ಹಳಿಯಾಳ: ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಕಾಳಿ ನದಿಯಲ್ಲಿ ಆಕಸ್ಮಿಕವಾಗಿ ಮುಳುಗಿ ನಾಲ್ವರನ್ನು ಬಲಿ ತೆಗೆದುಕೊಂಡ ಘಟನಾ ಸ್ಥಳಕ್ಕೆ ಕಂದಾಯ ಮತ್ತು ಜಿಲ್ಲಾ ಉಸ್ತುವಾಗಿ ಸಚಿವ ಆರ್.ವಿ.ದೇಶಪಾಂಡೆ ಮಂಗಳವಾರ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಅವರು ದುಃಖತಪ್ತ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದರು. ಅಲ್ಲದೇ, “ಕಷ್ಟದಲ್ಲಿ ಸಿಲುಕಿಕೊಂಡಿರುವ ಈ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಅಗತ್ಯ ಪರಿಹಾರ ಕೊಡಿಸಲಾಗುವುದು”, ಎಂದು ದೇಶಪಾಂಡೆಯವರು ಭರವಸೆ ನೀಡಿದರು.
“ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಅಸುನೀಗಿರುವುದು ದುಃಖಕರವಾದ ಘಟನೆಯಾಗಿದೆ. ಇದರಿಂದಾಗಿ ಆ ಕುಟುಂಬ ನೋವಿನಲ್ಲಿ ಮುಳುಗುವಂತಾಗಿದೆ. ಕುಟುಂಬದ ಸದಸ್ಯರಿಗೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೊರೆಯಲಿ”, ಎಂದು ಸಚಿವರು ಕಂಬನಿ ಮಿಡಿದಿದ್ದಾರೆ.
ಅಲ್ಲದೇ ನೀರಿಯಲ್ಲಿ ಮುಳುಗುತ್ತಿರುವ ರಾಮಿಬಾಯಿ ಯವರನ್ನು ತಮ್ಮ ಜೀವದ ಹಂಗು ತೊರೆದು ರಕ್ಷಿಸಿದ ಡುಮಿಂಗ್ ಜುಜೆ ಸಿದ್ದಿ ಇವರಿಗೆ ಸಚಿವರು ಅಭಿನಂದಿಸಿ, ಪ್ರಶಂಸನಾ ಪತ್ರ ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸುಭಾಶ ಕೋರ್ವೆಕರ ಇನ್ನಿತರ ಪ್ರಮುಖರು ಜೊತೆಯಲ್ಲಿದ್ದರು.
Leave a Comment