
ಹಳಿಯಾಳ:- ಪ್ರತಿಯೊಬ್ಬರು ರಸ್ತೆ, ಸಾರಿಗೆ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು, ಲೈಸನ್ಸ್, ವಿಮೆ ಇನ್ನಿತರ ದಾಖಲಾತಿಗಳನ್ನು ಮಾಡಿಸದೆ ವಾಹನಗಳನ್ನು ಚಲಾಯಿಸಲೆಬೇಡಿ ಎಂದು ಕರೆ ನೀಡಿರುವ ಉತ್ತರ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ(ಎಸ್ಪಿ) ಶಿವಪ್ರಕಾಶ ದೇವರಾಜ ಅವರು ನಮ್ಮ ಅಮೂಲ್ಯವಾದ ಜೀವಕ್ಕೆ ನಾವೆ ಹೊಣೆಗಾರರಿದ್ದೇವೆಂಬುದನ್ನು ಎಲ್ಲರೂ ಅರಿತುಕೊಳ್ಳಬೇಕೆಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಅವರು ಪಟ್ಟಣದ ಅಂಚಿನ ಹವಗಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಪೋಲಿಸ್ ಇಲಾಖೆ ಹಾಗೂ ಡಿಗ್ರಿ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಅಪರಾಧ ತಡೆ ಮಾಸಾಚರಣೆ ಹಾಗೂ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉಧ್ಘಾಟಿಸಿ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರ ಇಂದಿನ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ಭವಿಷ್ಯಕ್ಕೆ ವಿವಿಧ ನೂತನ ಯೋಜನೆಗಳೊಂದಿಗೆ ಪ್ರೋತ್ಸಾಹ ಧನ, ಇತರ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು ಯುವಕ-ಯುವತಿಯರು ಸರ್ಕಾರದ ಈ ಯೋಜನೆಗಳ ಲಾಭ ಪಡೆದು ಉಜ್ವಲ ಭವಿಷ್ಯ ಹೊಂದಬೇಕೆಂದರು.
ವಿಶ್ವದಲ್ಲೇ ಭಾರತ ದೇಶ ಯುವ ಶಕ್ತಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಯುವಕರು ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗಬೇಡಿ ಹಾಗೂ ಅತಿ ಆಸೆಗೆ ಬಿದ್ದು ಮೊಸಕ್ಕೂ ಎಡೆಯಾಗಬೇಡಿ ಎಂದು ಕರೆ ನೀಡಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ರಸ್ತೆ ಅಪಘಾತದಲ್ಲಿ ಸರಾಸರಿ ದಿನಕ್ಕೆ ಒಂದು ಸಾವು ಆಗುತ್ತಿದ್ದು ವರ್ಷಕ್ಕೆ 300 ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ ಶಿವಪ್ರಕಾಶ ಅವರು ಬ್ಯಾಂಕ್, ಕೆಲಸ ಕೊಡಿಸುವುದಾಗಿ, ವಸ್ತು ತಾಗಿರುವುದಾಗಿ, ಲಾಟರಿ ಹಣ, ಲಕ್ಕಿ ಡ್ರಾ ಸೇರಿದಂತೆ ಮೊಬೈಲ್ಗಳಿಗೆ ಬರುವ ವಂಚಕರ ಸುಳ್ಳು ಕರೆಗಳನ್ನು ಎಂದಿಗೂ ನಂಬಬೇಡಿ ಈ ಬಗ್ಗೆ ತೀರಾ ಜಾಗರುಕರಾಗಿರಿ. ಪಾಸವರ್ಡ, ಓಟಿಪಿ, ಸಿವಿವಿ ಇತರ ಗೌಪ್ಯ ಕೊಡಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಹಾಗೂ ಕೆಲಸ ಕೊಡಿಸುತ್ತೇವೆಂದು ಹಣ ಕೇಳುವವರ ಬಗ್ಗೆಯೂ ಎಚ್ಚರದಿಂದಿರಿ ಅಷ್ಟೇ ಅಲ್ಲದೇ ಇಂತಹ ಸಂಗತಿಗಳು ಕಂಡು ಬಂದರು ಸಹಿತ ಸನಿಹದ ಠಾಣೆಗಳಿಗೆ ತೆರಳಿ ದೂರು ನೀಡುವಂತೆ ಮನವಿ ಮಾಡಿದರು.

ಯುವತಿಯರು ಯಾರ ಮಾತಿಗೂ ಮರುಳಾಗಿ ಖಾಸಗಿ ಮಾಹಿತಿ ಹಾಗೂ ಪೊಟೊಗಳನ್ನು ಶೇರ್ ಮಾಡಬೇಡಿ. ಫೇಸಬುಕ್ನ ಫೆಕ್ ಪ್ರೋಫಾಯಿಲ್ಗಳ ಬಗ್ಗೆ ತೀರಾ ಎಚ್ಚರಿಕೆಯಿಂದಿರುವಂತೆಯೂ ತಿಳಿಸಿದ ಅವರು ಮಧ್ಯಪಾನ, ಧೂಮ್ರಪಾನ, ಗಾಂಜಾ, ಅಫಿಮ ನಂತಹ ದುಶ್ಚಟಗಳಿಂದ ದೂರವಿರಬೇಕು ಹಾಗೂ ಇದರಲ್ಲಿ ತೊಡಗಿರುವವರ ಕುರಿತು ಠಾಣೆಗೆ ಮಾಹಿತಿ ನೀಡಿ ಸಹಕರಿಸುವಂತೆಯೂ ಎಸ್ಪಿ ಶಿವಪ್ರಕಾಶ್ ಅವರು ಕರೆ ನೀಡಿದರು.
ಯುವಕರು ಪಾರ್ಟಿಗಳನ್ನು ಮಾಡುವುದು ಅದರಲ್ಲಿ ಧೂಮ್ರಪಾನ, ಮಧ್ಯಪಾನ ಮಾಡುವುದು ಜಾಸ್ತಿಯಾಗಿದೆ. ಮೊದಲು ಭವಿಷ್ಯ ಕಟ್ಟಿಕೊಂಡು ತಾವು ದುಡಿಯುವಾಗ ನಿಮ್ಮ ಸ್ವಂತ ಹಣದಿಂದ ಮಧ್ಯಪಾನ ಮಾಡಿ ಆಗ ಶ್ರಮ ಹಾಗೂ ಹಣದ ಬೆಲೆ ಗೊತ್ತಾಗುತ್ತದೆ ಎಂದು ಹೇಳಿದ ಎಸ್ಪಿ ಅವರು ತಂದೆ-ತಾಯಿ, ಪಾಲಕರ ಹಣದಲ್ಲಿ ಮೊಜು ಮಸ್ತಿ ಮಾಡದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಗಮನ ಕೊಡುವಂತೆ ಕಿವಿ ಮಾತು ಹೇಳಿದರು.
ದಾಂಡೇಲಿ ಡಿವೈಎಸ್ಪಿ ಮೋಹನಪ್ರಸಾದ, ಹಳಿಯಾಳ ಸಿಪಿಐ ಲೋಕಾಪುರ ಅವರು ಮಾತನಾಡಿ ರಸ್ತೆ ಸುಕರ್ಷತಾ ನಿಯಮಗಳನ್ನು ಪಾಲಿಸುವಂತೆ, ಕಡ್ಡಾಯವಾಗಿ ವಾಹನ ಚಾಲನಾ ಪರವಾನಿಗೆ ಪಡೆಯಬೇಕು, ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವಂತೆ ಕರೆ ನೀಡಿದರು.
ವೇದಿಕೆಯ ಮೇಲೆ ಸಿಪಿಐ ರಾಮಚಂದ್ರ ನಾಯ್ಕ, ಡಿಗ್ರಿ ಕಾಲೇಜ್ ಪ್ರಾಂಶುಪಾಲ ಚಂದ್ರಶೇಖರ ಲಮಾಣಿ, ದೈಹಿಕ ಶೀಕ್ಷಣ ನಿರ್ದೇಶಕಿ ಡಾ.ರೇಖಾ ಎಮ್.ಆರ್, ಪಿಎಸ್ಐಗಳಾದ ಯಲ್ಲಾಲಿಂಗ ಕುನ್ನೂರು, ರಾಜಕುಮಾರ ಇತರರು ಇದ್ದರು. ಕಾಲೇಜಿನ ಪ್ರೊಪೆಸರ್ಗಳಾದ ಪರಮಾನಂದ ದಾಸರ ಹಾಗೂ ಮಹಾದೇವ ಹಂಚಿನಮನಿ ಕಾರ್ಯಕ್ರಮ ನಿರ್ವಹಿಸಿದರು.

Leave a Comment