
ಹಳಿಯಾಳ:- ರಾಜ್ಯದಲ್ಲಿ ರೈತ ಸಮುದಾಯ ಇಂದು ವಿವಿಧ ಕಾರಣಗಳಿಂದಾಗಿ ಸಂಕಷ್ಟದಲ್ಲಿದ್ದು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕಾದ ಅವಶ್ಯಕತೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅಭಿಪ್ರಾಯಪಟ್ಟರು.
ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು (ಆತ್ಮ ಯೋಜನೆ) ಮತ್ತು ಇತರ ಸಂಘ ಸಂಸ್ಥೆ ಸಹಯೋಗದೊಂದಿಗೆ ನಡೆದ ರೈತ ದಿನಾಚರಣೆ ಹಾಗೂ ಕಿಸಾನ ಗೋಷ್ಠಿ ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು. ರೈತರಿಗೆ ರೈತ ದಿನಾಚÀರಣೆ ಮಹತ್ವದ ಕುರಿತು ಮಾಹಿತಿ ನೀಡಿದರು ಹಾಗೂ ಇಲಾಖೆಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಶಂಕರ ಕಾಜಗಾರ ಮಾತನಾಡಿ ಉತ್ತಮ ಇಳುವರಿ ಮತ್ತು ಆದಾಯ ಪಡೆಯಲು ರೈತರು ವಹಿಸಬೇಕಾದ ಮುಂಜಾಗ್ರತ ಕ್ರಮಗಳ ಕುರಿತು ಮಾಹಿತಿ ನೀಡಿದರು. ಹಾಗೂ ತಾಲೂಕು ಕೃಷಿಕ ಸಮಾಜದ ಸದಸ್ಯರಾದ ಅಶೋಕ ಮೇಟಿಯವರು ರೈತರಿಗೆ ಇಲಾಖೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹೆಚ್ಚಿನ ಮಾಹಿತಿ ಪಡೆದು ಕೃಷಿ ಕೈಗೊಳ್ಳುವಂತೆ ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಡಾ.ಗೋವಿಂದ ಎಸ್. ಭಟ್ ಹಾಗೂ ರಾಮಚಂದ್ರ ಟಿ. ಭಟ್ ಪಶು ಸಂಗೋಪನೆ ಹಾಗೂ ರೇಷ್ಮೆ ಬೇಸಾಯವನ್ನು ಸಮಗ್ರ ಕೃಷಿ ಪದ್ದತಿಯಲ್ಲಿ ಅಳವಡಿಸಿಕೊಳ್ಳುವುದರಿಂದ ರೈತರಿಗೆ ಆಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರು.
ಆತ್ಮ ಮತ್ತು ವಿವಿಧ ಯೋಜನೆ ಫಲಾನುಭವಿಗಳಿಗೆ ರೋಟೊವೇಟರ್, ಸ್ಪ್ರೇಯರ್, ರೆಂಟೆ, ಹಾಗೂ ಅಲಸಂದಿ ಬೀಜವನ್ನು ಹಾಗೂ ಆತ್ಮ ಯೋಜನೆಯಡಿ ತಾಲೂಕು ಮಟ್ಟದ ಕೃಷಿಕ ಪ್ರಶಸ್ತಿಗೆ ಆಯ್ಕೆಯಾದ 5 ರೈತರಿಗೆ ಕೃಷಿ ಪ್ರಶಸ್ತಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸಂತೋಷ ರೇಣಕೆ, ತಾಪಂ ಉಪಾಧ್ಯಕ್ಷೆ ಸಕ್ಕುಬಾಯಿ ಮಡಿವಾಳ, ಸಹಾಯಕ ಕೃಷಿ ನಿದೇಶಕ ಪಿ.ಐ.ಮಾನೆ, ಪ್ರಮುಖರಾದ ವನಿತಾ ಕಡೇಮನಿ, ಸುಧಾಕರ ಎಂ.ಸಿ, ಜಿಪಂ, ತಾಪಂ ಸದಸ್ಯರು, ಆತ್ಮ ಯೋಜನೆ ತಾಲೂಕು ಮಟ್ಟದ ಸಲಹಾ ಸಮಿತಿ ಸದಸ್ಯರು, ವಿವಿಧ ಗ್ರಾಮಗಳ ರೈತ ಮತ್ತು ರೈತ ಮಹಿಳೆಯರು, ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು ಹಾಗೂ ಇತರೆ ಸಂಘ ಸಂಸ್ಥೆಗಳ ಸಿಬ್ಬಂದಿಗಳು ಇತರರು ಇದ್ದರು.

Leave a Comment