ಹೊನ್ನಾವರ : ಕಳೆದ ವಿಧಾನಸಭೆಯಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ನಿಷ್ಕ್ರಿಯತೆ ತೋರಿದ ಮತಗಟ್ಟೆಗಳಲ್ಲಿ ಪಕ್ಷವನ್ನು ಸದೃಢಗೊಳಿಸಲಾಗುವುದು ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಪಕ್ಷದ ಸಂಘಟನೆಯ ಕುರಿತು ಸುದೀರ್ಘ ಚರ್ಚೆ ನಡೆಸಿ ಕೈಗೊಂಡಿರುವ ನೀರ್ಣಯದ ಕುರಿತು ಮಾತನಾಡಿದರು. ಪ್ರತಿ ಹತ್ತು ಮತಗಟ್ಟೆಗೆ ಒರ್ವರಂತೆ ಪಕ್ಷದ ಏಳು ಮುಖಂಡರನ್ನು ಈ ಪ್ರಕ್ರಿಯೆಗೆ ನೇಮಿಸಲಾಗಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳಾದ ವಿನಾಯಕ ಶೇಟ್, ದಾಮೋದರ ನಾಯ್ಕ, ರಾಜೇಶ ಗುನಗಾ, ಕುಪ್ಪು ಗೌಡ, ಲಂಬೋಧರ ನಾಯ್ಕ, ಮುಸಾ ಅಣ್ಣಿಗೇರಿ, ಮೋಹನ ಮೇಸ್ತ ಇವರನ್ನು ನೇಮಿಸಲಾಗಿದ್ದೂ, ಪ್ರತಿ ಮತಗಟ್ಟೆಯಲ್ಲಿ ಕ್ರಿಯಾಶೀಲ ಕಾರ್ಯಕರ್ತರನ್ನು ಸೇರ್ಪಡೆಗೊಳಿಸುವಂತೆ ಕೋರಲಾಗಿದೆ. ಪಕ್ಷದ ಅಧಿಕೃತ ಸ್ಥಾನಮಾನ ಹೊಂದಿದ್ದು, ಪಕ್ಷದ ಕಾರ್ಯಚಟುವಟಿಕೆಯಲ್ಲಿ ಬಾಗಿಯಾಗದ ಪಕ್ಷದ ಮುಖಂಡರ ಕುರಿತು ಸೂಕ್ತ ಕ್ರಮಕೈಗೊಳ್ಳುವಂತೆ ಪಕ್ಷದ ಹೈಕಮಾಂಡಿಗೆ ವರದಿ ನೀಡಲಾಗುವುದು. ಪಕ್ಷವನ್ನು ಮುಂಬರುವ ಲೋಕಸಭೆ ಚುನಾವಣೆಗೆ ಸಂಪೂರ್ಣ ಸಜ್ಜುಗೊಳಿಸುವ ಉದ್ದೇಶದಿಂದ ಸದ್ಯದಲ್ಲೇ ಜನಸಂಪರ್ಕ ಅಭಿಯಾನದ ಮೂಲಕ ಪ್ರತಿ ಮತಗಟ್ಟೆಯಲ್ಲಿರುವ ಮನೆಮನೆಗಳಿಗೆ ಆಯಾ ಬೂತ್ ಮಟ್ಟದ ಕಾರ್ಯಕರ್ತರು ತೆರಳಿ ಕಾಂಗ್ರೆಸ್ ದೇಶಕ್ಕೆ ನೀಡಿದ ಉತ್ತಮ ಕಾರ್ಯಕ್ರಮ, ದೇಶ ಇಂದು ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ವಿವರಿಸಿ ಜನಸಾಮಾನ್ಯರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಂತ ಪ್ರಯತ್ನ ನಡೆಸಲಾಗುವುದು ಎಂದು ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ.
Leave a Comment