
ಹಳಿಯಾಳ:- ಫೆ.ದಿ.19 ರಂದು ಹಳಿಯಾಳದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ “ಶಿವಾಜಿ ಜಯಂತಿ” ಸರ್ಕಾರಿ ಕಾರ್ಯಕ್ರಮ ಆಯೋಜನೆಯ ಕುರಿತು ಮರಾಠಾ ಸಮುದಾಯ, ಜನಪ್ರತಿನಿಧಿಗಳು, ಪಟ್ಟಣದ ವಿವಿಧ ಸಂಘಟನೆಗಳೊಂದಿಗೆ ಮಿನಿ ವಿಧಾನಸೌಧದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಿಂಹಪಾಲು ಮರಾಠಾ ಸಮುದಾಯವನ್ನು ಹೊಂದಿರುವ ಹಳಿಯಾಳದಲ್ಲಿ ವಿವಿಧ ಮರಾಠಾ, ಮಹಿಳಾ ಸಂಘಟನೆಗಳು ಇದ್ದು ದಿ.19 ರಂದು ಎಲ್ಲರೂ ರಾಷ್ಟ್ರಪುರುಷ ಶ್ರೀ ಛತ್ರಪತಿ ಶಿವಾಜಿ ಜಯಂತಿಯನ್ನು ವಿವಿಧ ಕಡೆಗಳಲ್ಲಿ ಅದ್ದೂರಿಯಾಗಿ ಆಚರಿಸುತ್ತಾರೆ. ವಿವಿಧ ಪಕ್ಷಗಳಿಂದಲೂ ಜಯಂತಿ ಆಚರಿಸಲಾಗುತ್ತದೆ.
ಇನ್ನೂ ಹಳಿಯಾಳದಲ್ಲೇ ಜಿಲ್ಲಾ ಮಟ್ಟದ ಶಿವಾಜಿ ಜಯಂತಿ ಸರ್ಕಾರಿ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದ್ದು ಆ ದಿನ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾ ಮಟ್ಟದ ಅಧಿಕಾರಿಗಳು ಆಗಮಿಸುತ್ತಿದ್ದು ಸರ್ಕಾರದ ನಿರ್ದೇಶನದಂತೆ ಕಾರ್ಯಕ್ರಮ ನಡೆಯಲಿದೆ ಎಂದು ತಹಶೀಲ್ದಾರ್ ವಿದ್ಯಾಧರ ಗುಳಗುಳೆ ತಿಳಿಸಿದರು.
ಸರ್ಕಾರದ ಪ್ರೋಟೊಕಾಲ್ ಪ್ರಕಾರ ಶಿವಾಜಿ ಜಯಂತಿ ನಡೆಸುವಂತೆ ಬಿಜೆಪಿ ಪಕ್ಷದ ಮಾಜಿ ಅಧ್ಯಕ್ಷ ಶಿವಾಜಿ ನರಸಾನಿ ಆಗ್ರಹಿಸಿದರು.
ಮಾತಿನ ಚಕಮಕಿ :- ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್‍ನ ಪ್ರಮುಖ ಕೃಷ್ಣಾ ಶಹಾಪೂರಕರ ಮಾತನಾಡಿ ಪಟ್ಟಣದ ಮರಾಠಾ ಭವನದಲ್ಲಿ ಶಿವಾಜಿ ಜಯಂತಿ ಕಾರ್ಯಕ್ರಮ ನಡೆಸುವ ಕುರಿತು, ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು ಬಳಿಕ ಮಾತನಾಡಿದ ಅವರು ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್‍ನ ಜಿಲ್ಲಾಧ್ಯಕ್ಷ ಎನ್‍ಎಸ್ ಜಿವೋಜಿ ಅವರು ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ಅವರ ಮೇಲೆ ವಿನಾಃಕಾರಣ ಜಿಲ್ಲಾಧಿಕಾರಿಗಳಲ್ಲಿ ದೂರು ನೀಡಿದ್ದಾರೆ ಎಂದು ಆರೋಪಿಸಲು ಮುಂದಾದಾಗ ಬಿಜೆಪಿ ಪಕ್ಷದ ಮುಖಂಡರು, ಕೆಕೆಎಮ್‍ಪಿ ಜಿಲ್ಲಾಧ್ಯಕ್ಷ ಎನ್.ಎಸ್.ಜಿವೋಜಿ ಹಾಗೂ ಕೆಲವು ಸದಸ್ಯರಿಂದ ಭಾರಿ ವಿರೋಧ ವ್ಯಕ್ತವಾಗಿ ಮಾತಿನ ಚಕಮಕಿ ನಡೆಯಿತು. ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ತಹಶೀಲ್ದಾರ್ ಹಾಗೂ ಸಿಪಿಐ ಅವರು ಶಿವಾಜಿ ಜಯಂತಿ ಕಾರ್ಯಕ್ರಮ ಹೊರತು ಯಾವುದೇ ವಿಷಯ ಮಾತನಾಡದಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ಯಾವುದೇ ವೈಯಕ್ತಿಕ ವಿಷಯಗಳನ್ನು ಮಾತನಾಡುವ ಅವಶ್ಯಕತೆ ಇಲ್ಲಾ ರಾಷ್ಟ್ರಪುರುಷ ಶಿವಾಜಿ ಮಹಾರಾಜರ ಜಯಂತಿಯನ್ನು ಎಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸೊಣ ಎಂದು ಕರೆ ನೀಡಿದರು.
ಶುಕ್ರವಾರ ಮಿನಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಪುರಸಭೆ ಸದಸ್ಯರಾದ ಅನಿಲ ಚವ್ವಾಣ, ಚಂದ್ರು ಕಮ್ಮಾರ, ಪ್ರಮುಖರಾದ ನಾರಾಯಣ ಬೆಳಗಾಂವಕರ, ತಾನಾಜಿ, ತುಕಾರಾಮ ಪಟ್ಟೇಕರ, ಉಡಚಪ್ಪಾ ಬೋಬಾಟಿ, ಬಿಡಿ ಚೌಗಲೆ, ಚೂಡಪ್ಪಾ ಬೋಬಾಟಿ, ಅಪ್ಪಾರಾವ ಪೂಜಾರಿ, ಜೀಜಾಮಾತಾ ಮಹಿಳಾ ಸಂಘಟನೆಯ ಮಂಗಲಾ ಕಶೀಲಕರ, ಕರವೇಯ ಬಸವರಾಜ ಬೆಂಡಿಗೇರಿಮಠ ಮುಂತಾದವರು ಇದ್ದರು.

Leave a Comment