
ಭಟ್ಕಳ: ಹಾಸನದಲ್ಲಿ ಡಾ. ರಾಜೀವ್ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಡಾ. ರಾಜೀವ್ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 86ನೇ ಸರ್ವ ಸದಸ್ಯರ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಭಾಗವಹಿಸಿದ್ದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಭಟ್ಕಳ ಅವರು ಹಲವಾರು ಸಲಹೆ ಸೂಚನೆಗಳನ್ನು ನೀಡಿದರು.
ವಿಷಯ ಪ್ರಸ್ತಾಪಿಸಿದ ರಾಧಾಕೃಷ್ಣ ಭಟ್ಟ ಅವರು ರಾಜ್ಯದಲ್ಲಿ ರಾಜಕೀಯ ಶಕ್ತಿಯನ್ನು ಬಳಸಿ ಇಲ್ಲವೇ ಪೊಲೀಸ್ ಬಲವನ್ನು ಬಳಸಿ ಅನೇಕ ಪತ್ರಕರ್ತರನ್ನು ದಮನ ಮಾಡುವ ಇಲ್ಲವೇ ಅವರಿಗೆ ಬೆದರಿಸುವ ತಂತ್ರವನ್ನು ಹೆಣೆಯಲಾಗುತ್ತಿದೆ. ಇಂತಹ ಹಲವಾರು ಪ್ರಕರಣಗಳು ರಾಜ್ಯದಲ್ಲಿ ನಡೆದಿದ್ದು ಇದನ್ನು ತಡೆಯಲು ರಾಜ್ಯ ಸರಕಾರ ಮುಂದಾಗಬೇಕು. ಈ ಕುರಿತು ಸರ್ವ ಸದಸ್ಯರ ಸಭೆಯಲ್ಲಿ ಠರಾಯಿಸಿ ರಾಜ್ಯ ಸರಕಾರಕ್ಕೆ ಈ ಕುರಿತು ಸೂಕ್ತ ಕ್ರಮಕ್ಕೆ ಕೋರಬೇಕು ಎಂದರು.
ನಮ್ಮ ಸಂಘಟನೆಯ 1932ರಷ್ಟು ಹಿಂದೆಯೇ ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾಗಿರುವ ಸಂಘಟನೆಯಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ.
ನಮ್ಮ ಸಂಘಟನೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹದ್ದಿನ ಕಣ್ಣಿಡುತ್ತಾರೆ. ಅಲ್ಲದೇ ಅನೇಕ ಕಟ್ಟುಪಾಡುಗಳನ್ನು ನಾವು ಪಾಲಿಸಿಕೊಂಡು ಬಂದಿದ್ದೇವೆ.
ಆದರೆ ಇನ್ನೂ ತನಕ ಯಾವೊಂದು ಸದಸ್ಯನಿಗೂ ಕೂಡಾ ಕಾರ್ಮಿಕ ಇಲಾಖೆಯ ಸೌಲಭ್ಯವನ್ನು ಪಡೆದುಕೊಳ್ಳುವಲ್ಲಿ ಸದಸ್ಯರಿಗೆ ಸಾಧ್ಯವಾಗಿಲ್ಲ.
ಈ ಕುರಿತು ರಾಜ್ಯ ಸಂಘದ ವತಿಯಿಂದ ಕ್ರಮ ಕೈಗೊಂಡು ಕಾರ್ಮಿಕ ಇಲಾಖೆಯ ಸೌಲಭ್ಯವನ್ನು ನಮಗೂ ವಿಸ್ತರಿಸುವಲ್ಲಿ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಕೋರಿದರು.
ಈಗಾಗಲೇ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಉಚಿತ ಚಿಕಿತ್ಸೆಯನ್ನು ನೀಡುವ ಕುರಿತು ಸರಕಾರ ಆದೇಶ ಮಾಡಿದ್ದನ್ನು ಸ್ವಾಗತಿಸಿ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಅಭಿನಂದಿಸಿದರು.
ಅಲ್ಲದೇ ರಾಜ್ಯ ಸಂಘದ ಕುರಿತು ಹಲವರು ಸಾಮಾಜಿ ಜಾಲ ತಾಣದಲ್ಲಿ ಇಲ್ಲದ ಸಲ್ಲದ ಸುದ್ದಿಗಳನ್ನು ಹರಿಯ ಬಿಡುತ್ತಿದ್ದು ಇದು ರಾಜ್ಯ ಸಂಘದ ಗೌರವಕ್ಕೆ ಮತ್ತು ಪದಾಧಿಕಾರಿಗಳ ಗೌರವಕ್ಕೆ ಕುತ್ತು ತರುತ್ತಿದೆ. ಇಂತಹ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಾಕುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಈ ಹಿಂದೆಯೇ ಕಾರ್ಯಕಾರಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು ಅದನ್ನು ಜ್ಯಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಸಂಘದ ವತಿಯಿಂದ ಮಾಧ್ಯಮ ಅಕಾಡೆಮಿಗೆ ಹೆಸರುಗಳನ್ನು ಶಿಫಾರಸು ಮಾಡುವಾಗ ಈ ಹಿಂದೆ ಮಾಧ್ಯಮ ಅಕಾಡೆಮಿಯ ಸದಸ್ಯರಾದವರ ಹೆಸರನ್ನು ಹೊರತು ಪಡಿಸಿ ಶಿಫಾರಸು ಮಾಡಬೇಕು.
ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎಂದು ಸಭೆಯ ಗಮನಕ್ಕೆ ತಂದಿದ್ದಾರೆ.
Leave a Comment