
ಹಳಿಯಾಳ:- ರಕ್ತದಾನ ಮಹಾದಾನವಾಗಿದ್ದು ಮತ್ತೋಬ್ಬರ ಜೀವ ಉಳಿಸಲು ಸಹಕಾರಿಯಾಗಿದೆ ಹಾಗೂ ರಕ್ತದಾನದಿಂದ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಕಾರ್ಯಕಾರಿಣಿ ಮಂಡಳಿಯ ಅಧ್ಯಕ್ಷರಾದ ಪ್ರಸಾದ ದೇಶಪಾಂಡೆ ಅಭಿಪ್ರಾಯಪಟ್ಟರು.
ಹಳಿಯಾಳದ ವಿ.ಆರ್.ಡಿ.ಎಮ್ ಟ್ರಸ್ಟ ಪ್ರಾಯೋಜಿತ ಕೆನರಾ ಬ್ಯಾಂಕ ದೇಶಪಾಂಡೆ ಆರ್ಸೆಟ್ ಸಂಸ್ಥೆ, ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರ- ಧಾರವಾಡ ಮತ್ತು ಪೋಲಿಸ್ ಇಲಾಖೆ, ಇವರ ಸಹಯೋಗದಲ್ಲಿ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಯುವಕ-ಯುವತಿಯರು ಅತಿ ಮುಖ್ಯ ಪಾತ್ರ ವಹಿಸುತ್ತಾರೆ. ಅಂತಹ ಯುವ ಜನತೆ ಇಂದು ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ಅಪಘಾತದಲ್ಲಿ ಸರಿಯಾದ ಸಮಯದಲ್ಲಿ ರಕ್ತ ಸಿಗದೇ ಸಾವನ್ನಪ್ಪುತ್ತಿದ್ದಾರೆ. ಇಂದು ನೀವು ಮಾಡುವ ರಕ್ತದಾನ, ಮತ್ತೊಬ್ಬರ ಜೀವ ಉಳಿಸಲು ಸಹಕಾರಿ, ರಕ್ತದಾನ ಮಾಡಿ ಇದರಿಂದ ಮತ್ತೊಂದು ಜೀವ ಉಳಿಯುವುದಲ್ಲದೇ, ನಿಮ್ಮ ಆರೋಗ್ಯವೂ ವೃದ್ಧಿಯಾಗುತ್ತದೆ ಅಲ್ಲದೇ ಉತ್ತಮ ಆರೋಗ್ಯಕ್ಕಾಗಿ ರಕ್ತದಾನ ಮಾಡುವಂತೆ ಪ್ರಸಾದ ದೇಶಪಾಂಡೆ ಕರೆ ನೀಡಿದರು.
ಧಾರವಾಡ ಜಿಲ್ಲಾ ಆಸ್ಪತ್ರೆ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ. ಪ್ರಭು ಸಗ್ಗಮ ಮಾತನಾಡಿ “ರಕ್ತದಾನ ಮಾಡುವುದರಿಂದ ನಿಮ್ಮ ರಕ್ತದ ಹರಿವು ಹೆಚ್ಚಿ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಬರೀ ಇಷ್ಟೇ ಅಲ್ಲ, ನಿಮ್ಮ ಆರೋಗ್ಯದ ಸ್ಥಿತಿಯೂ ಉತ್ತಮವಾಗುವುದಲ್ಲದೇ, ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ತಲೆದೋರುವುದಿಲ್ಲ, ಆದ್ದರಿಂದ ರಕ್ತದಾನ ಮಾಡಿ ನೀವೂ ಆರೋಗ್ಯವಂತರಾಗಿ, ಮತ್ತೊಂದು ಜೀವವನ್ನೂ ಉಳಿಸಿ ಎಂದು ಕರೆ ನೀಡಿದರು.

ಹಳಿಯಾಳ ಪೋಲೀಸ್ ನಿರೀಕ್ಷಕರಾದ ಬಿ.ಎಸ್.ಲೋಕಾಪುರ ಮಾತನಾಡಿ ಮನುಷ್ಯನ ಜೀವ ಹಾಗೂ ಜೀವನ ಎರಡೂ ಮುಖ್ಯ ಹಾಗಾಗಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಕರೆ ನೀಡಿದ ಅವರು ರಕ್ತದಾನ ಶಿಬಿರ ಬಹಳ ಮಹತ್ವದ್ದಾಗಿದ್ದು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಜೊತೆಗೆ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಿಎಸ್ಐ ಯಲ್ಲಾಲಿಂಗ ಕುನ್ನೂರು, ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ವಾಣ, ಸಂತೋಷ ಪರೀಟ್, ಮನು ವೈದ್ಯ, ಪೋಲಿಸ್ ಇಲಾಖೆಯ ಸಿಬ್ಬಂದಿ ವರ್ಗದವರು, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯ ತರಬೇತಿ ಕೇಂದ್ರದ ಶಿಭಿರಾರ್ಥಿಗಳು, ಭಾಗವಹಿಸಿ ಒಟ್ಟು 40 ಜನರು ರಕ್ತದಾನವನ್ನು ಮಾಡಿದರು.
– ಹಳಿಯಾಳ ಪಿಎಸ್ಐ ಯಲ್ಲಾಲಿಂಗ್ ಕುನ್ನೂರ ಅವರು ರಕ್ತದಾನ ಮಾಡಿದರು.

Leave a Comment