ಹಳಿಯಾಳ : ಕೇರಳ ಸರ್ಕಾರವು ಕೋರ್ಟ ಆದೇಶದ ಪರಿಪಾಲನೆ ನೆಪವನ್ನು ಮುಂದಿಟ್ಟು ಮಧ್ಯವಯಸ್ಕ ಮಹಿಳೆಯರಿಬ್ಬರನ್ನು ಪೋಲಿಸ್ ಬಂದೋಬಸ್ತನಲ್ಲಿ ಅಯ್ಯಪ್ಪಸ್ವಾಮಿ ಸನ್ನಿಧಿ ಪ್ರವೇಶ ಮಾಡುವಂತೆ ಮಾಡಿ ಸಾವಿರಾರು ವರ್ಷಗಳ ಸಂಪ್ರದಾಯಕ್ಕೆ ಮತ್ತು ಭಕ್ತರ ಮನೋಭಾವನೆಗೆ ಧಕ್ಕೆಯನ್ನುಂಟು ಮಾಡಿರುವುದು ಖಂಡನೀಯವಾಗಿದೆ ಎಂದಿರುವ ಹಳಿಯಾಳ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪಟ್ಟಣದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿ ಸೇವಾ ಸಂಘದಿಂದ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಬುಧವಾರ ತಹಶೀಲದಾರ ವಿದ್ಯಾಧರ ಗುಳಗುಳಿ ಅವರಿಗೆ ಸಲ್ಲಿಸಿದರು.
ಪಟ್ಟಣದ ಮರಡಿಗುಡ್ಡದಲ್ಲಿರುವ ಶ್ರೀ ಅಯ್ಯಪ್ಪಾಸ್ವಾಮಿ ದೇವಸ್ಥಾನದಲ್ಲಿ ತಿಂಗಳ ಕಾಲ ವೃತವನ್ನು ಆಚರಿಸಿ ಶಬರಿಮಲೈಗೆ ಸ್ವಾಮಿಯ ದರ್ಶನಕ್ಕಾಗಿ ತೆರಳುತ್ತಿದ್ದ 55ಕ್ಕೂ ಅಧಿಕ ಮಾಲಾಧಿಗಳು ಇರುಮುಡಿ ಸಮೇತ ಶ್ರೀ ಗಣೇಶ ಕಲ್ಯಾಣ ಮಂಟಪ, ಶಿವಾಜಿ ವೃತ್ತ, ವನಶ್ರೀ ವೃತ್ತದ ಮೂಲಕ ಮೆರವಣ ಗೆಯಲ್ಲಿ ಸಾಗಿ ಮಿನಿವಿಧಾನಸೌಧಕ್ಕೆ ಆಗಮಿಸಿ ಕೆರಳ ಸರ್ಕಾರದ ನಡೆ ಖಂಡಿಸಿ ಮನವಿ ಸಲ್ಲಿಸಿದ್ದು ವಿಶೇಷವಾಗಿತ್ತು.
ಶ್ರೀ ಅಯ್ಯಪ್ಪಾ ದೇವಸ್ಥಾನದಲ್ಲಿ ಅನಾಧಿಕಾಲದಿಂದ ಪಂದಳ ರಾಜ ಮನೆತನದವರಿಂದ ಹಾಗೂ ಭಕ್ತರಿಂದ ಸಾಂಪ್ರದಾಯಿಕವಾಗಿ ಪೂಜೆ ವಿಧಿ ವಿಧಾನಗಳನ್ನು ನಡೆಸುತ್ತಾ ಬಂದಿದ್ದು, ಅಂದಿನಿಂದ ಗರ್ಭಗುಡಿಯ ಹತ್ತಿರ ಪ್ರಾಯದ ಹೆಣ್ಣು ಮಕ್ಕಳಿಗೆ ಅವಕಾಶ ನಿಷೇಧ ಮಾಡಲಾಗಿದ್ದರೂ ಕೂಡ ಕೇರಳ ಸರ್ಕಾರ ಕೋರ್ಟ ಆದೇಶದ ಪರಿಪಾಲನೆಯಲ್ಲಿ ಮಹಿಳೆಯರಿಬ್ಬರನ್ನು ಸನ್ನಿಧಿಗೆ ಬಿಟ್ಟು ಅನಾದಿಕಾಲದ ಸಂಪ್ರದಾಯಕ್ಕೆ ಮತ್ತು ಭಕ್ತ ಮನೋಭಾವನೆಗೆ ಧಕ್ಕೆಯನ್ನುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ ವೃತಧಾರಿಗಳು ಗರ್ಭಗುಡಿಯಲ್ಲಿ ಮಹಿಳೆಯರ ಪ್ರವೇಶದಿಂದ ಭಕ್ತ ಮನಸ್ಸಿಗೆ ಆಘಾತವಾಗಿದ್ದು ಜೊತೆಗೆ ವಿಶ್ವಾಸ ಮತ್ತು ನಂಬಿಕೆಗೆ ದ್ರೋಹ ಎಸಗಿದಂತಾಗಿದೆ ಎಂದಿದ್ದಾರೆ.
ಬ್ರಹ್ಮಚರ್ಯದ ವೃತಾಚರಣೆ ಮತ್ತು ಪೂಜಾ ವಿಧಾನಗಳಲ್ಲಿ ಅಪಾರ ನಂಬಿಕೆಯನ್ನು ಇಟ್ಟು ಭಕ್ತಿಯಿಂದ ಲಕ್ಷಾಂತರ ಜನರು ಕಠಿಣ ವೃತವನ್ನು ಆಚರಿಸಿ ಬರಿಗಾಲಿನಲ್ಲಿ ಗುಡ್ಡಗಾಡಿನ ಹಾದಿಯನ್ನು ಕ್ರಮಿಸಿ ಅಯ್ಯಪ್ಪಸ್ವಾಮಿ ದರ್ಶನ ಪಡೆಯುತ್ತಾರೆ. ಅಲ್ಲದೇ ಮಧ್ಯ ವಯಸ್ಸಿನ ಮಹಿಳೆಯರಿಗೆ ಈ ವೃತಾಚರಣೆಗೆ ಅವಕಾಶವಿರುದಿಲ್ಲ. ಆದ್ದರಿಂದ ಅವರ ಗರ್ಭಗುಡಿಯ ಪ್ರವೇಶವನ್ನು ಮುಂದಿನ ದಿನಗಳಲ್ಲಿ ತಡೆಯುವಂತೆಯೂ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸಿದ ಬಳಿಕ ಪಟ್ಟಣದ ಪ್ರಮುಖ ದೇವಸ್ಥಾನಗಳಿಗೆ ತೆರಳಿದ ವೃತಧಾರಿಗಳು ಯಲ್ಲಾಪೂರ ನಾಕೆಯ ಮೂಲಕ ಶಬರಿಮಲೆಗೆ ಪ್ರವಾಸ ಬೆಳೆಸಿದರು.
ಈ ಸಂದರ್ಭದಲ್ಲಿ ಸೇವಾ ಸಂಘದ ಕಾರ್ಯದರ್ಶಿ ಸತ್ಯಜೀತ ಗಿರಿ, ಗುರುಸ್ವಾಮಿ ವಿಲಾಸ ತೇಲಂಗ್, ಪುರಸಭೆ ಸದಸ್ಯರಾದ ಸಂತೋಷ ಘಟಕಾಂಬಳೆ, ಚಂದ್ರು ಕಮ್ಮಾರ, ದತ್ತಾ ಬಾಂದೇಕರ, ವಿಲಾಶ ಕಣಗಲಿ, ಗಣಪತಿ ನಾಯ್ಕ, ವೃತಧಾರಿಗಳಾದ ಶಿವಾಜಿ ಬಂಡಿವಡ್ಡರ, ಸತೀಶ ಚಲವಾದಿ, ರಾಕೇಶ ವಾಲೇಕರ, ವಿಠ್ಠಲ ನವಲೆ, ಮಹೇಶ ಗೋಸಪ್ಪನ್ನವರ, ಚೇತನ ಘಟಕಾಂಬಳೆ, ದೀಪಕ ಗೌಳಿ, ಶಂಕರ ಲಕಡೆ, ಶಿವಪ್ಪ ಅರೇಬೇಡರ್, ಸಂಜು ಬೇಡರ, ಉದಯ ದೇವಕಾರಿ, ನೇತ್ರೆಕರ, ಓಂಕಾರ ಪಾಟೀಲ್ ಇದ್ದರು.
Leave a Comment