
ಹಳಿಯಾಳ :- ಕಸಗೂಡಿಸುವುದರಿಂದ ಹಿಡಿದು ಮಂತ್ರಿ, ಮುಖ್ಯಮಂತ್ರಿ, ಪ್ರಧಾನಿಯವರೆಗೂ ಎಲ್ಲರೂ ಮಾಡುವುದು ಕಾಯಕ. ಕಾಯಕ ಮಾಡುವುದರಿಂದ ದೇಶ ಸಮೃದ್ಧವಾಗುತ್ತದೆ. ಬಸವಣ್ಣನವರು ಬರುವ ಮುನ್ನ ನಮ್ಮ ಪರಿಸ್ಥಿತಿ ಯಾವ ರೀತಿ ಇತ್ತು ಎಂಬುದನ್ನು ಅವಲೊಕನ ಮಾಡಿಕೊಳ್ಳಬೇಕು. ಜನತಂತ್ರವನ್ನು ಜಗತ್ತಿಗೆ ಪರಿಚಯಿಸಿದವರು ಬಸವಾದಿ ಶರಣರು ಎಂದು ಧಾರವಾಡದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಪ್ರತಿಪಾದಿಸಿದರು.
ಹಳಿಯಾಳದ ಧಾರವಾಡ ರಸ್ತೆಯ ಅಂಗಡಿ ಗ್ಯಾಸ್ ಸರ್ವಿಸ್ ಆವರಣದ ತೋಟದಲ್ಲಿ ಧಾರವಾಡದ ಶಿವಾನಂದ ದೇವಗಿರಿ ಮತ್ತು ಗೆಳೆಯರ ಬಳಗ ಉಳವಿ ಜಾತ್ರೆಗೆ ಹೋಗುವ ಯಾತ್ರಾರ್ಥಿಗಳಿಗೆ ಆಯೋಜಿಸಿದ 5 ದಿನಗಳ ಅನ್ನ ದಾಸೋಹದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡುತ್ತಿದ್ದರು. ಅನ್ನದಾಸೊಹ ಆಯೋಜಿಸಿದ ಹಾಗೂ ಸಹಕಾರ ನೀಡಿದ ಹಳಿಯಾಳ ಬಸವಕೇಂದ್ರದವರ ಕಾರ್ಯವನ್ನು ಶ್ಲಾಘೀಸಿದರು.
ಧರ್ಮ ಅಂದರೇ ಸತ್ಯಶುದ್ಧ ಕಾಯಕ ಮಾಡುವುದು ನಿತ್ಯ ದಾಸೋಹ ಮಾಡುವುದಾಗಿದೆ. ಧಾರವಾಡ ಮುರುಘಾಮಠದ ಮೃತ್ಯುಂಜಯ ಅಪ್ಪಗಳು ಯಾವಾಗಲೂ ಸತ್ಯಶುದ್ಧ ಕಾಯಕ ಮಾಡು ಗಳಿಸು, ಉಳಿಸು, ದಾಸೋಹಕ್ಕೆ ಬಳಸು ಎಂದು ಹೇಳುತ್ತಿದ್ದರು ಎಂದರು.
ಉತ್ತರ ಕನ್ನಡ ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಘೋಟ್ನೇಕರ ಮಾತನಾಡಿ ಬಸವಾದಿ ಶರಣರ ವಚನಗಳಿಂದ ನಾವು ಸಾಕಷ್ಟು ಕಲಿತಿದ್ದೇವೆ. ಮುಂದಿನ ವರ್ಷದ ಜಾತ್ರೆಗೆ ಹೋಗುವ ಯಾತ್ರಾರ್ಥಿಗಳಿಗೆ ಇನ್ನೂ ಮೊದಲು ಮತ್ತು ಹೆಚ್ಚಿನ ವ್ಯವಸ್ಥೆಯನ್ನು ನಾವೆಲ್ಲರೂ ಸೇರಿ ಮಾಡೋಣವೆಂದರು.
ಕರ್ನಾಟಕ ವಿಶ್ವವಿದ್ಯಾಲಯದ ಬಸವಪೀಠದ ಸಂಚಾಲಕ ಡಾ. ಸಿ. ಎಂ. ಕುಂದಗೋಳ ಶರಣರು ಮೆಟ್ಟಿದ ಧರೆ ಪಾವನ ಸುಕ್ಷೇತ್ರವಾಗಿದ್ದು ಇಂದಿಗೂ ಉಳವಿಗೆ ಕೆಲವು ಜನ ಬರಿಗಾಲಿನಲ್ಲಿ ಹೋಗುತ್ತಾರೆ. ಚಕ್ಕಡಿಯಲ್ಲಿಯೇ ಹೋಗುತ್ತಾರೆ. ತಮ್ಮ ಜೀವದ ಹಂಗುದೊರೆದು ವಚನ ಕಟ್ಟುಗಳನ್ನು ಸಂರಕ್ಷಿಸಿ ನಮಗೆ ಧರ್ಮ ಕೊಟ್ಟ ಮಹಾತ್ಮ ಉಳವಿಯ ಅವಿರಳಜ್ಞಾನಿ ಷಟಸ್ಥಲ ಚಕ್ರವರ್ತಿ ಚನ್ನಬಸವಣ್ಣನವರು. ಅವರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಖ್ಯಾತ ಸಾಹಿತಿ ಡಾ. ಗುರುಲಿಂಗ ಕಾಪಸೆ ಮಾತನಾಡಿ ದೇವರು ಶಕ್ತಿಕೊಟ್ಟಿದ್ದಾನೆಂದು ನಾವು ಈ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಇದಕ್ಕೆ ದೇವರಿಗೆ ಸದಾ ಚಿರಋಣಿಯಾಗಿರಬೇಕು. ಅದಕ್ಕೆ ಅನ್ನದಾಸೋಹ, ಜ್ಞಾನ ದಾಸೋಹದಂತಹ ಒಳ್ಳೆಯ ಕಾರ್ಯ ಮಾಡುವುದು ಶ್ಲಾಘನೀಯವೂ, ಅನುಕರಣೀಯವೂ ಆಗಿದೆ ಎಂದರು.
ಧಾರವಾಡದ ನ್ಯಾಯವಾದಿ ಪ್ರಕಾಶ ಉಡಿಕೇರಿ, ಹಳಿಯಾಳದ ನ್ಯಾಯವಾದಿ ಪ್ರಕಾಶ ಅಂಗಡಿ, ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಮಾತನಾಡಿದರು. ಖ್ಯಾತ ಜಾನಪದ ಗಾಯಕ ಬಸಲಿಂಗಯ್ಯಾ ಹಿರೇಮಠ ವಚನ ಪ್ರಾರ್ಥನೆ ಹಾಡಿದರು. ವೇದಿಕೆಯ ಮೇಲೆ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪದ ವಿಶ್ವೇಶ್ವರಿ ಹಿರೇಮಠ, ಧಾರವಾಡ ಬಸವಕೇಂದ್ರದ ರಾಜು ಮರಳಪ್ಪನವರ, ಶಿವಣ್ಣ ಶರಣನವರ, ಸುರೇಶ ವಾಣಿ, ಬಸವಂತ ತೋಟದ, ಪ್ರಭು ನಡಕಟ್ಟಿ, ಶಿವಾನಂದ ದೇವಗಿರಿ, ಶಿವಪುತ್ರಪ್ಪ ಬಾವಿಕಟ್ಟಿ, ಸಂಜಯ ಲಕಮನಹಳ್ಳಿ, ಶಂಕರ ಕುಂಬಿ, ಶಿವಾನಂದ ಲೋಲೆನ್ನವರ ಇದ್ದರು.
ಇದೇ ಸಂದರ್ಭದಲ್ಲಿ ದಾಸೋಹಕ್ಕೆ ಸಹಕರಿಸಿದ ಚಂದ್ರಕಾಂತ ಅಂಗಡಿ ಮತ್ತು ಸುಮಂಗಲಾ ಅಂಗಡಿ ದಂಪತಿಗಳನ್ನು ಸನ್ಮಾನಿಸಲಾಯಿತು. ಶಿವಾನಂದ ಬಾವಿಕಟ್ಟಿ, ಉಮೇಶ ಕಟಗಿ ಮತ್ತು ಡಾ. ವೀರಣ್ಣ ವಡ್ಡೀನ ಕಾರ್ಯಕ್ರಮ ನಿರ್ವಹಿಸಿದರು.

Leave a Comment