
ಹೊನ್ನಾವರ ಜು. 22 : ಮಂಗಳೂರು ಜ್ಯೋತಿಯಲ್ಲಿರುವ ಕೆ.ಎಂ.ಸಿ. ಆಸ್ಪತ್ರೆಯ ಹೃದಯ ವಿಭಾಗದ ಮುಖ್ಯಸ್ಥ ಡಾ. ಪದ್ಮನಾಭ ಕಾಮತ್ ಇವರ ನೂತನ ಯೋಜನೆ ಹೃದಯ ಸಮಸ್ಯೆಗೆ ವಾಟ್ಸಾಪ್ ಸಲಹೆ ಎಂಬ ಸುದ್ದಿಯನ್ನು 24ತಾಸುಗಳಲ್ಲಿ 82,388 ಜನ ನೋಡಿದ್ದಾರೆ. 603 ಜನ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ವೈದ್ಯರುಗಳ ಸಹಿತ 60ಜನ ಸ್ಪಂದಿಸಿದ್ದು, ತುರ್ತು ಚಿಕಿತ್ಸೆ ಅಗತ್ಯವುಳ್ಳ ಇಳಿವಯಸ್ಸಿನ 20ಜನರಿಗೆ ಡಾ. ಕಾಮತ್ ಸಲಹೆ, ಸೂಚನೆ ನೀಡಿದ್ದಾರೆ.

ಹಾವೇರಿ, ಚಿತ್ರದುರ್ಗ 2, ಕಡೂರು, ತೀರ್ಥಹಳ್ಳಿ, ದೇವನಹಳ್ಳಿ, ಮೈಸೂರು, ಸುಳ್ಯ, ಪುತ್ತೂರು, ಯಾದಗಿರಿ ತಲಾ 1, ಬೆಂಗಳೂರು 3, ಅತಿಹೆಚ್ಚು 8 ಉತ್ತರಕನ್ನಡದಿಂದ ಅದರಲ್ಲಿ ಕುಮಟಾದಿಂದ 4. ಇವುಗಳಲ್ಲಿ 3 ಒಮ್ಮೆ ಹೃದಯಾಘಾತವಾದ ಪ್ರಕರಣವಾಗಿದ್ದು ಅವರಿಗೆ ಕೂಡಲೇ ಮತ್ತು ಉಳಿದವರಿಗೆ ತಮಗೆ ಹತ್ತಿರವಾದ ಊರಿನ ಹೃದಯತಜ್ಞರಲ್ಲಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಲಾಗಿದೆ. ಹೃದಯದ ಸಮಸ್ಯೆಯ ಕುರಿತು ಗೊಂದಲದಲ್ಲಿದ್ದ ಇವರಿಗೆ ಸರಿಯಾಗಿ ಮಾರ್ಗದರ್ಶನ ನೀಡಲಾಗಿದೆ. ಇದು ಹೃದಯ ಖಾಯಿಲೆಯ ಗಂಭೀರತೆ ಮತ್ತು ಸೂಕ್ತ ಚಿಕಿತ್ಸೆಯ ಅಲಭ್ಯತೆಯನ್ನು ತೋರಿಸುತ್ತಿದ್ದು ರೋಟರಿ, ಲಯನ್ ಮೊದಲಾದ ಸೇವಾ ಸಂಸ್ಥೆಯಲ್ಲಿರುವ ವೈದ್ಯರು ‘ಸಿಎಡಿ’ಯಂತೆ ತಮ್ಮ ಬಳಗ ರಚಿಸಿಕೊಂಡು ಇಂಥಹ ಸಲಹೆ ನೀಡಿ, ಜೀವ ಉಳಿಸಬಹುದು ಎಂದು ಡಾ. ಕಾಮತ್ ಹೇಳುತ್ತಾರೆ.
9743287599 ನಂಬರಿಗೆ ವಾಟ್ಸಾಪ್ ಸಂದೇಶ ಕಳಿಸುವವರು ಇಸಿಜಿ ಜೊತೆ ಸ್ಥಳೀಯ ವೈದ್ಯರ ವರದಿ ಇದ್ದರೆ ಅದನ್ನು ವಾಟ್ಸಾಪ್ ಮಾಡಿ ಹೆಸರು, ವಯಸ್ಸು, ಊರು ತಿಳಿಸಬೇಕು. ಕೆಲವರು ಸುಮ್ಮಸುಮ್ಮನೆ ವಾಟ್ಸಾಪ್, ವಿಡೀಯೋ ಕಳಿಸಿದ್ದು ಕಂಡುಬಂತು. ಈ ಸಹಾಯವನ್ನು ಗಂಭೀರವಾಗಿ ಪರಿಗಣಿಸಬೇಕು, ದುರುಪಯೋಗಕ್ಕೆ ಅವಕಾಶವಿಲ್ಲ. ಯಾವುದೇ ಹಣ ಸ್ವೀಕರಿಸುವುದಿಲ್ಲ, ಇಂಥಹ ಆಸ್ಪತ್ರೆಗೆ ಹೋಗಿ ಎನ್ನುವುದಿಲ್ಲ. ಹೃದಯ ಸ್ವಾಸ್ಥ್ಯ ನಿಮ್ಮೆಲ್ಲರ ಅಧಿಕಾರ, ಇದಕ್ಕೆ ಬೆಲೆಕಟ್ಟಬಾರದು. ನಿಮ್ಮ ಆರೋಗ್ಯ ನೊಡಿಕೊಳ್ಳಿ ಎಂದು ಜನ ಸಂದೇಶ ಕಳಿಸಿದ್ದಾರೆ. ಜನರ ಪ್ರೀತಿಗೆ, ಸ್ಪಂದನೆಗೆ ಅಭಿನಂದನೆ ಎಂದು ಡಾ. ಕಾಮತ್ ಹೇಳಿದ್ದಾರೆ.
……………………………………………………………
ಡಾ. ಪದ್ಮನಾಭ ಕಾಮತರಿಗೆ ಪ್ರೇರಣೆ ನೀಡಿದ ಸತ್ಯಕಥೆಗಳು :
ಬಿಡುವಿಲ್ಲದೇ ದುಡಿಯುತ್ತಿರುವ ಹೃದಯ ತಜ್ಞ ಡಾ. ಪದ್ಮನಾಭ ಕಾಮತ್ ಭಾವಜೀವಿ, ಯಕ್ಷಗಾನ ಪ್ರೇಮಿ. ಹಳ್ಳಿಗಳಿಗೆ ಆಟಕ್ಕೆ ಹೋದಾಗ ಅಲ್ಲಿ ಕೆಲವರಿಗೆ ಹೃದಯಾಘಾತವಾಗಿರುವುದು ಅರಿಯದೆ, ವಿಳಂಬವಾಗಿ ಆಸ್ಪತ್ರೆಗೆ ಒಯ್ಯುವಾಗ ಮಧ್ಯದಲ್ಲಿ ಸಾವನ್ನಪ್ಪುವ ಪ್ರಕರಣಗಳನ್ನು ನೋಡಿ ಮನಕರಗಿದ ಕಾಮತರು ವಿಳಂಬ ತಪ್ಪಿಸಲು ಗ್ರಾಮೀಣ ಆಸ್ಪತ್ರೆಗಳಿಗೆ ಇಸಿಜಿ ಯಂತ್ರವನ್ನು ದಾನಿಗಳಿಂದ ಕೊಡಿಸಿ, ವಾಟ್ಸಾಪ್ ಮುಖಾಂತರ ವರದಿ ತರಿಸಿಕೊಂಡು ಸಲಹೆ ನೀಡುವುದನ್ನು ಸ್ನೇಹಿತರೊಂದಿಗೆ ಆರಂಭಿಸಿದರು. ಇದಕ್ಕೆ ಕಾರ್ಡಿಯಾಕ್ ಎಟ್ ಡೋರ್ ಸ್ಟೆಪ್ (ಮನೆ ಬಾಗಿಲಿಗೆ ಹೃದಯ ವೈದ್ಯರು) ಎಂದು ಹೆಸರಿಟ್ಟರು. ಇದು ಯಶಸ್ವಿಯಾಗಲು ಆರಂಭಿಸಿದಾಗ ಜನೌಷಧಿ ಕೇಂದ್ರ ಸಹಿತ ಸರ್ಕಾರಿ ಮತ್ತು ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ಉಪಕರಣ ಪೂರೈಸಿದರು.

10ಜಿಲ್ಲೆಗಳಿಗೆ ಉಪಕರಣ ನೀಡಿದರು. ಉತ್ತಮ ಜನಸ್ಪಂದನೆ ಕೆಲವೆಡೆ, ಇನ್ನೂ ಕೆಲವೆಡೆ ನಿರ್ಲಕ್ಷ್ಯ. 175 ಉಪಕರಣ ವಿತರಿಸಿ ಆದ ಮೇಲೆ ಇದರ ಸಾಫಲ್ಯ ಸ್ಪಷ್ಟವಾಗಲಿಲ್ಲ. ಮಾರ್ಗದ ಮಧ್ಯೆ ಸಾಯುವವರ ಸಂಖ್ಯೆ ನಿರೀಕ್ಷಿಸಿದಷ್ಟು ಕಡಿಮೆಯಾಗಲಿಲ್ಲ.
ಮೂಡಿಗೆರೆ ತಾಲೂಕಿನ ಬಾಳೆಹೊನ್ನೂರಿನ ಮಹಿಳೆ ಮಂಗಳೂರು ತಲುಪಲು ವಿಳಂಬವಾಗಿ ತನ್ನ ಮಕ್ಕಳೆದುರೇ ಅಂಬುಲೆನ್ಸನಲ್ಲಿ ಮೃತಪಟ್ಟಾಗ ನೊಂದುಕೊಂಡ ಕಾಮತ್ 108 ಸಹಿತ ಅಂಬುಲೆನ್ಸ್ ಚಾಲಕರಿಗೆ ಮೊಬೈಲ್ನಂತಹ ಪುಟ್ಟ ಇಸಿಜಿ ಕೊಟ್ಟು ತುರ್ತು ಚಿಕಿತ್ಸೆಯ ತರಬೇತಿ ನೀಡಿ ಸಾವನ್ನು ತಪ್ಪಿಸುವ ಪ್ರಯತ್ನದಲ್ಲಿದ್ದಾರೆ. ಆದರೂ ಯಾಕೋ ತೃಪ್ತಿಯಾಗಲಿಲ್ಲ. ಈಗ ಎಲ್ಲೆಡೆ ವಾಟ್ಸಾಪ್ ಸಹಿತ ಮೊಬೈಲ್ ಇರುವುದರಿಂದ, ತುರ್ತು ಸೇವೆ ನೀಡುವ ಸ್ಥಳೀಯ ವೈದ್ಯರು ಇರುವುದರಿಂದ ಇವರಿಗೆ ಮತ್ತು ನೇರವಾಗಿ ಹೃದಯ ಸಮಸ್ಯೆಯುಳ್ಳವರೊಂದಿಗೆ ನೆರವಾಗಲು ಕಾಮತ್ ಈ ಯೋಜನೆಯನ್ನು ಜಾರಿಗೆ ತಂದ 24ತಾಸುಗಳಲ್ಲಿ ಕೆಲವು ಜೀವಗಳು ಉಳಿದಿವೆ. ಬಹಳಷ್ಟು ಜೀವಗಳು ತಮಗೆ ಹೃದಯ ಸಮಸ್ಯೆ ಇಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ವಾಟ್ಸಾಪ್ ಜೀವ ರಕ್ಷಕವೂ ಆಗಬಲ್ಲದು. ಈ ಸರಳ ಉಪಕರಣವನ್ನು ಬಳಸಿದರೆ ವೈದ್ಯರು ಪ್ರತಿವರ್ಷ ಸಾವಿರಾರು ಹೃದಯಘಾತವಾದವರನ್ನು ಉಳಿಸಬಹುದಾಗಿದೆ. ಆದ್ದರಿಂದ ವೈದ್ಯರು ಟೊಂಕಕಟ್ಟಿ ಸುಲಭದಲ್ಲಿ ನರನಾರಾಯಣರಾಗುವುದು ಸಾಧ್ಯವಿದೆ ಎಂದು ಡಾ. ಕಾಂತ್ ಅಭಿಪ್ರಾಯಪಟ್ಟಿದ್ದಾರೆ. ದೇಶದ ತುಂಬ ಹೃದಯ ವೈದ್ಯರಿದ್ದಾರೆ, ಆದರೆ ಉತ್ತರಕನ್ನಡ ಸಹಿತ ಹಲವು ಜಿಲ್ಲೆಗಳಲ್ಲಿ ಎಂಜಿಯೋಗ್ರಾಂ, ಎಂಜಿಯೋಪ್ಲಾಸ್ಟ್ ಮಾಡಿಸಿ, ಜೀವ ಉಳಿಸಬಲ್ಲ ವೈದ್ಯರು ಉತ್ತರಕನ್ನಡದಂತೆ ಹಲವು ಜಿಲ್ಲೆಗಳಲ್ಲಿ ಇಲ್ಲ. ಈ ಯೋಜನೆ ಯಶಸ್ವಿಯಾಗಬೇಕು ಎಂದು ಡಾ. ಕಾಮತ್ ಬಯಸಿದ್ದಾರೆ.

Leave a Comment