
ಹಳಿಯಾಳ:- ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ, ಅವರ ಅನುಮತಿ ಪಡೆಯದೆ ಹಳಿಯಾಳ ತಹಶೀಲ್ದಾರ್ರ ವಿರುದ್ದ ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳು ಹಾಗೂ ತಾಲೂಕಾ ನೌಕರರ ಸಂಘದವರ ಯಾರದೋ ಕುಮ್ಮಕ್ಕಿನಿಂದ ಇತ್ತೀಚೆಗೆ ನಡೆಸಿದ ಪ್ರತಿಭಟನೆ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಯೋಗ್ಯ ಕ್ರಮ ಕೈಗೊಳ್ಳುವಂತೆ ಹಳಿಯಾಳ ತಾಲುಕಾ ಕಬ್ಬು ಬೆಳೆಗಾರರ ಸಂಘದವರು ಹಾಗೂ ತೇರಗಾಂವ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಎಸಿ ಅಭಿಜಿನ್ ಅವರಿಗೆ ಸಲ್ಲಿಸಿದರು.
ಶುಕ್ರವಾರ ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದ ಅಸಿಸ್ಟಂಟ್ ಕಮೀಷನರ್ ಅಭಿಜಿನ್ ಅವರನ್ನು ಭೇಟಿಯಾದ ತಾಲೂಕಿನ ತೇರಗಾಂವ ಗ್ರಾಮಸ್ಥರು, ರೈತರು, ವಿವಿಧ ಸಂಘಟನೆಯವರು ಹಾಗೂ ಕಬ್ಬು ಬೆಳೆಗಾರರ ಸಂಘದವರು ಜಿಲ್ಲಾಧಿಕಾರಿಗಳ ಹೆಸರಿನಲ್ಲಿದ್ದ ಮನವಿಯನ್ನು ಅವರಿಗೆ ಸಲ್ಲಿಸಿದರು.
ಮನವಿಯಲ್ಲಿ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರು ಕಳೆದ 5 ವರ್ಷಗಳಿಂದ ಹಳಿಯಾಳ ತಹಶೀಲ್ದಾರ್ ಆಗಿ ಜನಸ್ನೇಹಿಯಾಗಿ ಪ್ರಾಮಾಣಿಕತೆಯಿಂದ ಪಾರದರ್ಶಕ ಆಡಳಿತ ನೀಡುತ್ತಾ ಬಡವರಿಗೆ, ರೈತರಿಗೆ ಸೇರಿದಂತೆ ಅರ್ಹರಿಗೆ ನ್ಯಾಯ ಒದಗಿಸಿಕೊಟ್ಟಿದ್ದು ಅಂತಹ ದಕ್ಷ ಅಧಿಕಾರಿಯ ವಿರುದ್ದ ಹಳಿಯಾಳ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳು ಹಾಗೂ ನೌಕರರ ಸಂಘದ ಅಧ್ಯಕ್ಷ ಪ್ರಶಾಂತ, ಸರ್ವೇ ಇಲಾಖೆ, ದಾಂಡೇಲಿ ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳು ಹಠಾತ್ತನೆ ಅನಧಿಕೃತವಾಗಿ ಪ್ರತಿಭಟನೆ ನಡೆಸಿರುವುದು ವಿಷಾಧನೀಯ ಸಂಗತಿಯಾಗಿದ್ದು ಘಟನೆಯನ್ನು ಖಂಡಿಸುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಸಿಬ್ಬಂದಿಗಳು ಏಕಾಏಕಿ ಧರಣಿ ನಡೆಸಿದ್ದರಿಂದ ಹಳಿಯಾಳ ತಾಲೂಕಿಗೆ ಕಪ್ಪು ಚುಕ್ಕೆ ಬಂದಂತಾಗಿದೆ. ಕಂದಾಯ ನೀರಿಕ್ಷಕ ರಾಘವೇಂದ್ರ ಅವರು ಕೆಲಸದ ಒತ್ತಡದಿಂದ ತಪ್ಪಿಸಿಕೊಳ್ಳಲು ಈ ರೀತಿಯಾಗಿ ಬೆದರಿಕೆ ತಂತ್ರ ನಡೆಸಿದ್ದು. ವೈಯಕ್ತಿಕ ಸಮಸ್ಯೆಗಳನ್ನು ಕಚೇರಿ ವಿಷಯದಲ್ಲಿ ಎಳೆದು ತಂದಿದ್ದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಡುತ್ತಿರುವ ಕಾರಣ ಕೂಡಲೇ ಈ ಘಟನೆ ಕುರಿತು ಸೂಕ್ತ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಹಾಗೂ ತಾಲೂಕಿನ ಸಾರ್ವಜನೀಕರಿಗೆ ಸುಗಮವಾಗಿ ಆಡಳಿತ ನಡೆಸಲು ಅನುವು ಮಾಡಿಕೊಡಬೇಕೆಂದು ಮನವಿಯಲ್ಲಿ ಬೇಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಶಂಕರ ಕಾಜಗಾರ, ಕಾಮಧೆನು ಸೇವಾ ಸಹಕಾರಿ ಸಂಘದ ಡಿಜೆ ಮಿರಾಶಿ, ಪ್ರಮುಖರಾದ ಸುರೇಶ ಶಿವನ್ನವರ, ಪರಶುರಾಮ ಹೊಂಡದಕಟ್ಟಿ, ಮಾಹಿರಲಿ ಪುಂಗಿ, ಪುಂಡಲಿಕ ಶಿಂಧೆ, ಜಯ ಕರ್ನಾಟಕ ಸಂಘಟನೆಯ ವಿಲಾಸ ಕಣಗಲಿ, ಶಿರಾಜ ಮುನವಳ್ಳಿ, ನೇಮು ದುಗ್ಗಾಣಿ, ಭರತ, ಅಭಿಲಾಷ ಮೊದಲಾವರು ಇದ್ದರು.
Leave a Comment