಾಖೆಯ ಆವರಣದಲ್ಲಿ ಅರಣ್ಯ ಹುತಾತ್ಮರ ದಿನಾಚರೆಣೆಯ ಕಾರ್ಯಕ್ರಮದಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪವನ್ನು ಸಮರ್ಪಿಸಿ ನಡೆದ ಸಮಾರಂಭದಲ್ಲಿ ಮಾತನಾಡಿದರು. ಅರಣ್ಯ ರಕ್ಷಣೆಯಲ್ಲಿ ತೊಡಗಿದ್ದ ಸಿಬ್ಬಂದಿಗಳಿಗೆ ಹೆಚ್ಚಿನ ರಕ್ಷಣಾ ಸೌಲಭ್ಯವನ್ನು ಮತ್ತು ತಾಂತ್ರಿಕ ಸಾಮಗ್ರಿಗಳನ್ನು ಒದಗಿಸುವ ಅವಶ್ಯಕತೆ ಇದೆ. ಅರಣ್ಯ ಹಾಗೂ ದೇಶದ ರಕ್ಷಣೆಯನ್ನು ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಸ್ ರಮೇಶ ಮಾತನಾಡಿ ಹಳಿಯಾಳ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಮ್.ಎಚ್.ನಾಯ್ಕ ಹಾಗೂ ಅರಣ್ಯ ರಕ್ಷಕ ಅಣ್ಣಪ್ಪ ಮಲ್ಲಪ್ಪ ಮುಗಳಕೋಡ ಅವರುಗಳು ಅರಣ್ಯ ರಕ್ಷಣೆ, ವನ್ಯಜೀವಿ ಸಂರಕ್ಷಣೆಗಾಗಿ ಮಾಡಿದ ಬಲಿದಾನವನ್ನು ಸ್ಮರಿಸಿ ಅವರಿಗೆ ನುಡಿ-ನಮನ ಸಲ್ಲಿಸಿದರು.
1730 ರ ಸಪ್ಟಂಬರ 11 ರಂದು ಜೋಧಪುರನ ಮಹಾರಾಜ ಅಭಯಸಿಂಗ್ನ ಸೈನಿಕರು ಕೆಜರ್ಲಿ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು ರಾಜನ ಹೊಸ ಅರಮನೆಗೆ ಅವಶ್ಯವಿದ್ದ ಕೆಜಲ್ಟ ಮರಗಳನ್ನು ಕಡಿಯಲು ವಿರೋಧಿಸಿದ ಬಿಷ್ಣೋಯಿ ಸಮುದಾಯದ 363 ಪುರುಷ, ಮಹಿಳೆ ಮತ್ತು ಮಕ್ಕಳನ್ನು ಕೊಲ್ಲಲಾಯಿತು. ಮರಗಳ ಸಂರಕ್ಷಣೆಗಾಗಿ ಬಲಿದಾನ ಹೊಂದಿದ ಬಿಷ್ಣೋಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಭಾರತ ಸರಕಾರ ಈ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಘೋಷಿಸಲಾಗಿರುತ್ತದೆ ಎಂದು ರಮೇಶ್ ತಿಳಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಂತೋಷ ಕುಮಾರ ಕೆಂಚಪ್ಪನವರ, ಸಿ.ಕೆ. ಗಾರವಾಡ, ಆನಂದ ಕೆ.ಸಿ., ವಿ.ಟಿ. ಕವರಿ, ವಲಯ ಅರಣ್ಯಾಧಿಕಾರಿಗಳಾದ ಪ್ರಸನ್ನ ಸುಭೇದಾರ, ವಾಗೀಶ ಬಿ.ಜೆ, ದೀಪಕ ನಾಯ್ಕ, ಸತೀಶ ಪೂಜಾರ, ಮಂಜಯ್ಯಾ ಕಳ್ಳಿಮಠ, ಪತ್ರಾಂಕಿತ ವ್ಯವಸ್ಥಾಪಕ ಕೆ.ಬಿ. ಪೂಜಾರ, ಪಿ.ಎಸ್.ಆಯ್ ಆನಂದ ಮೂರ್ತಿ, ಎಮ್.ಎಸ್.ಮಾಳೋದೆ, ಯೋಗೇಶ ನಾಯಕ, ಸಿಬ್ಬಂದಿಗಳಾದ ಎನ್.ಸಿ.ದಳವಾಯಿ, ಶೋಭಾ ಪಾಟೀಲ, ರೇಣುಕಾ ಮಡಿವಾಳ, ಬಸಲಿಂಗಯ್ಯಾ ಬೇವಿನಕೊಪ್ಪಮಠ ಇದ್ದರು.
Leave a Comment