
ಹಳಿಯಾಳ :- ಸ್ವಚ್ಚತೆಯ ವಿಷಯದಲ್ಲಿ ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪುರಸ್ಕøತವಾಗಿರುವ ಹಳಿಯಾಳ ಪುರಸಭೆಯು ಪಟ್ಟಣವನ್ನು ಇನ್ನೂ ಸುಂದರವಾಗಿ ಕಾಣಲು ಶ್ರಮವಹಿಸುತ್ತಿದ್ದು, ಪಟ್ಟಣದಲ್ಲಿ ಎಲ್ಲೂ ಪ್ಲಾಸ್ಟಿಕ್ ಸಂಬಂಧಿ ವಸ್ತುಗಳು ಸೇರಿದಂತೆ ಇನ್ನಿತರ ಕಸ ಹರಡದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಹಾಕಲು ಕಸದ ಡಬ್ಬ(ತೊಟ್ಟಿ)ಗಳನ್ನು ಅಳವಡಿಸಲು ಮುಂದಾಗಿದೆ.
ಸಾರ್ವಜನಿಕ ಸ್ಥಳಗಳು ಸೇರಿದಂತೆ ಉದ್ಯಾನವನಗಳಲ್ಲಿ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಚೀಪ್ಸ್, ಕುರಕುರೆ ಇನ್ನಿತರ ಪ್ಲಾಸ್ಟಿಕ್ ಪ್ಯಾಕೆಟ್ನಲ್ಲಿರುವ ಆಹಾರವನ್ನು ಸೇವಿಸಿ ಅವುಗಳ ಪ್ಯಾಕೇಟ್ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದು ಹಾಗೂ ಯುವಕರ ಗುಂಪು ಹುಟ್ಟು ಹಬ್ಬದ ಆಚರಣೆಯ ನೆಪದಲ್ಲಿ ಆಹಾರ ಪಾರ್ಸಲ್ ತಂದ ಪ್ಲಾಸ್ಟಿಕ್ ಪ್ಯಾಕೆಟಗಳು, ನೀರಿನ ಬಾಟಲಗಳು, ಬಿಯರ್ ಬಾಟಲ್, ಸರಾಯಿಯ ಟೆಟ್ರಾ ಪ್ಯಾಕೆಟಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಎಸೆಯುತ್ತಿರುವುದರಿಂದ ಸುಂದರ ಮತ್ತು ಸ್ವಚ್ಚ ಪಟ್ಟಣದ ಪರಿಕಲ್ಪನೆಗೆ ಧಕ್ಕೆಯಾಗುತ್ತಿರುವ ಕಾರಣ ಪ್ರಮುಖ ಸ್ಥಳಗಳಲ್ಲಿ ಈ ಕಸದ ಡಬ್ಬಗಳನ್ನು ಅಳವಡಿಸಲು ಪುರಸಭೆ ಮುಂದಾಗಿದೆ.
ಈಗಾಗಲೇ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಜೀಜಾಮಾತಾ ಮಹಿಳಾ ಸಂಘಟನೆ, ಮಂಜು ಡ್ಯಾನ್ಸ್ ಮತ್ತು ಕರಾಟೆ ಶಾಲೆ, ಪತಂಜಲಿ ಯೋಗ ಸಮೀತಿ, ಜಯ ಕರ್ನಾಟಕ ಸಂಘಟನೆ, ಪತ್ರಕರ್ತರು ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳು ತಾಲುಕಾಡಳಿತದ ನೇತೃತ್ವದಲ್ಲಿ ಪಟ್ಟಣದಲ್ಲೆಡೆ ದಿನಂಪ್ರತಿ ಸ್ವಚ್ಚತಾ ಶ್ರಮದಾನದಲ್ಲಿ ತೊಡಗಿ ಸಾರ್ವಜನೀಕರಲ್ಲಿ ಜಾಗೃತಿಯನ್ನು ಮೂಡಿಸುವ ಮೂಲಕ ಪುರಸಭೆಗೆ ಸಾಥ್ ನೀಡಿದ್ದಾರೆ.
ಈ ಎಲ್ಲ ಕಾರಣಗಳಿಂದ ಈಗ ಪುರಸಭೆಯು ಜನತೆ ಕಸವನ್ನು ಸಾರ್ವಜನಿಕ ಸ್ಥಳಗಳಲ್ಲಿ ಚೆಲ್ಲುವುದರ ಮೂಲಕ ಸುಂದರ ಮತ್ತು ಸ್ವಚ್ಚ ಪಟ್ಟಣದ ಪರಿಕಲ್ಪನೆಗೆ ಧಕ್ಕೆ ತರಬಾರದು ಎಂದು ಉದ್ದೇಶದಿಂದ ದೊಡ್ಡ ಗಾತ್ರದ ಎರಡು ಕಸದ ಡಬ್ಬಗಳ ಮಾದರಿಯ ತೊಟ್ಟಿಗಳನ್ನು ಪಟ್ಟಣದ ಅಂಚಿನ ಅಭಿವೃದ್ದಿಗೊಂಡಿರುವ ಹೊರಗಿನ ಗುತ್ತೀಗೇರಿ ಕೆರೆಯ ಆವರಣ, ಮಾರುಕಟ್ಟೆ ಪ್ರದೇಶ, ಉದ್ಯಾನವನಗಳು ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲು ಉದ್ದೇಶಿಸಿದೆ.
ಈ ಕುರಿತು ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಸ್ವಚ್ಚತೆಗೆ ಪಟ್ಟಣದಲ್ಲಿ ಪ್ರಮುಖ ಪ್ರಾಶಸ್ತ್ಯ ನೀಡಲಾಗಿರುವ ಕಾರಣ ಸಾರ್ವಜನೀಕರು, ಸಂಘ-ಸಂಸ್ಥೆಗಳ ಸಹಕಾರದಲ್ಲಿ ಹಳಿಯಾಳ ಪಟ್ಟಣವನ್ನು ಪ್ಲಾಸ್ಟಿಕ ಕಸ ಮುಕ್ತ ಮಾಡುವ ಉದ್ದೇಶವನ್ನು ಪುರಸಭೆ ಹೊಂದಿದೆ ಎಂದರು.
ಪರಿಸರ ಅಭಿಯಂತರರಾದ ಬಿ.ಎಸ್.ದಕ್ಷೀತಾ ಮಾತನಾಡಿ ಪಟ್ಟಣದಲ್ಲಿ ಈಗಾಗಲೇ ಎಲ್ಲೆಂದರಲ್ಲಿ ಕಸ ಚೆಲ್ಲುವ ಹಾಗೂ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಬಳಕೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಈಗ ಕಸವನ್ನು ಎಲ್ಲೆಂದರಲ್ಲಿ ಚೆಲ್ಲದಂತೆ ಸ್ವಚ್ಚತೆ ಕಾಪಾಡಲು ಗುಣಮಟ್ಟದ ಕಸದ ಡಬ್ಬಗಳನ್ನು ಅಳವಡಿಸಲು ಕಸದ ಡಬ್ಬಗಳನ್ನು ಖರೀದಿಸುವ ಪ್ರಕ್ರಿಯೆ ಪುರಸಭೆಯಿಂದ ನಡೆದಿದೆ ಎಂದರು.
Leave a Comment