
ಹಳಿಯಾಳ:- ಚಿಕ್ಕಮಂಗಳೂರಿನಲ್ಲಿ ನಡೆಯುತ್ತಿರುವ ಬಾಲಕ ಮತ್ತು ಬಾಲಕಿಯರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಹಳಿಯಾಳದ ಸಹೋದರಿಯರಿಬ್ಬರು ಸಾಧನೆ ತೋರಿದ್ದು ಓರ್ವಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರೇ ಇನ್ನೋರ್ವಳು ಮೂರನೆ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾಳೆ.
14 ವರ್ಷದೊಳಗಿನ 42 ಕೆಜಿ ವಿಭಾಗದ ಬಾಲಕಿಯರ ಕುಸ್ತಿ ಪಂದ್ಯಾವಳಿಯಲ್ಲಿ ಶ್ವೇತಾ ಸಂಜು ಅಣ್ಣಿಕೇರಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಹಾಗೂ ಇಕೆಯ ಸಹೋದರಿ ಸ್ವಾತಿ ಅಣ್ಣಿಕೇರಿ 17 ವರ್ಷದೊಳಗಿನ ಪ್ರೌಢಶಾಲಾ ಮಟ್ಟದ 57 ಕೆಜಿ ವಿಭಾಗದಲ್ಲಿ 3 ನೇ ಸ್ಥಾನ ಪಡೆದುಕೊಂಡು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ.
ಈ ಇಬ್ಬರು ಹಳಿಯಾಳದ ಪೋಲಿಸ್ ಠಾಣೆಯ ಎಎಸ್ಐ ಆಗಿರುವ ಸಂಜೂ ಅಣ್ಣಿಕೇರಿ ಅವರ ಪುತ್ರಿಯರಾಗಿದ್ದು ಇವರ ಹಿರಿಯ ಮಗ ಸೂರಜ ಕೂಡ ಈ ಹಿಂದೆ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಆಡಿ ಸಾಧನೆ ಮಾಡಿದ್ದಾರೆ.
ಇನ್ನೂ ಸಾಧನೆ ಮಾಡಿದ ಶ್ವೇತಾ ಹಳಿಯಾಳದ ಶಾಸಕರ ಮಾದರಿ ಶಾಲೆ ನಂ1 ರಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೇ ಇನ್ನೊರ್ವಳಾದ ಸ್ವಾತಿ ಹಳಿಯಾಳ ವಿಡಿ ಹೆಗಡೆ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಇಬ್ಬರ ಸಾಧನೆಗೆ ಮಾಜಿ ಶಾಸಕ ಸುನೀಲ್ ಹೆಗಡೆ, ಮಾಜಿ ವಿಪ ಸದಸ್ಯ ವಿಡಿ ಹೆಗಡೆ, ಶಾಲಾ ಆಡಳಿತ ಮಂಡಳಿಯವರು, ಕರವೇ, ಜಯ ಕರ್ನಾಟಕ, ಜೀಜಾಮಾತಾ ಮಹಿಳಾ ಸಂಘಟನೆ, ಮಂಜು ಕರಾಟೆ ಮತ್ತು ಡ್ಯಾನ್ಸ್ ಅಕಾಡೆಮಿ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.


Leave a Comment