ಕಾರವಾರ: ಸಾಗರಮಾಲಾ ಯೋಜನೆ ಅಡಿ ಬಂದರು ವಿಸ್ತರಣೆಗೆ ಸಂಬಂಧಿಸಿದಂತೆ ಸಚಿವರ ಸಭೆ ನಡೆಯುವವರೆಗೆ ಕಾಮಗಾರಿ ಸ್ಥಗಿತಗೊಳಿಸುವ ಭರವಸೆ ದೊರೆತ ಹಿನ್ನಲೆಯಲ್ಲಿ ಮೀನುಗಾರರು ನಾಲ್ಕು ದಿನಗಳ ಪ್ರತಿಭಟನೆಯನ್ನು ಗುರುವಾರ ತಾತ್ಕಾಲಿಕವಾಗಿ ಹಿಂಪಡೆದರು.
ಸಾಗರಮಾಲಾ ಯೋಜನೆ ಅಡಿ ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರು ನಡೆಸಿದ ಹೋರಾಟ ನಾಲ್ಕನೇ ದಿನವಾದ ಗುರುವಾರ ಬೆಳಗ್ಗೆಯಿಂದ ಮದ್ಯಾಹ್ನದ ವರೆಗೂ ನಡೆದಿದ್ದು, ಇದರ ಅಂಗವಾಗಿ ನಗರದಲ್ಲಿ ಪ್ರತಿಭಟನಾ ಮೆರವಣಿಗಗಳು ನಡೆದವು. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವ್ಯಾಪಾರಸ್ಥರು ಕೂಡ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ವಿವಿಧ ಸಂಘಟನೆಯವರು ಕರೆ ನೀಡಿದ್ದ ಕಾರವಾರ ಬಂದ್ ಯಶಸ್ವಿಯಾಗಿದ್ದು, ವ್ಯಾಪಾರ-ವಹಿವಾಟುಗಳು ಸಂಪೂರ್ಣ ಸ್ಥಬ್ದವಾಗಿದ್ದವು. ಪ್ರತಿಭಟನೆ ಹಿನ್ನಲೆಯಲ್ಲಿ ಕೆಲ ಖಾಸಗಿ ಶಾಲೆಗಳು ರಜೆ ಘೋಷಿಸಿದ್ದವು. ಸರ್ಕಾರಿ ಸ್ವಾಮ್ಯತೆಯ ಕೆಎಸ್ಆರ್ಟಿಸಿ ಬಸ್ಗಳು ಅಪಾಯದ ಸುಳಿವಿನಿಂದಾಗಿ ರಸ್ತೆಗೆ ಇಳಿಯಲಿಲ್ಲ. ಬೇರೆ ಬೇರೆ ಕಡೆಗಳಿಂದ ನಗರಕ್ಕೆ ಬರಬೇಕಿದ್ದ ಬಸ್ಗಳು ಅಂಕೋಲಾ ಹಾಗೂ ಇತರೆ ತಾಲೂಕು ಪ್ರದೇಶಗಳಲ್ಲಿಯೇ ನಿಂತಿದ್ದವು.

ಗುರುವಾರ ಬೆಳಗ್ಗೆ ಮಿತ್ರ ಸಮಾಜದ ಬಳಿ ಜಮಾಯಿಸಿದ್ದ ಜನ ಸಾಗರ ಯೋಜನೆ ವಿರೋಧಿಸಿ ದಿಕ್ಕಾರ ಕೂಗಿದರು. ಮೀನುಗಾರ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಯೋಜನೆ ಸ್ಥಗಿತಗೊಳ್ಳುವವರೆಗೂ ಹೋರಾಟ ನಡೆಸುವ ಬಗ್ಗೆ ನಿರ್ಧರಿಸಿದರು. ಮಹಿಳೆಯರು, ಮಕ್ಕಳು ಹಾಗೂ ವೃದ್ದರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಸುಮಾರು 5ಸಾವಿರ ಜನ ಮೆರವಣಿಗೆಯಲ್ಲಿದ್ದರು. ಮುಂಜಾನೆಯಿಂದಲೇ ಪ್ರತಿಭಟನೆಗಾಗಿ ಆಗಮಿಸಿದ್ದ ಜನ ಸಾಗರಮಾಲಾ ಯೋಜನೆಯ ವಿರುದ್ದ ನಾಮಫಲಕಗಳನ್ನು ಪ್ರದರ್ಶಿಸಿದರು. ಜಾನಪದ ಶೈಲಿಯ ವಿವಿಧ ಹಾಡುಗಳೊಂದಿಗೆ ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು.

- ಹೆದ್ದಾರಿ ತಡೆ
ನಗರದ ಪ್ರಮುಖ ರಸ್ತೆಗಳಲ್ಲಿ ಹೋರಾಟ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲು ನಿರ್ಧರಿಸಿದ್ದರು. ಆದರೆ, ಮಾರ್ಗ ಮದ್ಯೆ ತಮ್ಮ ನಿಲುವು ಬದಲಿಸಿ ಬಿಲ್ಟ್ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ ಅಲ್ಲಿಗೆ ಬಂದು ಪ್ರತಿಭಟನಾಕಾರರ ಮನವಿ ಆಲಿಸಿದರು. ಕೆಲ ಸಮಯ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದ್ದು, ವಾಹನಗಳನ್ನು ಬದಲಿ ಮಾರ್ಗಗಳ ಮೂಲಕ ಬಿಡಲಾಯಿತು. ಹೆದ್ದಾರಿ ತಡೆಯ ವೇಳೆ ಜನ ಬಂದರು ವಿಸ್ತರಣೆ ಕಾಮಗಾರಿ ಸಂಪೂರ್ಣವಾಗಿ ಬಂದ್ ಮಾಡುವಂತೆ ಆಗ್ರಹಿಸಿದರು. ಪ್ರಸ್ತುತ ಕಾಮಗಾರಿ ಕುರಿತು ಮರುಪರಿಶೀಲನೆ ಹಾಗೂ ಸಭೆ ನಡೆಯಲಿದ್ದು, ಅಲ್ಲಿಯ ವರೆಗೆ ಕೆಲಸ ಮುಂದುವರೆಯದಂತೆ ಸೂಚಿಸುವದಾಗಿ ಜಿಲ್ಲಾಧಿಕಾರಿ ಪ್ರಕಟಿಸಿದರು. ಹೀಗಾಗಿ ಪ್ರತಿಭಟನಾಕಾರರು ದರಣಿ ಹಿಂಪಡೆದರು. ಕಾರವಾರ ಕಡಲ ತೀರ ಸಂರಕ್ಷಣಾ ಹೋರಾಟ ಸಮಿತಿ ಮೂಲಕ ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರಿಗೆ ಮನವಿ ರವಾನಿಸಲಾಯಿತು.

Leave a Comment