ಹಳಿಯಾಳ : ಕೇಂದ್ರ ಸರ್ಕಾರವು ಬಡವರಿಗೆ ವರದಾನವಾಗಿದ್ದು, ಉಚಿತ ಸಿಲೆಂಡರ್ ವಿತರಣೆ, ಜನೌಷಧಿ ಅಂಗಡಿಗಳ ಸ್ಥಾಪನೆ ಸೇರಿದಂತೆ ಇನ್ನಿತರ ಯೋಜನೆಗಳ ಮೂಲಕ ಬಡವರ ಜೀವನ ಮಟ್ಟದಲ್ಲಿ ಸುಧಾರಣೆಯು ಕಂಡು ಬಂದಿದೆ. ರಾಜ್ಯ ಸರಕಾರವು ಮುನ್ನಡೆಸುತ್ತಿರುವ ಅನ್ನಭಾಗ್ಯದ ಯೋಜನೆಗೆ ಕೇಂದ್ರ ಸರಕಾರವು ಪ್ರತಿವರ್ಷ ಸಾವಿರಾರು ಕೋಟಿ ರೂಗಳ ಅನುದಾನವನ್ನು ನೀಡುತ್ತಿದ್ದು ಸುಮಾರು 3 ಲಕ್ಷ ಕೋಟಿ ರೂ ಅನುದಾನ ರಾಜ್ಯ ಸರ್ಕಾರಕ್ಕೆ ನೀಡಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು.
ಪಟ್ಟಣದ ಶ್ರೀ ಗಣೇಶ ಕಲ್ಯಾಣ ಮಂಟಪದಲ್ಲಿ ನಡೆದ ಬಡವರಿಗೆ ಉಜ್ಜಲ್ ಯೋಜನೆಯಡಿ ಉಚಿತವಾಗಿ 104 ಗ್ಯಾಸ ಸಿಲೆಂಡರ್, ಒಲೆ ಸೇರಿದಂತೆ ಕಿಟ್ ವಿತರಿಸಿ ಮಾತನಾಡಿದ ಅವರು, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಬಡವರ ಪರವಾಗಿದ್ದು ಹಲವಾರು ಯೋಜನೆಗಳ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರ ಮನ ಗೆದ್ದಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಜನೋಪಯೋಗಿ ಯೋಜನೆಗಳು ಬಡವರ ಮನೆ ಬಾಗಿಲಿಗೆ ತಲುಪಿವೆ ಎಂದರು.
ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ಅನುದಾನದಲ್ಲಿಯೇ ರಾಜ್ಯ ಸರ್ಕಾರದ ಬಹುತೇಕ ಯೋಜನೆಗಳು ಮುಂದುವರೆದಿದ್ದು ಅವುಗಳು ತಮ್ಮ ಯೋಜನೆಗಳೆಂದು ರಾಜ್ಯ ಸರಕಾರವು ಬಿಂಬಿಸುತ್ತಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದ ಎಲ್ಲಾ ಯೋಜನೆಗಳು ಮತ್ತು ಅವುಗಳಿಗೆ ನೀಡಲಾಗುವ ಅನುದಾನದ ಸಮೇತ ಕ್ಷೇತ್ರದಲ್ಲಿ ಪ್ರಚಾರ ಅಭಿಯಾನ ಆರಂಭಿಸಲಾಗುವುದು. ಇಗಾಗಲೇ ತಾಲೂಕಿನ ಸುಮಾರು 50ಕ್ಕೂ ಅಧಿಕ ಗ್ರಾಮಗಳ 1000ಕ್ಕೂ ಅಧಿಕ ಕುಟುಂಬಗಳಿಗೆ ಗ್ಯಾಸ್ ಮತ್ತು ಒಲೆಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದರು.
ವೇದಿಕೆಯಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಪುರಸಭಾ ಸದಸ್ಯರಾದ ಸಂತೋಷ ಘಟಕಾಂಬಳೆ, ಚಂದ್ರು ಕಮ್ಮಾರ, ಉದಯ ಹೂಲಿ, ರೂಪಾ ಗಿರಿ, ಶಾಂತಾ ಹಿರೇಕರ, ರಾಜೇಶ್ವರಿ ಹಿರೇಮಠ, ಸಂಗೀತಾ ಜಾಧವ, ಮಹಿಳಾಘಟಕದ ಜಿಲ್ಲಾಧ್ಯಕ್ಷೆ ಜಯಲಕ್ಷ್ಮೀ ಚವ್ಹಾಣ, ಇಂಡೇನ್ ಗ್ಯಾಸ್ ವಿತರಕರಾದ ಚಂದ್ರಕಾಂತ ಅಂಗಡಿ, ಸಂತಾನ ಸಾವಂತ,ರಾಜು ಹಳ್ಳುಕರ ಇದ್ದರು.
Leave a Comment