
ಹಳಿಯಾಳ :- ಈಗಾಗಲೇ ಅಕ್ರಮ ಚಟುವಟಿಕೆ ನಡೆಸುವವರನ್ನು ಗುರುತಿಸಿ ಗಡಿಪಾರಿಗೆ ಶಿಫಾರಸು ಮಾಡಲಾಗಿದ್ದು ಇನ್ನು ಮುಂದೆ ಮತ್ತೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡವರ ವಿರುದ್ದ ಗುಂಡಾ ಕಾಯ್ದೆ ಅಸ್ತ್ರ ಬಳಸಲಾಗುತ್ತಿದ್ದು ಅಕ್ರಮ ಚಟುವಟಿಕೆ ನಡೆಸುವವರನ್ನು ಸುಮ್ಮನೆ ಬಿಡುವ ಪ್ರಶ್ನೇಯೇ ಇಲ್ಲವೆಂದು ಹಳಿಯಾಳ ಪೋಲಿಸ್ ವೃತ್ತ ನೀರಿಕ್ಷಕ(ಸಿಪಿಐ) ಬಿಎಸ್ ಲೋಕಾಪುರ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲೂಕಾಡಳಿತ ಹಾಗೂ ಪೋಲಿಸ್ ಇಲಾಖೆಯಿಂದ ಇದೆ ಪ್ರಥಮ ಬಾರಿಗೆ ಆಯೋಜಿಸಿದ ಶಾಂತಿ ಪಾಲನಾ ಸಭೆಯಲ್ಲಿ ಸುವ್ಯವಸ್ಥಿತವಾಗಿ ದೀಪಾವಳಿ ಹಬ್ಬ ಆಚರಿಸಲು ಸಭೆ ಕರೆಯಲಾಗಿದೆ ಎಂದು ಸಿಪಿಐ ತಿಳಿಸಿದರು.
ದೀಪಾವಳಿ ಸಂದರ್ಭದಲ್ಲಿ ಪ್ರಭಾವ, ವಸೂಲಿ ಬಳಸಿ ಹಬ್ಬದ ನೆಪ ಮಾಡಿ ಜೂಜಾಟ ನಡೆಸುವುದು ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆಗಳಿಗೆ ಮುಂದಾದರೇ ಯಾರೇ ಇರಲಿ ಅಂತಹವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ರಮ್ಮಿ ಕ್ಲಬ್ನವರು, ಲಾಡ್ಜ್, ಸರಾಯಿ ಮರಾಟಗಾರರು ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸÀಬೇಕು ಮತ್ತು ನಿಯಮಾವಳಿಯಂತೆ ಸಮಯ ಪಾಲನೆ ಮಾಡಬೇಕು ಇಲ್ಲದಿದ್ದರೇ ಅಂತಹವರ ಪರವಾನಿಗೆ(ಲೈಸನ್ಸ್) ಅನ್ನು ರದ್ದು ಮಾಡಲಾಗುವುದು ಎಂದು ಸಿಪಿಐ ಖಡಕ್ ಎಚ್ಚರಿಕೆ.ಕೊಟ್ಟರು.

ಪ್ರಸಕ್ತ ವರ್ಷದಲ್ಲಿ ಈವರೆಗೆ ಮಟಕಾ, ಜೂಜಾಟ ಸೇರಿದಂತೆ 30ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ಮೊಟಾರ್ ವಾಹನ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದ್ದು ಮುಂದೆ ಕೂಡ ಇಲಾಖೆಯಿಂದ ಕಠಿಣ ಕ್ರಮಗಳನ್ನು ಜರುಗಿಸಲಾಗುತ್ತಿದ್ದು ಹಬ್ಬಗಳಲ್ಲಿ ಕಲೆಗಳನ್ನು ಪ್ರೋತ್ಸಾಹಿಸಿ, ದೇವರನ್ನು ಪ್ರಾರ್ಥಿಸಿ ಹೊರತು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿ ಕುಟುಂಬದ ನೆಮ್ಮದಿ ಹಾಳು ಮಾಡಿಕೊಳ್ಳದಂತೆ ಸಲಹೆ ನೀಡಿದರು.
ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಮಾತನಾಡಿ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸಬೇಕಿದೆ. ಕಳೆದ ವರ್ಷ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದವರ ಮೇಲೆ ಕಾಯ್ದೆ 107 ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಬಾರಿ ಈ ವಿಷಯ ಇನ್ನಷ್ಟು ಗಂಭೀರತೆ ಪಡೆದಿರುವ ಕಾರಣ ಮತ್ತೇ ಕಾನೂನು ಬಾಹಿರ ಚಟುವಟಿಕೆ ನಡೆಸುವವರ ವಿರುದ್ದ ದೂರುಗಳು ಬಂದರೇ ಕಠಿಣ ಕ್ರಮ ಜರುಗಿಸಲಾಗುವುದು ಅಲ್ಲದೇ ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಖಡಕ್ ಆಗಿಯೇ ಎಚ್ಚರಿಕೆ ನೀಡಿದರು.

ದಾಂಡೇಲಿ ಡಿವೈಎಸ್ಪಿ ಮೋಹನಪ್ರಸಾದ್ ಅವರು ಮಾತನಾಡಿ ಮೌಲ್ಯಗಳನ್ನು ಪ್ರತಿಪಾದಿಸುವ ದೀಪಾವಳಿ ಹಬ್ಬದಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸಿ ಊರಿಗೆ ಕೆಟ್ಟು ಹೆಸರು ತರದಂತೆ ಅಂತಹವರ ವಿರುದ್ದ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು ಇದಕ್ಕೆ ಸಾರ್ವಜನೀಕರ ಸಹಕಾರ ಅತಿ ಪ್ರಮುಖವಾಗಿದೆ ಎಂದ ಅವರು ಪಾಲಕರು ತಮ್ಮ ಮಕ್ಕಳ ಮೇಲೆ ನಿಗಾ ಇಡಬೇಕು ಎಂದು ಕಿವಿ ಮಾತು ಹೇಳಿದರು.
ಪಿಎಸ್ಐ ಆನಂದಮೂರ್ತಿ ಮಾತನಾಡಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜೂಜಾಟ ಆಡುವ ಮಾನಸಿಕ ಸ್ಥಿತಿಯನ್ನು ಬದಲಾಯಿಸಿಕೊಳ್ಳಿ ಇಲ್ಲವಾದಲ್ಲಿ ಯಾವ ಮುಲಾಜಿಲ್ಲದೇ ಅಂತಹವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದು ಪಟ್ಟಣದ ಜನಪ್ರತಿನಿಧಿಗಳು, ಸಂಘ-ಸಂಸ್ಥೆಯವರ ಆಕ್ರೋಶಕ್ಕೆ ಕಾರಣವಾಯಿತು.
ಈ ಸಂದರ್ಭದಲ್ಲಿ ತಾಪಂ ಇಓ ಪ್ರವೀಣಕುಮಾರ ಸಾಲಿ, ಬಿಇಓ ಸಮೀರ ಮುಲ್ಲಾ, ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ, ಪುರಸಭೆಯ ಚುನಾಯಿತ ಜನಪ್ರತಿನಿಧಿಗಳು, ಕರವೇ, ಜಯ ಕರ್ನಾಟಕ ಸಂಘಟನೆ, ಜೀಜಾಮಾತಾ ಮಹಿಳಾ ಸಂಘಟನೆ, ಹಿರಿಯ ನಾಗರೀಕರ ವೇದಿಕೆ, ವ್ಯಾಪಾರಸ್ಥರ ಒಕ್ಕೂಟ, ಎಲ್ಲ ಬಾರ್-ಲಾಡ್ಜ್ ಮಾಲೀಕರು, ರಮ್ಮಿ ಕ್ಲಬನವರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
Leave a Comment