
ಹೊನ್ನಾವರ: ಒಡಹುಟ್ಟಿದವರನ್ನೆ ಬಿದಿಗೆ ತಳ್ಳೊ ಈ ಕಾಲದಲ್ಲಿ ಬಿದಿಗೆ ಬಿದ್ದ ಅಪರಿಚಿತ, ಮಾನಸಿಕ ಸ್ಥಿತಿ ಅಷ್ಟಾಗಿ ಸರಿ ಇಲ್ಲದ ಶಿರಸಿಯ ತನ್ನೂರಿನಿಂದ ಹೊನ್ನಾವರಕ್ಕೆ ಬಂದಿಳಿದ ವ್ಯಕ್ತಿಯನ್ನು ಪುನಃ ಆತನ ಊರಿಗೆ ತಲುಪಿಸುವ ಕಾರ್ಯಮಾಡುವ ಮೂಲಕ ಪಟ್ಟಣದ ಟ್ರೆಂಡ್ಸ್ ಕ್ಲಾತ್ ಶಾಪ್ ಮಾಲೀಕ ಯುವಕ ರಾಜೇಶ್ ಎನ್ ನಾಯ್ಕ ಅವರು ಮಾನವೀಯತೆ ಮೆರೆದಿದ್ದಾರೆ.
ಕಳೆದ 5-6ದಿನಗಳ ಹಿಂದೆ , ಹೆಸರು ಮಂಜುನಾಥ ಎಂದು ಹೇಳಿಕೊಂಡ ವ್ಯಕ್ತಿ ಕಾಸರಕೋಡದಲ್ಲಿ ಯಾವುದೋ ವಾಹನದ ಮೂಲಕ ಬಂದಿಳಿದಿದ್ದಾನೆ. ಆದರೆ ಆತನಿಗೆ ಯಾವ ಊರಿಗೆ ಬಂದಿದ್ದೇನೆ ಎನ್ನುವುದು ತಿಳಿದಿಲ್ಲ. ಸ್ಥಳಿಯರು ಪ್ರಶ್ನಿಸಿದರೆ ಬಸ್ಸಲ್ಲಿ ಬಂದಿದೆ,ಬಾಳೆಕಾಯಿ ತುಂಬಿದ ವಾಹನದಲ್ಲಿ ಬಂದಿದ್ದೆ ಎಂದು ಅಸ್ಪಷ್ಟ ಉತ್ತರ ನೀಡಿದ್ದಾನೆ. ಜೀವನದ ಯಾವುದೋ ಘಟನೆಯಿಂದ ಮಾನಸಿಕ ಸ್ಥಿತಿ ಹದಗೆಟ್ಟಿದಂತೆ ಆ ವ್ಯಕ್ತಿಯ ಮಾತಿನ ಶೈಲಿಯಲ್ಲಿ ಭಾಸವಾಗುತ್ತಿತ್ತು. ನಾಜಗಾರದ ರಸ್ತೆ ಬದಿಯ ಗ್ಯಾರೆಜ್ ಒಂದರಲ್ಲಿ ರಟ್ಟಿನ ಮೇಲೆ ಮಲಗಿ ದಿನ ಕಳೆಯುತ್ತಿದ್ದ ಎನ್ನಲಾಗಿದೆ. ಈತನಿಗೆ ಸ್ಥಳೀಯರು, ಗ್ಯಾರೆಜ್ ಮಾಲೀಕ ಮಂಜುನಾಥ ಮಡಿವಾಳ ಹಾಗೂ ರಾಜೇಶ್ ನಾಯ್ಕ ಪ್ರತಿದಿನ ಊಟದ ವ್ಯವಸ್ಥೆ ಮಾಡಿದ್ದರು. ರಾತ್ರಿ ಚಳಿಯಲ್ಲಿ ನಡುಗುತ್ತಾ ಮಲಗಿದ್ದ ವ್ಯಕ್ತಿಗೆ ರಾಜೇಶ್ ಅವರು ಮಲಗಲು ಚಾಪೆ,ಬೆಡ್ ಶಿಟ್ , ಧರಿಸಲು ಉತ್ತಮವಾದ ಬಟ್ಟೆ ಸಹ ನೀಡಿದ್ದಾರೆ. ಈತನ ಕುರಿತು ಸ್ಥಳಿಯರು ಮಂಕಿ ಪೊಲೀಸ್ ಠಾಣೆಗು ದೂರವಾಣಿ ಮೂಲಕ ಮಾಹಿತಿ ನೀಡಿದ್ದು ಅವರು ವ್ಯಕ್ತಿಯ ಕುರಿತು ಮಾಹಿತಿ ಪಡೆದಿದ್ದರು. ಅನಾಥರ ರಕ್ಷಣೆ ಮಾಡುವ ಸಂಘ,ಸಂಸ್ಥೆಗಳಿಗು ಮಾಹಿತಿ ನೀಡಲಾಗಿತ್ತು. ಮಾಹಿತಿ ಪಡೆದಿದ್ದದ್ದು ಮಾತ್ರವಾಗಿದ್ದು ಯಾರಿಂದಲೂ ಸರಿಯಾದ ಸ್ಪಂದನೆ ಸಿಕ್ಕಿಲ್ಲವಾಗಿತ್ತು. ಕೊನೆಗೆ ಆ ವ್ಯಕ್ತಿಯ ಸ್ಥಿತಿಗತಿಯನ್ನು ಗಮನಿಸಿದ ರಾಜೇಶ್ ಅಪರಿಚಿತನ ಸಂಪೂರ್ಣ ವಿಳಾಸ ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ ಆತ ಒಮ್ಮೆ ಸಾಗರ,ಇನ್ನೊಮ್ಮೆ ಶಿರಸಿ ಎಂದಿದ್ದ ಎನ್ನಲಾಗಿದೆ. ಶನಿವಾರ ರಾಜೇಶ್ ಪರಿಚಯಸ್ಥರೊರ್ವರು ಇತನ ಗುರುತು ಪತ್ತೆ ಹಚ್ಚಿದ್ದರು. ಇತ ಶಿರಸಿಯವನೆಂದು ತಿಳಿದು ಬಂದಿದ್ದು ರವಿವಾರ ಆತನ ಸುರಕ್ಷಿತವಾಗಿ ಊರಿಗೆ ತಲುಪಿಸುವಲ್ಲಿ ರಾಜೇಶ್ ಅವರು ಯಶಸ್ವಿಯಾಗಿದ್ದಾರೆ. ಮಂಜುನಾಥ ಮಡಿವಾಳ ಅವರು ಈ ಮಾನವೀಯ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಯಾವ ಸಂಘಟನೆ, ಸಂಸ್ಥೆ ಮಾಡದ ಕಾರ್ಯಕ್ಕೆ ರಾಜೇಶ್ ನಾಯ್ಕಮಾಡಿರುವುದು ಅತ್ಯಂತ ಶ್ಲಾಘನೀಯ ವಿಚಾರ.

Leave a Comment