
ಹೊನ್ನಾವರ: ತಾಲ್ಲೂಕಿನ ಕಡ್ಲೆಯ ಗೇರು ನೆಡುತೋಪಿನಲ್ಲಿ ಶುಕ್ರ ವಾರ ಸಂಜೆ ನಡೆದುಕೊಂಡು ಬರುತ್ತಿದ್ದ ಗ್ರಾಮಸ್ಥರೊಬ್ಬರ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದೆ.
ವೆಂಕಟರಮಣ ತಿಮ್ಮಣ್ಣ ಹೆಗಡೆ ಗಾಯಾಳುವಾಗಿದ್ದು, ಚಿರತೆಯೊಂದಿಗೆ ಹೋರಾಡಿ ಜೀವ ಉಳಿಸಿಕೊಂಡಿದ್ದಾರೆ.
ಸರ್ವೆ ನಂಬರ್ 50ರಲ್ಲಿರುವ ನೆಡುತೋಪಿನಲ್ಲಿ ಬರುತ್ತಿದ್ದಾಗ ಚಿರತೆಯು ಅವರ ಮೇಲೆ ಏಕಾಏಕಿ ಎರಗಿತು. ಈ ಬಗ್ಗೆ ಮಾಹಿತಿ ನೀಡಿದ ಅವರ ಸಂಬಂಧಿ ಗಣೇಶ ಹೆಗಡೆ, ‘ವೆಂಕಟರಮಣ ಅವರ ಕುತ್ತಿಗೆಯನ್ನು ಗುರಿಯಾಗಿಟ್ಟು ಚಿರತೆ ದಾಳಿ ಮಾಡಿತ್ತು. ಅದನ್ನು ಗಮನಿಸಿದ ಅವರು ಸಮಯಪ್ರಜ್ಞೆ ಮೆರೆದು ತಮ್ಮ ಕೈಗಳನ್ನು ಅಡ್ಡವಾಗಿ ಹಿಡಿದರು. ಚಿರತೆಯು ಅವರ ಕೈಗಳಿಗೆ ಕಚ್ಚಿತು. ಗಾಯಗೊಂಡು ನೆಲಕ್ಕೆ ಬಿದ್ದ ಅವರು ಅಲ್ಲೇ ಕೈಗೆ ಸಿಕ್ಕ ಕಲ್ಲಿನಿಂದ ಚಿರತೆಯ ಮುಖಕ್ಕೆ ಹೊಡೆದರು. ಆಗ ಅದು ಓಡಿಹೋಗಿದ್ದರಿಂದ ಅವರ ಜೀವ ಉಳಿಯಿತು’ ಎಂದು ತಿಳಿಸಿದರು.
ಗಾಯಾಳುವಿಗೆ ಹೊನ್ನಾವರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡ ಲಾಗುತ್ತಿದೆ.
[…] […]