
ಹಳಿಯಾಳ :- “ಗಣಪತಿ ಬಪ್ಪಾ ಮೊರಯಾ ಪುಡಚಾ ವರ್ಷಿ ಲವಕರ ಯಾ” ಎಂದು ಕಳೆದ ವರ್ಷ ಗಣೇಶನನ್ನು ವಿಜೃಂಭಣೆಯಿಂದ ವಿಸರ್ಜನೆ ಮಾಡಲಾಗಿತ್ತು. ಭಕ್ತರ ಬೇಡಿಕೆಯಂತೆ ಮತ್ತೇ ವಿಘ್ನವಿನಾಶಕನ ಚತುರ್ಥಿ ಲವಕರ ಅಂದರೇ ಬೇಗನೆ ಬಂದಿದ್ದು ತಾಲೂಕಿನ ಜನತೆ ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದ್ದು ಸಕಲ ಸಿದ್ದತೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ದೇಶಾದ್ಯಂತ ಸೆ.ದಿ.2 ರಂದು ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲು ಬಗೆ ಬಗೆಯ ಗಣಪನ ಮೂರ್ತಿಗಳನ್ನು ಜನರು ಕಲಾವಿದರ ಬಳಿ ಬೇಡಿಕೆ ಇಟ್ಟಿದ್ದು ಅದರಂತೆ ಕಲಾವಿದರ ಕೈಚಳಕದಲ್ಲಿ ವಿನಾಯಕನ ಮೂರ್ತಿಗಳು ಸಿದ್ದಗೊಂಡಿವೆ.
ಇನ್ನೂ ಹಳಿಯಾಳ ತಾಲೂಕಿನ ನೂರಾರು ಕಲಾವಿದರ ಕೈಚಳಕದಲ್ಲಿ ಮೂಡಿರುವ ವಿವಿಧ ಬಗೆಯ ಸಾವಿರಾರು ಗಣಪತಿ ಮೂರ್ತಿಗಳು ಕಲಾವಿದರ ಅಂತಿಮ ಸ್ಪರ್ಶದೊಂದಿಗೆ ದಿ.2 ರಂದು ನಡೆಯುವ ಗಣೇಶೋತ್ಸವಕ್ಕೆ ಸಜ್ಜಾಗುತ್ತಿವೆ. ಮನೆ-ಮನೆಗಳಲ್ಲಿ, ಸಾರ್ವಜನೀಕ ಸ್ಥಳಗಳಲ್ಲಿ ಆಕರ್ಷಕ ಅಲಂಕಾರಗಳಿಂದ ಬೃಹತ್ ಮಂಟಪಗಳು ತಲೆ ಎತ್ತಿದ್ದು ಪ್ರಥಮ ಪೂಜಕ, ವಿಘ್ನ ನಿವಾರಕನ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಪಟ್ಟಣ ಒಂದರಲ್ಲೇ 40 ಕ್ಕೂ ಹೆಚ್ಚು ಕಲಾವಿದರ ಕೈಚಳಕದಲ್ಲಿ 2ಸಾವಿರಕ್ಕೂ ಅಧಿಕ ಪರಿಸರ ಸ್ನೇಹಿ ಮಣ್ಣಿನಿಂದ ಗಣೇಶನ ಮೂರ್ತಿಗಳು ನಿರ್ಮಾಣವಾಗಿವೆ. ಪಟ್ಟಣದ ಕುಂಬಾರಗಲ್ಲಿಯಲ್ಲಿ 25ಕ್ಕೂ ಹೆಚ್ಚು ಕಲಾವಿದರು ಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನು ತಯಾರಿಸುತ್ತಿದ್ದು ಪುಟಾಣಿ ಪೊರರು ಹಾಗೂ ಮಹಿಳೆಯರು ಗಣಪತಿ ಮೂರ್ತಿ ತಯಾರಿಕೆ ಹಾಗೂ ಬಣ್ಣ ಹಚ್ಚುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಕಾಣಸಿಗುತ್ತಿದೆ.
ಹಳಿಯಾಳದಲ್ಲಿ ತಯಾರಿಸಿದ ಮೂರ್ತಿಗಳು ಹಳಿಯಾಳ ತಾಲೂಕಾ ಅಷ್ಟೆ ಅಲ್ಲದೇ ಉ.ಕ.ಜಿಲ್ಲೆಯ ಮುಂಡಗೋಡ ಹಾಗೂ ದಾಂಡೇಲಿ ಹೊರತಾಗಿ ಹುಬ್ಬಳ್ಳಿ, ಅಳ್ನಾವರ ಧಾರವಾಡ, ಕಲಘಟಗಿಗಳಲ್ಲಿ ಕೂಡ ಬೇಡಿಕೆಯಿರುವುದು ವಿಶೇಷವಾಗಿದೆ.
ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಕುಂಬಾರಗಲ್ಲಿ, ದೇಸಾಯಿಗಲ್ಲಿ, ಶೆಟ್ಟಿಗಲ್ಲಿ, ಗೌಳಿಗಲ್ಲಿಗಳಲ್ಲಿ ಕಳೆದ 5 ದಶಕಗಳಿಗಿಂತ ಹೆಚ್ಚು ಕಾಲದಿಂದ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿರುವವರನ್ನು ಕಾಣಬಹುದಾಗಿದೆ.
ಈ ಕುರಿತು ಮಾತನಾಡಿದ ಕಲಾವಿದ ಸಹೋದರರಾದ ಅಶೋಕ, ಶಂಕರ, ಗಣಪತಿ ಗೌಡ್ರ ಹಾಗೂ ಇನ್ನೊರ್ವ ಕಲಾವಿದ ಬಾಬು ಸುಳೆಬಾವಿ ಶ್ರೀ ಗಣೇಶನ ಮೂರ್ತಿ ತಯಾರಿಸುವ ವೃತ್ತಿ ಕೇವಲ ದೇವರ ಭಕ್ತಿಗಾಗಿ ವಿನಃ ಲಾಭಕ್ಕಾಗಿ ಅಲ್ಲ ಏಕೆಂದರೇ ಈ ವೃತ್ತಿಯಲ್ಲಿ ನಿಜವಾದ ಲಾಭವಿಲ್ಲ. ಹಣ ಗಳಿಕೆಗಾಗಿ ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ದ ಮೂರ್ತಿಗಳನ್ನು ತಂದು ಮಾರಾಟ ಮಾಡುತ್ತಿರುವುದು ಖೇದಕರ. ಪಿಓಪಿ ವಿಗ್ರಹಗಳು ಮಾರುಕಟ್ಟೆಗೆ ಕಾಲಿಟ್ಟ ದಿನದಿಂದ ಮಣ್ಣಿನ ಮೂರ್ತಿಗಳ ಶೇ.65ರಷ್ಟು ಬೇಡಿಕೆ ಕಡಿಮೆಯಾಗಿದೆ ಎಂದರು.

ಬಡ ಕಲಾವಿದರು ವರ್ಷಕ್ಕೆ ಒಮ್ಮೆ ಪರಿಸರ ಸ್ನೇಹಿ ಗಣೇಶನ ಮೂರ್ತಿ ತಯಾರಿಸಿ ತುಸು ಆದಾಯವನ್ನಾದರು ಗಳಿಸಿ ಉದರ ತುಂಬಿಸಿಕೊಳ್ಳುತ್ತಿದ್ದೇವು ಆದರೇ ಈಗ ಪಿಓಪಿ ಯಿಂದ ತಮ್ಮ ಜೀವನ ಕಷ್ಟದಾಯಕವಾಗಿದ್ದು ತಾಲೂಕಾಡಳಿತ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತುಕೊಂಡು ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ನ ವಿಗ್ರಹಗಳಿಗೆ ನಿಷೇಧ ಹೇರಬೇಕೆಂದು ಇವರು ವಿನಂತಿಸಿದ್ದಾರೆ.
ಪಟ್ಟಣದ ವಿವಿಧೆಡೆ ಆಕರ್ಷಕ ಅಲಂಕಾರ, ವಿದ್ಯುತ್ನಿಂದ ಮಾಡುವ ಬೃಹತ್ ಮಂಟಪಗಳಲ್ಲಿಯ ಸಾರ್ವಜನಿಕ ಗಣಪತಿಗಳನ್ನು ವಿಕ್ಷಿಸಲು ಗ್ರಾಮೀಣ ಭಾಗದಿಂದ ಸಾವಿರಾರು ಜನತೆ ಆಗಮಿಸುತ್ತಾರೆ. ಗ್ರಾಮಗಳಿಗೂ ಕೂಡ ಪಟ್ಟಣದ ಜನತೆ ತೆರಳಿ ವಿನಾಯಕನ ದರ್ಶನ ಪಡೆಯುತ್ತಾರೆ.
ಹಳಿಯಾಳ ತಾಲೂಕು ಗಣೇಶೋತ್ಸವಕ್ಕೆ ಸಜ್ಜಾಗಿದ್ದು ತಾಲೂಕಿನಲ್ಲಿ 50 ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಾರ್ವಜನಿಕ ಗಣೇಶೊತ್ಸವ ನಡೆಯಲಿದ್ದು 5,7,9 ಹಾಗೂ 11 ದಿನದವರೆಗೆ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರಗಳು ನೇರವೆರಲಿವೆ. ಗಣೇಶೋತ್ಸವ ಸಂದರ್ಭದಲ್ಲಿ ಹೆಚ್ಚಿನ ಜನಸಂಧನಿ ಉಂಟಾಗುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕೂಡ ಪೋಲಿಸ್ ಇಲಾಖೆಯಿಂದ ವಹಿಸಲಾಗಿದ್ದು ಈಗಾಗಲೇ ಪೋಲಿಸ್ ತುಕಡಿಗಳು ಪಟ್ಟಣಕ್ಕೆ ಆಗಮಿಸಿದ್ದು ಬೀಗಿ ಪೋಲಿಸ್ ಬಂದೋಬಸ್ತ ಕೂಡ ನಿಯೋಜಿಸಲಾಗಿದೆ.
Leave a Comment