
ಹೊನ್ನಾವರ: ಸಂಚಾರಕ್ಕೆ ಅನಾನೂಕೂಲವಾಗಿರುವ ಖರ್ವಾ ಕ್ರಾಸ್ ನಿಂದ ಮಾವಿನಕುರ್ವಾ ತಲುಪುವ ರಸ್ತೆ ಶೀಘ್ರ ನವೀಕರಿಸುವಂತೆ ಆಗ್ರಹಿಸಿ ತಾಲೂಕಿನ ಖರ್ವಾ ಗ್ರಾಮದ ಆಟೋರೀಕ್ಷಾ ಚಾಲಕರು, ಸಾರ್ವಜನಿಕರು ಗುರುವಾರ ರಸ್ತೆಯಲ್ಲಿ ತೆಂಗಿನ ಸಸಿ,ಬಾಳೆ ಸಸಿ ನೆಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮಳೆಗಾಲದಲ್ಲಿ ಹೊಂಡದಲ್ಲಿ ನೀರುತುಂಬಿ ಕೆಸರಿನ ರಾಡಿ ಎರಚುತ್ತಿದ್ದರೆ, ಬೇಸಿಗೆಯಲ್ಲಿ ರಸ್ತೆ ಮದ್ಯೆ ಬ್ರಹತ್ ಹೊಂಡಗಳು, ಧೂಳಿನ ರಾಶಿ ಇದರಿಂದ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕ ಸಂಕಷ್ಠ ಅನುಭವಿಸುವಂತಾಗಿತ್ತು. ಇಲ್ಲಿ ರಾತ್ರಿ ಹೊತ್ತು ಎಗ್ಗಿಲ್ಲದಂತೆ ನಡೆಯುವ ಅಕ್ರಮ ರೇತಿ ಸಾಗಾಟವು ರಸ್ತೆ ಹದಗೆಡಲು ಇನ್ನೊಂದು ಮುಖ್ಯ ಕಾರಣ ಎನ್ನುವ ಅಭಿಪ್ರಾಯವು ಇದೆ. ರಸ್ತೆ ಆಗಬಹುದೆಂಬ ನಿರಿಕ್ಷೆಯಲ್ಲಿದ್ದ ಜನತೆ ಜಾತಕ ಪಕ್ಷಿಯಂತೆ ಕಾದರು. ಆದರೆ ಜನರ ತಾಳ್ಮೆ ಗರಿಷ್ಟಮಟ್ಟ ತಲುಪಿತ್ತು. ಬೆಳ್ಳಂ ಬೆಳಿಗ್ಗೆ ರಸ್ತೆಮದ್ಯೆ ತೆಂಗು, ಬಾಳೆ ಸಸಿ ನೆಟ್ಟು ತಮ್ಮ ಆಕ್ರೊಶ ಹೋರ ಹಾಕಿದರು. ಈ ಮಾರ್ಗದ ರಸ್ತೆ ಕಳೆದ ಮೂರ್ನಾಲ್ಕು ವರ್ಷದಿಂದ ತೀರಾ ಹದಗೆಟ್ಟಿದ್ದು ಕೇವಲ ಪ್ಯಾಚ್ ವರ್ಕ ಮಾಡುವ ಮೂಲಕ ಜನಾಕ್ರೋಶಕ್ಕೆ ಗುರಿಯಾಗದಂತೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆಯರು,ಶಾಲಾ ಮಕ್ಕಳು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಶೀಘ್ರವಾಗಿ ರಸ್ತೆ ನವೀಕರಿಸಬೇಕೆಂದು ಪ್ರತಿಭಟನೆಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಿದರು. ರಸ್ತೆ ದುರಸ್ಥಿ ನಡೆಸದಿದ್ದಲ್ಲಿ ಇನ್ನು ಮುಂದೆಯು ಸಹ ಬ್ರಹತ್ ಪ್ರತಿಬಟನೆ ಹಮ್ಮಿಕೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದರು.
ಈ ಕುರಿತು ಗ್ರಾಮದ ಯುವತಿ ರಂಜನಾ ಮಾತನಾಡಿ ಖರ್ವಾ ಕ್ರಾಸಿನಿಂದ ಮಾವಿನಕುರ್ವಾ ತಲುಪುವ ರಸ್ತೆ ತೀರ ಹದಗೆಟ್ಟಿದೆ. ಹೊನ್ನಾವರದಿಂದ ಮಾವಿನಕುರ್ವಾಕ್ಕೆ ಸಾಯಂಕಾಲ ಸರಿಯಾಗಿ ಬಸ್ ಬಿಡುತ್ತಿಲ್ಲ. ಏಕೆ ಬಸ್ ಬೀಡುತ್ತಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರೆ ನಿಮ್ಮ ಊರಿನ ರಸ್ತೆ ಮೊದಲು ಸರಿ ಮಾಡಿಕೊಳ್ಳಿ ಅಂತಾರೆ. ಜನಪ್ರತಿನಿಧಿಗಳನ್ನು ಚುನಾವಣೆಯಲ್ಲಿ ಗೆಲ್ಲಿಸುವುದು ಮಾತ್ರವಾಗಿದೆ. ಗೆದ್ದ ನಂತರ ಜನರ ಸಮಸ್ಯೆ ಅನಿಸುತ್ತಿಲ್ಲ.ಜನರು ನಿಮ್ಮನ್ನು ಜವಾಬ್ದಾರಿಯುತ ಸ್ಥಾನಕ್ಕೆ ಆರಿಸಿ ತರುವುದು ಕಷ್ಟಕ್ಕೆ ಸ್ಪಂದಿಸಲಿ ಎನ್ನುವುದಕ್ಕಾಗಿದೆ. ಆದರೆ ಸಾರ್ವಜನಿಕರ ಸಮಸ್ಯೆಗಳ ಗಮನ ಹರಿಸಿಲ್ಲವಾದರೆ ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವವರ್ಯಾರು?. ಒಂದು ವರ್ಷದಲ್ಲಿ ಹಾಳಾಗುವ ಕಳಪೆ ರಸ್ತೆ ಬೇಡ ನಮಗೆ ಸುಸಜ್ಜಿತವಾದ ರಸ್ತೆ ಬೇಕು ಎಂದು ಆಗ್ರಹಿಸಿದರು.

ಪ್ರತಿನಿತ್ಯ ಶಾಲೆಗೆ ಆಗಮಿಸಲು ರಸ್ತೆಯಲ್ಲಿ ನಡೆದು ಬರುವ ಸಂದರ್ಭದಲ್ಲಿ ರಸ್ತೆಬದಿಯಲ್ಲಿ ಬಿದ್ದಿರುವ ಜಲ್ಲಿ ಕಲ್ಲುಗಳು ವಾಹನದ ಟಯರ್ ಗೆ ಸಿಲುಕಿ ನಮಗೆ ಬಡಿಯುತ್ತದೆ.ಇದರಿಂದ ನಮಗೆ ಶಾಲೆಗೆ ತೆರಳಲು ಭಯವಾಗುತ್ತಿದೆ ಶೀಘ್ರವಾಗಿ ಉತ್ತಮ ರಸ್ತೆ ಮಾಡಬೇಕು ಎಂದು ಶಾಲಾ ವಿದ್ಯಾರ್ಥಿ ಹೇಮಂತ್ ಮಾತನಾಡಿದರು.
ಗ್ರಾಮಸ್ಥ ಮಾದೇವ ಹಳ್ಳೇರ್ ಮಾತನಾಡಿ ಅಧಿಕಾರಿಗಳು ಜನಪ್ರತಿನಿಧಿಗಳು ದಯವಿಟ್ಟು ಎಚ್ಚೆತ್ತು ಸಮಸ್ಯೆಗೆ ಸ್ಪಂದಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.
ಇನ್ನೊರ್ವ ಪ್ರಕಾಶ್ ಡಯಾಸ್ ಮಾತನಾಡಿ ಬೆಳಿಗ್ಗೆ ರಸ್ತೆಯಲ್ಲಿ ಸಂಚರಿಸುವಾಗರಸ್ತೆ ಮಾಡಿದ ಪುಣ್ಯಾತ್ಮ ಯಾರು? ಎಂದು ಶಪಿಸುತ್ತಾ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಅರವತ್ತು ವರ್ಷದ ನಂತರ ಇಂತಹ ಕಳಪೆ ರಸ್ತೆ ಕಂಡುಬಂದಿದೆ. ಶಾಸಕರು ಕೇವಲ ಭಟ್ಕಳ-ಮುರುಡೆಶ್ವರ ಭಾಗಗಳಲ್ಲಿನ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ಭಾಗದ ಸಮಸ್ಯೆಗಳಿಗು ಸ್ಪಂದಿಸಲಿ ಎಂದರು.
ರಿಕ್ಷಾ ಚಾಲಕರಾದ ಸತೀಶ್ ಮೇಸ್ತ,ವಿಷ್ಣು ನಾಯ್ಕ ಮಾತನಾಡಿ ನಾವು ರಿಕ್ಷಾ ಚಾಲನೆಯಲ್ಲಿ ದುಡಿದ ಹಣ ವಾಹನ ರಿಪೇರಿ ಖರ್ಚಿಗೆ ಸರಿಯಾಗುತ್ತದೆ. ಸಂಸಾರ ನಡೆಸುವುದು ಕಷ್ಟವಾಗಿದೆ ಎಂದರು. ಗರ್ಭಿಣಿಯರನ್ನು ರಿಕ್ಷಾದಲ್ಲೇ ಕರೆದೊಯ್ಯುವಾಗ ಅವರು ಈ ರಸ್ತೆಯಲ್ಲಿ ಸಂಚರಿಸಿ ಅನುಭವಿಸುವ ಕಷ್ಟ ಹೇಳತೀರದಾಗಿದೆ ನರಕಯಾತನೆ ಎಂದು ಹಿಡಶಾಪ ಹಾಕುತ್ತಾರೆ.ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳು ಇದೇ ರಸ್ತೆಯಲ್ಲಿ ಸಂಚರಿಸಿದರು ರಸ್ತೆ ದುಸ್ಥಿತಿಯ ಬಗ್ಗೆ ಗಮನಹರಿಸುತ್ತಿಲ್ಲ . ಈ ರಸ್ತೆಗೆ ಕಾಟಾಚಾರಕ್ಕೆ ಪ್ಯಾಚ್ ವರ್ಕ್ ಮಾಡುವುದು ಬೇಡ ಮಾಡುವುದಾದರೇ ಉತ್ತಮ ಗುಣಮಟ್ಟದ ರಸ್ತೆ ಮಾಡಲಿ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸತೀಶ್ ನಾಯ್ಕ, ಮಾಬ್ಲೆಶ್ವರ ನಾಯ್ಕ, ಮಾರುತಿ ನಾಯ್ಕ, ಮಂಜುನಾಥ ಗೌಡ, ಈಶ್ವರ ಗೌಡ, ಶ್ರೀಧರ್ ನಾಯ್ಕ, ದಿನೇಶ್ ಅಂಬೀಗ, ರಾಶೀದ್ ಮುಲ್ಲಾ, ರಶೀದ್, ಹನೀಪ್, ಅರ್ವಾಜ್ ಮತ್ತಿತರರು ಪಾಲ್ಗೊಂಡಿದ್ದರು.

Leave a Comment