
ಬಂದರು ನಿರ್ಮಾಣದಿಂದ ಮೀನುಗಾರಿಕಾ ಬಂದರಿಗೆ ತೊಂದರೆಯಾಗುತ್ತದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿಲಕ್ಷ ವಹಿಸುತ್ತಿದ್ದಾರೆ ಎಂದು ಮೀನುಗಾರರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಹೊನ್ನಾವರ ಪೋರ್ಟ್ ಕಂಪನಿ ಎಂಬ ಹೆಸರಿನಲ್ಲಿ ಆಂಧ್ರದ ಗುತ್ತಿಗೆದಾರರೊಬ್ಬರು ಶರಾವತಿ ಸಂಗಮದ ಅಳವೆ ಸಹಿತ 100 ಎಕರೆ ಭೂಮಿಯನ್ನು ಗುತ್ತಿಗೆ ಪಡೆದು ಬಂದರು ನಿರ್ಮಾಣ ಕಾಮಗಾರಿ ಈ ಹಿಂದೆಯೆ ಆರಂಭಿಸಿದ್ದರು ಹಿಂದಿನ ಬಿಜೆಪಿ ಸರ್ಕಾರದ ಸಚೀವರಾದ ಕೃಷ್ಣ ಪಾಲೇಮರ್ ಅಂದು ಬಂದರಿಗೆ ಅನುಮತಿ ನೀಡಿದ್ದರು. ಮೀನುಗಾರರಿಗೆ, ಮೀನುಗಾರಿಕೆಗೆ ತೊಂದರೆ ಇಲ್ಲದಂತೆ ಅವರಿಗೆ ಉದ್ಯೋಗಕೊಟ್ಟು, ಬಂದರು ಮಾಡುವುದಾಗಿ ಭರವಸೆ ಕೊಟ್ಟ ಕಂಪನಿ ತನ್ನ ಭರವಸೆ ಈಡೇರಿಸಿಲ್ಲ. ಅಲ್ಲದೇ ಮೀನುಗಾರಿಕೆಗೆ ತೀವ್ರ ತೊಂದರೆ ಉಂಟಾಗಿದೆ ಎಂದು ಪ್ರತಿಭಟಿಸಿ ಹೊನ್ನಾವರ ಮತ್ತು ನೆರೆತಾಲೂಕಿನ ಮಹಿಳೆಯರು, ಪುರುಷರು, ಹಿಂದೂ ಮುಸ್ಲಿಂ ಕೈಸ್ತರೆಲ್ಲದೆ ಎಲ್ಲರೂ ಒಗ್ಗೂಡಿ ಮೀನುಗಾರಿಕೆಗೆ ರಜೆ ನೀಡಿ ಬೃಹತ್ ಪ್ರತಿಭಟನೆ ನಡೆಸಿದರು.

ತಹಶೀಲ್ದಾರ ಕಚೇರಿಗೆ ಬಂದಾಗ ಶಾಸಕರುಗಳಾದ ದಿನಕರ ಶೆಟ್ಟಿ, ಸುನೀಲ ನಾಯ್ಕ, ಮಾಜಿ ಶಾಸಕ ಮಂಕಾಳು ವೈದ್ಯ ಮೊದಲಾದವರು ಮೀನುಗಾರರ ಅಹವಾಲನ್ನು ಕೇಳಿಕೊಂಡು ತಕ್ಕ ಪರಿಹಾರವನ್ನು ಒದಗಿಸಲಿದ್ದೇವೆ ಮಾತ್ರವಲ್ಲ ಅಲ್ಲಿಯವರೆಗೆ ಕೆಲಸ ನಿಲ್ಲಿಸುತ್ತೇವೆ ಎಂದು ಭರವಸೆಕೊಟ್ಟರು. ಉಪವಿಭಾಗಾಧಿಕಾರಿ ಸಾಜಿದ್ ಮುಲ್ಲಾ, ತಹಶೀಲ್ದಾರ ವಿವೇಕ ಶೇಣ್ವಿ ಮೊದಲಾದವರು ಉಪಸ್ಥಿತರಿದ್ದರು. ಮೀನುಗಾರರ ಬೇಡಿಕೆ ಏನೆಂದರೆ ಅಳವೆ ಸರಿಪಡಿಸುತ್ತೇವೆ, ಮೀನುಗಾರರನ್ನು ಒಕ್ಕಲೆಬ್ಬಿಸುವುದಿಲ್ಲ, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಮತ್ತು ಮೀನುಗಾರಿಕೆಗೆ ಧಕ್ಕೆ ಉಂಟುಮಾಡುವ ಯಾವುದೇ ಚಟುವಟಿಕೆಯನ್ನು ಮಾಡುವುದಿಲ್ಲ, ಸ್ಥಳೀಯರಿಗೆ ಉದ್ಯೋಗ ಕೊಡುತ್ತೇವೆ, ಪ್ರತ್ಯೇಕ ರಸ್ತೆ ಮಾಡಿಕೊಳ್ಳುತ್ತೇವೆ ಎಂದೆಲ್ಲಾ ಭರವಸೆಕೊಟ್ಟು ಯಾವುದೇ ಭರವಸೆಯನ್ನು ಈಡೇರಿಸದೆ ಬೃಹತ್ ಯಂತ್ರ ಬಳಸಿ ಇವರ ಬಂದರು ನಿರ್ಮಿಸಲು, ಹೂಳನ್ನು ಶರಾವತಿಗೆ ಸುರಿಯಲಾಗುತ್ತಿದೆ, ಮೀನುಗಾರಿಕಾ ರಸ್ತೆಯನ್ನೇ ಇವರು ಬಳಸುತ್ತಿದ್ದು ರಸ್ತೆ ಹಾಳಾಗಿ ಧೂಳು ತಿನ್ನುವಂತಾಗಿದೆ. ಆದ್ದರಿಂದ ಕಂಪನಿ ಒಪ್ಪಂದವನ್ನೇ ರದ್ದುಪಡಿಸಬೇಕು. ಮತ್ಸ್ಯಕ್ಷಾಮದಿಂದ ಮೀನುಗಾರರು ಕಂಗಾಲಾಗಿದ್ದೇವೆ. ಈ ಎಲ್ಲಾ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. ಸಮಸ್ಯೆ ಸರಿಪಡಿಸದೇ ಕಾಮಗಾರಿ ನಡೆಸಲು ಅನುಮತಿ ನೀಡಬಾರದು. ಸಮಸ್ಯೆಯನ್ನು ಒಂದು ವಾರದಲ್ಲಿ ಕ್ರಮಕೈಗೊಳ್ಳದಿದ್ದರೆ ಜಿಲ್ಲಾಮಟ್ಟದ ಮೀನುಗಾರರೆಲ್ಲಾ ಸೇರಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಕಾಸರಕೋಡ ಟೊಂಕದಿಂದ 5ಕಿಮೀ ಮೆರವಣಿಗೆಯಲ್ಲಿ ಬಂದ ಪರ್ಶಿಯನ್ ಬೋಟ್ ಸಂಘದ ಅಧ್ಯಕ್ಷ ಹಮ್ಜಾ ಪಟೇಲ್, ಮೀನುಗಾರ ಕಾರ್ಮಿಕ ಸಂಘದ ಅಧ್ಯಕ್ಷ ಅಶೋಕ ಕಾಸರಕೋಡ, ಟ್ರೋಲರ್ ಬೋಟ್ ಸಂಘದ ಅಧ್ಯಕ್ಷ ರಾಮಚಂದ್ರ ಹರಿಕಂತ್ರ, ಸಗಟು ಮೀನು ವ್ಯಾಪಾರಸ್ಥ ಸಂಘದ ಗಣಪತಿ ತಾಂಡೇಲ್, ಭಾಸ್ಕರ್ ತಾಂಡೆಲ್ ಸಹಿತ 2 ಸಾವಿರಕ್ಕೂ ಅಧಿಕ ಮೀನುಗಾರರು ಪಟ್ಟಣ ಪಂಚಾಯತಿಯ ಸಭಾಂಗಣದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತಹಶೀಲ್ದಾರ ಕಚೇರಿಗೆ ಆಗಮಿಸಿದರು.

Leave a Comment