
ಬೆಂಗಳೂರು :
ಕೇಂದ್ರ ಕೌಶಲ್ಯಅಭಿವೃದ್ಧಿ ಹಾಗೂ ಉದ್ಯಮಶೀಲ ರಾಜ್ಯ ಸಚಿವ ಅನಂತಕುಮಾರ ಹೆಗಡೆಯವರು, ರಾಷ್ಟ್ರಪತಿ ರಾಮನಾಥ ಕೋವಿಂದರ ನಿಯೋಗದಲ್ಲಿ ಪಾಲ್ಗೊಂಡು ವಿಯಟ್ನಾಮ್ ನ ಪ್ರವಾಸದಲ್ಲಿ, ಅಲ್ಲಿಯ ಚಾಮ್ ವಂಶದ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿದ್ದರು.
ತಮ್ಮ ಪ್ರವಾಸದ ಕುರಿತು ಮಾಹಿತಿಯನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿರುವ ಸಂಸದ ಹೆಗಡೆ ಅವರು
“ಚಂಪಾಪುರಿ, ಪ್ರಾಚೀನ ಭಾರತದ ಅಂಗ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವಿಯಟ್ನಾಮ್ ಎಂಬ ಹೆಸರಿನಲ್ಲಿ ಖ್ಯಾತವಾಗಿರುವ ಚಂಪಾ, ವಿದೇಶಿ ವ್ಯಾಪಾರದ ಕೇಂದ್ರವಾಗಿತ್ತು.
ಭಾರತದಲ್ಲಿ ಮೊಳಕೆ ಒಡೆದ ಸನಾತನ ಧರ್ಮ ತನ್ನ ಬೇರನ್ನು ದಶದಿಕ್ಕುಗಳಲ್ಲಿ ಹರಡಿಕೊಂಡಿತ್ತು. ಭಾರತದ ದಕ್ಷಿಣ ಪ್ರಾಂತ್ಯದಿಂದ ಪ್ರಾರಂಭಿಸಿ ಈಶಾನ್ಯ ರಾಜ್ಯಗಳ ಮೂಲಕ ಹೊರಟ ನಮ್ಮ ಸಂಸ್ಕೃತಿ, ನೆರೆಯ ದೇಶಗಳಾದ ಲಾವೊಸ್, ವಿಯಟ್ನಾಮ್, ಕಾಂಬೋಡಿಯ ಹೀಗೆ ಹಲವಾರು ದೇಶಗಳಲ್ಲಿ ಬೇರೂರಿದೆ ಎಂದಿದ್ದಾರೆ.

70 ವರ್ಷಗಳ ನಮ್ಮ ದೇಶದ ಆಡಳಿತದಲ್ಲಿ ನೆರೆಯ ನಮ್ಮದೇ ಸಂಸ್ಕೃತಿಯ ವಾರಸುದಾರರನ್ನು, ಜಾತ್ಯತೀತ ಸಿದ್ಧಾಂತದ ಅನ್ವಯ ಇವರೆಲ್ಲರನ್ನು ಸಂಪೂರ್ಣವಾಗಿ ಕಡೆಗಣಿಸುತ್ತ ಬಂದೆವು. ಇಂದು ಇವೆಲ್ಲವನ್ನು ಸರಿಪಡಿಸಿಕೊಂಡು ನಮ್ಮ ಸಂಸ್ಕೃತಿಯ ಬೇರನ್ನು ಈ ರಾಷ್ಟ್ರಗಳಲ್ಲಿ ಮತ್ತಷ್ಟು ಬಲಪಡಿಸುವ ನಮ್ಮ ಪ್ರಯತ್ನ ಮುಂದುವರಿದಿದೆ. ಈ ದಿಕ್ಕಿನಲ್ಲಿ ನಮ್ಮ ಪೂರ್ವಜ ಸಂಸ್ಕೃತಿ ಮತ್ತು ಧಾರ್ಮಿಕತೆಯನ್ನು ಹಂಚಿಕೊಂಡಿರುವ ಈ ರಾಷ್ಟ್ರಗಳಲ್ಲಿ ಹಲವು ಪುರಾತನ ಸ್ಮಾರಕಗಳ ಸಂರಕ್ಷಣೆಗೆ ಭಾರತ ಸರ್ಕಾರ ಆಸಕ್ತಿ ವಹಿಸಿದೆ ಎಂದು ವಿವರಿಸಿರುವ ಸಂಸದರು.
ಹಲವಾರು ಪಾಳುಬಿದ್ದ ಹಿಂದು ದೇವಸ್ಥಾನಗಳನ್ನು ಅಲ್ಲಿ ಕಾಣ ಬಹುದು. ಅದರಲ್ಲಿ ಒಂದಾದ ಮೈ ಸನ್ ದೇವಸ್ಥಾನ ಪ್ರಾಚೀನ ಚಂಪಾ ಸಾಮ್ರಾಜ್ಯದ ಸಾಂಸ್ಕೃತಿಕ ರಾಜಧಾನಿಯಾಗಿತ್ತು. ಇಂದಿಗೂ ಈ ದೇವಸ್ಥಾನದಲ್ಲಿ ಶಿವ ಹಾಗು ವಿಷ್ಣುವಿನ ಪ್ರತಿಮೆಗಳನ್ನು ಕಾಣಬಹುದು.
ಯಾವ ಎರಡು ದೇಶಗಳ ನಡುವೆ ಸಾಂಸ್ಕೃತಿಕ ಸಂಭಂದ ಗಟ್ಟಿಯಾಗಿರುತ್ತದೆಯೋ, ಆ ಎರಡು ದೇಶಗಳ ನಡುವಿನ ಬೇರೆಲ್ಲಾ ಸಂಭಂದಗಳು ಸ್ವಾಭಾವಿಕವಾಗಿ ಹಾಗೂ ಬಹುಕಾಲ ಸ್ತಿರವಾಗಿರುತ್ತವೆ. ಈ ಮನೋಭಾವದಿಂದ, ವಿಯಟ್ನಾಮ್ ನಲ್ಲಿರುವ ಹಲವು ಪುರಾತನ ಸ್ಮಾರಕ ಮತ್ತು ಹಿಂದು ದೇವಾಲಯಗಳ ಸಂರಕ್ಷಣೆಯನ್ನು ನಮ್ಮ ದೇಶದ ಪುರಾತತ್ವ ಇಲಾಖೆ ಈಗಾಗಲೇ ಕೈಗೊಂಡಿದೆ.”
ಎಂದು ಸಂಸದ ಅನಂತಕುಮಾರ ಹೆಗಡೆ ಮಾಹಿತಿ ನೀಡಿದ್ದಾರೆ.


Leave a Comment