
ಹಳಿಯಾಳ:- ಜಿದ್ದಾಜಿದ್ದಿನ ಹಾಗೂ ಹಗೆತನದ ರಾಜಕಾರಣಕ್ಕೆ ಹೆಸರಾದ ಹಳಿಯಾಳ ಕ್ಷೇತ್ರದಲ್ಲಿ ವಿರೋಧ ಪಕ್ಷಗಳು ಸೇರಿದಂತೆ ಎಲ್ಲ ವರ್ಗದವರಿಂದಲೂ ಗೌರವಿಸಲ್ಪಡುವ ಹಳಿಯಾಳದ ಅಜಾತಶತ್ರು ಹಿರಿಯ ಮುತ್ಸದ್ದಿ ರಾಜಕಾರಣಿ ಮಾಜಿ ವಿಧಾನ ಪರಿಷತ್ ಸದಸ್ಯ ವಿಡಿ ಹೆಗಡೆ ಅವರು 81 ನೇ ವಸಂತಕ್ಕೆ ಕಾಲಿಡುತ್ತಿದ್ದು ಅವರ ಬಗ್ಗೆ ಒಂದಿಷ್ಟು ಮಾಹಿತಿ ಓದುಗರ ಮುಂದೆ.
ಹಳಿಯಾಳದಲ್ಲಿ ದಿ.21-1-1940ಕ್ಕೆ ಜನಿಸಿದ ವಿಡಿ ಹೆಗಡೆ ಅವರು ದಿ.21-1-2020 ಕ್ಕೆ 81 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಉದ್ಯಮಿ ಆಗಿರುವ ವಿಡಿ ಹೆಗಡೆ ಅವರು ಕರ್ಮಯೋಗಿ, ಸ್ಪಷ್ಟ ಮಾತುಗಾರ, ನೇರ-ನಿಷ್ಟುರವಾದಿ, ಅಭಿವೃದ್ದಿ ಪರ ವಿಚಾರಧಾರೆಯುಳ್ಳ ವ್ಯಕ್ತಿತ್ವ ಹೊಂದಿರುವ ಇವರ ಬಳಿ ಯಾರೇ ಬಂದರು ಮೊದಲು ಕೆಳುವುದು ಉದ್ಯೋಗದ ಕುರಿತು. ಇನ್ನೂ ಇವರು ನಿಷ್ಟುರವಾಗಿ ಮಾತನಾಡಿದರು ಸಹಿತ ಎಲ್ಲರೂ ಇವರನ್ನು ನೆನೆಸುತ್ತಾರೆ ಮಾತ್ರವಲ್ಲದೇ ತುಂಬಾ ಗೌರವದಿಂದ ಕಾಣುವುದು ವಿಡಿ ಹೆಗಡೆ ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಯಶಸ್ವಿ ಉದ್ಯಮಿಯು ಆಗಿರುವ ಅವರು ಹಳಿಯಾಳ ರಾಜಕೀಯ ರಂಗದ ಭೀಷ್ಮರಾಗಿದ್ದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ, ಮಾಜಿ ಶಾಸಕ ಸುನೀಲ್ ಹೆಗಡೆ ಸೇರಿದಂತೆ ಸದ್ಯ ವಿವಿಧ ಪಕ್ಷಗಳಲ್ಲಿರುವ ಮುಖಂಡರು ಅವರ ರಾಜಕೀಯ ಗರಡಿಯಲ್ಲೇ ಪಳಗಿದವರು. ಅವರು ಕೂಡ ಇಂದಿಗೂ ವಿಡಿ ಹೆಗಡೆ ಅವರನ್ನು ಗೌರವದಿಂದ ಕಾಣುತ್ತಾರೆ.

ಅವರ ನಿಕಟವರ್ತಿಗಳಾದ ಹಳಿಯಾಳ ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಹೂಲಿ ಅವರು ಹೇಳುವ ಹಾಗೆ ವಿಡಿ ಹೆಗಡೆ ಅವರು ಪ್ರಥಮ ಬಾರಿಗೆ ಹಳಿಯಾಳ ನಗರಸಭೆಗೆ 1972 ರಲ್ಲಿ ಆಯ್ಕೆಯಾದರು. ನಗರಸಭಾ ಉಪಾಧ್ಯಕ್ಷರಾಗಿ ಬಳಿಕ ಮತ್ತೊಂದು ಅವಧಿಗೆ ಆಯ್ಕೆಯಾಗಿ ಅಧ್ಯಕ್ಷರಾದರು. ಅಲ್ಲಿಂದ ಶುರುವಾದ ವಿಡಿ ಹೆಗಡೆ ರಾಜಕೀಯ ಪಯನ ಅಂದು ಹಳಿಯಾಳದ ಪ್ರತಿಷ್ಠಿತ ಬ್ಯಾಂಕ್ ಆಗಿದ್ದ ಅರ್ಬನ್ ಬ್ಯಾಂಕ್‍ಗೆ ನಿರ್ದೇಶಕರಾಗಿ ಆಯ್ಕೆಯಾಗಿ ಬಳಿಕ ಬ್ಯಾಂಕ್ ಚೇರಮನ್ ಕೂಡ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು.
ಬಳಿಕ ಜಿಲ್ಲಾ ಮಧ್ಯವರ್ತಿ ಕೆಡಿಸಿಸಿ ಬ್ಯಾಂಕ್‍ಗೆ ನಿರ್ದೇಶಕರಾಗಿ ಆಯ್ಕೆಯಾದ ಅವರು ಅಧ್ಯಕ್ಷರಾಗಿಯೂ ಹಲವು ವರ್ಷಗಳ ಕಾಲ ಆಡಳಿತ ನಡೆಸಿದರು. ಹೀಗೆ ವಿಡಿ ಹೆಗಡೆ ಅವರು ನಿರಂತರ ಯಶಸ್ಸನ್ನು ಕಾಣುತ್ತಾ 1999 ರಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ದಿಸಿ ಎಮ್.ಎಲ್.ಸಿ ಆಗಿ ಆಯ್ಕೆಯಾದರು. ಒಮ್ಮೇ ಎಮ್‍ಎಲ್‍ಸಿ ಆಗಿ ಕಾರ್ಯನಿರ್ವಹಿಸಿದ ಅವರಿಗೆ ಬಳಿಕ ರಾಜಕೀಯ ವಿದ್ಯಮಾನಗಳಲ್ಲಿ ಮತ್ತೊಮ್ಮೆ ವಿಧಾನ ಪರಿಷತ್ ಸದಸ್ಯರಾರುವ ಅವಕಾಶವೇ ದೊರೆಯಲಿಲ್ಲ.

ಈ ನಡುವೆ ಅವರು ತಮ್ಮ ಮಗ ಮಾಜಿ ಶಾಸಕ ಸುನೀಲ್ ಹೆಗಡೆ ಅವರನ್ನು ಹಿರಿಯ ರಾಜಕಾರಣಿ ಆರ್.ವಿ.ದೇಶಪಾಂಡೆ ಎದುರು ಗೆಲ್ಲಿಸಿ ಒಮ್ಮೆ ಶಾಸಕನಾಗಿ ಮಾಡುವಲ್ಲಿ ಸಫಲರಾಗಿದ್ದು ಇತಿಹಾಸ.
ಹೆಗಡೆ ಅವರು ರಾಜಕೀಯ ಮಾತ್ರವಲ್ಲದೇ ಶಿಕ್ಷಣ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಆಪಾರ ಆಸಕ್ತಿ ಹೊಂದಿದರಾಗಿದ್ದು ಹಳಿಯಾಳದಲ್ಲಿ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ. ಇನ್ನೂ ಹಳಿಯಾಳದ ಗಣೇಶ ಉತ್ಸವ ಮಂಡಳದ ಸಂಸ್ಥಾಪಕ ಅಧ್ಯಕ್ಷರು ಆಗಿರುವ ವಿಡಿ ಹೆಗಡೆ ಅವರು ದಿ.21 ಕ್ಕೆ 81ನೇ ವಸಂತಕ್ಕೆ ಕಾಲಿಡುತ್ತಿದ್ದು ಮಂಗಳವಾರ ಅವರ ಅಭಿಮಾನಿಗಳು ಪಟ್ಟಣದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ತಮ್ಮ ಹಿರಿಯ ನಾಯಕನ ಹುಟ್ಟುಹಬ್ಬವನ್ನು ಆಚರಿಸುವ ಉತ್ಸಾಹದಲ್ಲಿದ್ದಾರೆ.

Leave a Comment